ಬುಧವಾರ, ನವೆಂಬರ್ 25, 2020
25 °C
ವಿವಿಧ ಸಂಘಟನೆಗಳಿಂದ ಕಾರ್ಯಕ್ರಮ ಆಯೋಜನೆ, ಮುಖಂಡರು ಭಾಗಿ

ಗೊ.ರು.ಪರಮೇಶ್ವರಪ್ಪ ಅವರಿಗೆ ಶ್ರದ್ಧಾಂಜಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಈಚೆಗೆ ನಿಧನರಾದ ಗೊ.ರು.ಪರಮೇಶ್ವರಪ್ಪ ಅವರಿಗೆ ಜೆಎಸ್‌ಎಸ್‌ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಬುಧವಾರ ಸಂಜೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಅಖಿಲ ಭಾರತ ವೀರಶೈವ ಮತ್ತು ಲಿಂಗಾಯತ ಮಹಾಸಭಾ, ಶರಣ ಸಾಹಿತ್ಯ ಪರಿಷತ್ತಿನ ಗ್ರಾಮಾಂತರ ಮತ್ತು ನಗರ ಘಟಕ, ಕದಳಿ ಮಹಿಳಾ ವೇದಿಕೆ, ಬಸವ ಬಳಗಗಳ ಒಕ್ಕೂಟ, ರೋಟರಿ ಮೈಸೂರು ಉತ್ತರ, ನಗುಮುಖ ಗೆಳೆಯರ ಬಳಗದ ವತಿಯಿಂದ ಈ ಕಾರ್ಯಕ್ರಮ ನಡೆಯಿತು.

ಸಾಹಿತಿ ಗೊ.ರು.ಚನ್ನಬಸಪ್ಪ ಮಾತನಾಡಿ, ‘ನಾನು ಹುಟ್ಟಿನಲ್ಲಿ ಹಿರಿಯ. ಪರಮೇಶ್ವರಪ್ಪ ಸಾವಿನಲ್ಲಿ ಹಿರಿಯನಾದ. ನಮ್ಮಿಬ್ಬರ ನಡುವೆ ದಾಯಾದಿ ಮತ್ಸರ ಇರಲಿಲ್ಲ. ಆತನನ್ನು ಬಿಟ್ಟು ಬದುಕುವುದು ಕಷ್ಟ’ ಎಂದು ಭಾವುಕರಾದರು.

ಸಾಹಿತಿ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, ‘ಗೊ.ರು.ಪರಮೇಶ್ವರಪ್ಪ ಎಲ್ಲರೊಂದಿಗೂ ಸ್ನೇಹಮಯಿಯಾಗಿ ನಡೆದುಕೊಳ್ಳುತ್ತಿದ್ದರು. ಇವರದು ಅತ್ಯಂತ ಸರಳ ವ್ಯಕ್ತಿತ್ವ’ ಎಂದು ಶ್ಲಾಘಿಸಿದರು.

ಮೃದುತ್ವದಿಂದ ಇಡೀ ಜಗತ್ತನ್ನೇ ಗೆಲ್ಲಬಹುದು ಎಂಬುದನ್ನು ಗೊ.ರು.ಪ ತೋರಿಸಿಕೊಟ್ಟರು. ತಮ್ಮ ಜೀವತಾವಧಿಯಲ್ಲಿ ಶರಣರ ತತ್ವಗಳನ್ನು ಅಳವಡಿಸಿಕೊಂಡು ಆದರ್ಶವಾಗಿದ್ದರು ಎಂದು ಹೇಳಿದರು.

ಸುತ್ತೂರು ಮಠದ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಮೈಸೂರಿನಲ್ಲಿ ಅತ್ಯುತ್ತಮ ಕಾರ್ಯಕ್ರಮ ನೀಡಿದವರು ಗೊ.ರು.ಪರಮೇಶ್ವರಪ್ಪ. ವೀರಶೈವ ಸಮುದಾಯದ ವಿವಿಧ ಸಂಘಟನೆಗಳನ್ನು ಒಟ್ಟುಗೂಡಿಸಿ ಒಂದೇ ಸೂರಿನಡಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ, ಯಶಸ್ವಿಯಾದರು’ ಎಂದು ತಿಳಿಸಿದರು.

ಗಾವುಡಗೆರೆ ಗುರುಲಿಂಗ ಜಂಗಮ ಮಠದ ನಟರಾಜ ಸ್ವಾಮೀಜಿ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಕಾನ್ಯ ಶಿವಮೂರ್ತಿ, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಜಯಗೌಡ, ಸಾಹಿತಿ ಜಯಪ್ಪ ಹೊನ್ನಾಳಿ, ಬಿಜೆಪಿ ಮುಖಂಡ ತೋಂಟದಾರ್ಯ, ಚಿಂತಕ ಮ.ಗು.ಸದಾನಂದಯ್ಯ, ಮೈಸೂರು ವಿ.ವಿಯ ಸಂದರ್ಶಕ ಪ್ರಾಧ್ಯಾಪಕ ಸಿ.ನಾಗಣ್ಣ, ಮುಖಂಡರಾದ ಎಸ್.ಜಿ.ಶಿವಶಂಕರ್, ಕೆ.ವಿ.ಮಲ್ಲೇಶ್, ಶೈಲಜಾ, ಮೊರಬದ ಮಲ್ಲಿಕಾರ್ಜುನ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.