ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕರಾವಳಿ ಮಾದರಿ ಸಂಘಟನೆ–ಗುರಿ 224’

ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ: ನಳಿನ್‌ ಕುಮಾರ್‌ ಕಟೀಲ್‌ ಹೇಳಿಕೆ
Last Updated 15 ಅಕ್ಟೋಬರ್ 2020, 21:17 IST
ಅಕ್ಷರ ಗಾತ್ರ

ಮೈಸೂರು: ಕರಾವಳಿ ಕಲ್ಪನೆಯ ಮಾದರಿಯಲ್ಲಿ ರಾಜ್ಯದಾದ್ಯಂತ ಪಕ್ಷ ಸಂಘಟನೆ ಮಾಡಿ, 224 ವಿಧಾನಸಭಾ ಕ್ಷೇತ್ರ ಗೆಲ್ಲಲು ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ಗುರುವಾರ ಇಲ್ಲಿ ನಡೆದ ರಾಜ್ಯ ಪದಾಧಿಕಾರಿಗಳ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ಕರಾವಳಿ ಮಾದರಿ ಎಂದರೆ ಹತ್ತಾರು ಕಲ್ಪನೆಗಳಿದ್ದು, ’ಬೆಂಕಿ ಹಾಕುವುದು’ ಎಂದು ಕೆಲವರು ಟೀಕೆ ಮಾಡುತ್ತಾರೆ. ಆದರೆ, ಸಂಘಟನೆಯ ಆಧಾರದಲ್ಲಿ ಮತಗಟ್ಟೆಯಿಂದ ಗಟ್ಟಿ ಮಾಡಿ ಮತದಾರರ ಮನಮನದಲ್ಲಿ ಕಮಲ ಅರಳಿಸುವುದೇ ಕರಾವಳಿಯ ಕಲ್ಪನೆ. ಮೈಸೂರಿನಿಂದ ಈ ಯಾತ್ರೆ ಆರಂಭವಾಗಿದ್ದು, ದುಷ್ಟಶಕ್ತಿ ನಿವಾರಣೆ ಮಾಡಿ ಸದೃಢ ಭಾರತ ನಿರ್ಮಿಸುವ ಗುರಿಯನ್ನುಬಿಜೆಪಿ ಹೊಂದಿದೆ’ ಎಂದು ಹೇಳಿದರು.

‘ಪರಿಶಿಷ್ಟ ಜಾತಿಗೆ ಸೇರಿದ ತಮ್ಮದೇ ಪಕ್ಷದ ಶಾಸಕನ ಮನೆ ಸುಡುವ ಕೆಲಸವನ್ನು ಕಾಂಗ್ರೆಸ್‌ ಮುಖಂಡರೇ ಮಾಡುತ್ತಿದ್ದಾರೆ. ಕೃತ್ಯ ಎಸಗಿದವರನ್ನು ಬಂಧಿಸಿ ಎಂದು ಹೇಳುವತಾಕತ್ತು ಅವರಿಗಿಲ್ಲ.ಪಕ್ಷದ ಶಾಸಕನನ್ನೂರಕ್ಷಿಸುವ ಶಕ್ತಿ ಇಲ್ಲದ ಕಾಂಗ್ರೆಸ್‌ಗೆ ಚುನಾವಣೆ ಎದುರಿಸುವ ಧೈರ್ಯವೂ ಇಲ್ಲ’ ಎಂದು ಹರಿಹಾಯ್ದರು.

ಉಪಚುನಾವಣೆ ಹಾಗೂ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯ ಸವಾಲನ್ನು ಮೆಟ್ಟಿನಿಂತು, ಆರೂ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ. ಗ್ರಾಮ ಪಂಚಾಯಿತಿ ಚುನಾವಣೆಗೂ ಸಿದ್ಧತೆ ನಡೆದಿದೆ ಎಂದು ನುಡಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ‘ತಡೆಯೊಡ್ಡುವ, ವಿಳಂಬಿಸುವ ಹಾಗೂ ದಾರಿ ತಪ್ಪಿಸುವ ಆಡಳಿತ ಮಂತ್ರ ಕಾಂಗ್ರೆಸ್‌ ಪಕ್ಷದ್ದಾಗಿದ್ದರೆ, ಅಭಿವೃದ್ಧಿ ಮಂತ್ರ ಬಿಜೆಪಿಯದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಪರಿವರ್ತನೆಯ ಯುಗ ಆರಂಭವಾಗಿದೆ. ಕಳ್ಳರಿಗೆ ತಿನ್ನಲು ಆಗದ ವ್ಯವಸ್ಥೆ ರೂಪಿಸಲಾಗಿದೆ’ ಎಂದರು.

‘ಅಯೋಧ್ಯೆ ಹೋರಾಟ ಐದುಶತಮಾನಗಳದ್ದು. ಭಾರತದ ಅಸ್ಮಿತೆಯ ಪ್ರತೀಕ ರಾಮಮಂದಿರ. ಆದರೆ, ಕೆಲವರು ರಾಮನ ಹೆಸರು ಇಟ್ಟುಕೊಂಡು ಕೂಡ ರಾಜಕೀಯ ಕಾರಣಗಳಿಗಾಗಿ ಮಂದಿರ ನಿರ್ಮಾಣ ಬೆಂಬಲಿಸಲಿಲ್ಲ’ ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಪಕ್ಷದ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಸಂಘಟನಾ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT