ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ತಡರಾತ್ರಿ ದಿಢೀರ್‌ ಬೆಳವಣಿಗೆ, ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ

ಬಿಜೆಪಿ ಜತೆಗಿನ ಹೊಂದಾಣಿಕೆಗೆ ತೆರೆ
Last Updated 22 ಫೆಬ್ರುವರಿ 2019, 20:18 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿ ಜತೆಗಿನ ಮೂರು ವರ್ಷಗಳ ಮೈತ್ರಿ ಮುರಿದು ಕಾಂಗ್ರೆಸ್‌ ಜತೆ ಅಧಿಕಾರ ಹಂಚಿಕೊಳ್ಳಲು ಜೆಡಿಎಸ್‌ ನಿರ್ಧರಿಸಿದೆ.

ಶುಕ್ರವಾರ ರಾತ್ರಿ ನಡೆದ ದಿಢೀರ್‌ ರಾಜಕೀಯ ಬೆಳವಣಿಗೆಯಿಂದ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಬಲ ಬಂದರೆ, ಬಿಜೆಪಿಗೆ ಉಪಾಧ್ಯಕ್ಷ ಸ್ಥಾನ ಕೈತಪ್ಪಿದೆ. ಬಿಜೆಪಿ ಜತೆಗೆ ಮೈತ್ರಿ ಮುಂದುವರಿಯಲಿದೆ ಎಂದು ಶುಕ್ರವಾರ ಮಧ್ಯಾಹ್ನದವರೆಗೂ ಹೇಳುತ್ತಿದ್ದ ಜೆಡಿಎಸ್‌ನ ಸ್ಥಳೀಯ ನಾಯಕರಿಗೆ ಮುಖಭಂಗ ಉಂಟಾಗಿದೆ.

ಜಿಲ್ಲಾ ಪಂಚಾಯಿತಿಯಲ್ಲಿ ಮೂರು ವರ್ಷಗಳಿಂದ ಬಿಜೆಪಿ–ಜೆಡಿಎಸ್‌ ಆಡಳಿತ ನಡೆಸುತ್ತಾ ಬಂದಿದೆ. ಇನ್ನುಳಿದ ಎರಡು ವರ್ಷ ಜೆಡಿಎಸ್‌–ಕಾಂಗ್ರೆಸ್‌ ಅಧಿಕಾರ ನಡೆಸಲಿದೆ. ಇದೀಗ ನಡೆದಿರುವ ಒಪ್ಪಂದದಂತೆ ಮುಂದಿನ ಒಂದು ವರ್ಷದ ಅವಧಿಗೆ ಜೆಡಿಎಸ್‌ಗೆ ಅಧ್ಯಕ್ಷ ಸ್ಥಾನ ಲಭಿಸಲಿದೆ. ಆದ್ದರಿಂದ ಶನಿವಾರ ನಡೆಯಲಿರುವ ಚುನಾವಣೆಯಲ್ಲಿ ಪರಿಮಳಾ ಶ್ಯಾಂ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತ.

ಅಧ್ಯಕ್ಷ ಸ್ಥಾನ ಮೀಸಲು ‘ಪ್ರವರ್ಗ ಎ’ ಮಹಿಳೆಗೆ ಮೀಸಲಾಗಿದ್ದು, ಈ ಮೀಸಲಾತಿಯಡಿ ಜೆಡಿಎಸ್‌ನಲ್ಲಿ ಪರಿಮಳಾ ಮಾತ್ರ ಇದ್ದಾರೆ. ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನು ಕಾಂಗ್ರೆಸ್‌ ಪಕ್ಷ ಶನಿವಾರ ಬೆಳಿಗ್ಗೆ ತೀರ್ಮಾನಿಸಲಿದೆ.

ತಡರಾತ್ರಿ ಸುದ್ದಿಗೋಷ್ಠಿ: ಸಚಿವರಾದ ಸಾ.ರಾ.ಮಹೇಶ್‌ ಮತ್ತು ಜಿ.ಟಿ.ದೇವೇಗೌಡ ಅವರು ‘ಬಿಜೆಪಿ ಜತೆ ಮೈತ್ರಿ ಮುಂದುವರಿಯಲಿದೆ’ ಎಂದು ಹೇಳುತ್ತಲೇ ಬಂದಿದ್ದರು. ಆದರೆ ಸಾ.ರಾ.ಮಹೇಶ್‌ ಅವರು ಶುಕ್ರವಾರ ತಡರಾತ್ರಿ ಸುದ್ದಿಗೋಷ್ಠಿ ನಡೆಸಿ, ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂ ಡಿರುವ ವಿಚಾರ ತಿಳಿಸಿದರು.

‘ಬಿಜೆಪಿ ಜತೆ ಮೈತ್ರಿ ಮುಂದುವರಿಸಿಕೊಂಡು ಹೋಗಬೇಕು ಎಂಬುದು ನನ್ನ ಹಾಗೂ ಸ್ಥಳೀಯ ಮುಖಂಡರ ತೀರ್ಮಾನವಾಗಿತ್ತು. ಆದರೆ ಕಾಂಗ್ರೆಸ್‌ ಜತೆ ಕೈಜೋಡಿಸುವಂತೆ ಹೈಕಮಾಂಡ್‌ ನಿರ್ದೇಶನ ನೀಡಿದೆ’ ಎಂದು ಹೇಳಿದರು.

‘ಹಿಂದೆ ಬಿಜೆಪಿ ಜತೆಗೆ ಒಪ್ಪಂದ ಮಾಡಿಕೊಂಡಾಗ ಪರಿಸ್ಥಿತಿ ಬೇರೇಯೇ ಇತ್ತು. ಅಭಿವೃದ್ಧಿಯ ದೃಷ್ಟಿಯಿಂದ ಕಾಂಗ್ರೆಸ್‌ ಜತೆ ಹೋಗಬೇಕು ಎಂದು ಹೈಕಮಾಂಡ್‌ ಸ್ಪಷ್ಟವಾಗಿ ತಿಳಿಸಿದೆ. ವರಿಷ್ಠ ತೀರ್ಮಾನಕ್ಕೆ ಬದ್ಧರಾಗಿದ್ದೇವೆ’ ಎಂದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ ರಾವ್ ಅವರು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ಜತೆ ಮಾತುಕತೆ ನಡೆಸಿದ ಬಳಿಕ ಈ ತೀರ್ಮಾನ ತೆಗೆದು ಕೊಳ್ಳಲಾಗಿದೆ ಎಂದು ವಿವರಿಸಿದರು.

ಬಿಜೆಪಿಗೆ ದ್ರೋಹ ಬಗೆದಂತೆ ಆಗಿಲ್ಲವೇ ಎಂಬ ಪ್ರಶ್ನೆಗೆ, ‘ಬಿಜೆಪಿ ಜತೆಗೆ ಆಡಳಿತ ನಡೆಸಿದ ಸಂದರ್ಭದಲ್ಲಿ ಅವರ ಸಂಖ್ಯೆಗೆ ಅನುಗುಣವಾಗಿ ಉಪಾಧ್ಯಕ್ಷ ಸ್ಥಾನ ಮತ್ತು ಇತರ ಸ್ಥಾನಮಾನಗಳನ್ನು ಕೊಟ್ಟಿದ್ದೇವೆ. ರಾಜಕೀಯದಲ್ಲಿ ಏನು ಬೇಕಾದರೂ ನಡೆಯುತ್ತದೆ’ ಎಂದು ಉತ್ತರಿಸಿದರು.

ಕಾಂಗ್ರೆಸ್‌ಗೆ ಕೊನೆ ಅವಧಿಯ ಅಧ್ಯಕ್ಷ ಸ್ಥಾನ: ಜೆಡಿಎಸ್‌–ಕಾಂಗ್ರೆಸ್‌ ನಡುವಿನ ಮೈತ್ರಿ ಒಪ್ಪಂದದಂತೆ ಮುಂದಿನ ಒಂದು ವರ್ಷದ ಅವಧಿಗೆ ಅಧ್ಯಕ್ಷ ಸ್ಥಾನ ಜೆಡಿಎಸ್‌ಗೆ ಹಾಗೂ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್‌ಗೆ ಲಭಿಸಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಕಾಂಗ್ರೆಸ್‌ ಮುಖಂಡ ಎಚ್‌.ಪಿ.ಮಂಜುನಾಥ್‌ ತಿಳಿಸಿದರು.

ಕೊನೆಯ ಒಂದು ವರ್ಷದ ಅವಧಿಗೆ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ಗೂ, ಉಪಾಧ್ಯಕ್ಷ ಸ್ಥಾನ ಜೆಡಿಎಸ್‌ಗೂ ಸಿಗಲಿದೆ ಎಂದು ಹೇಳಿದರು.

ರೆಸಾರ್ಟ್‌ನಲ್ಲಿ ವಾಸ್ತವ್ಯ: ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಯಾಗುವ ಬಗ್ಗೆ ಶುಕ್ರವಾರ ಸಂಜೆಯವರೆಗೂ ಖಚಿತತೆ ಇರಲಿಲ್ಲ. ಇದರಿಂದ ತನ್ನ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಜೆಡಿಎಸ್‌ ರೆಸಾರ್ಟ್ ಮೊರೆ ಹೋಗಿತ್ತು. ಶುಕ್ರವಾರ ಸಂಜೆ ಎಲ್ಲ ಸದಸ್ಯರು ಕುಶಾಲನಗರದ ರೆಸಾರ್ಟ್‌ಗೆ ತೆರಳಿದ್ದಾರೆ. ರಾತ್ರಿ ಅಲ್ಲೇ ವಾಸ್ತವ್ಯ ಹೂಡಿ ಶನಿವಾರ ಬೆಳಿಗ್ಗೆ ಮೈಸೂರಿಗೆ ಬರಲಿದ್ದಾರೆ.

ಕೊನೆಯ ಕ್ಷಣದವರೆಗೂ ಕಾಯುತ್ತೇವೆ: ‘ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡು ಆಡಳಿತ ನಡೆಸಲು ತಯಾರಿದ್ದೇವೆ. ಅದಕ್ಕಾಗಿ ನಾವು ಶನಿವಾರ ಬೆಳಿಗ್ಗೆ 8 ಗಂಟೆಯವರೆಗೂ ಕಾಯಲು ಸಿದ್ಧ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ.ವಿಜಯಕುಮಾರ್‌ ತಿಳಿಸಿದ್ದರು.

ಕೋಮುವಾದಿ ಶಕ್ತಿಯನ್ನು ದೂರವಿಡಬೇಕು ಎಂಬುದು ನಮ್ಮ ಉದ್ದೇಶ. ರಾಜ್ಯದಲ್ಲಿ ಕಾಂಗ್ರೆಸ್‌ ಇದೇ ಉದ್ದೇಶದಿಂದ ಜೆಡಿಎಸ್‌ಗೆ ಬೆಂಬಲ ನೀಡಿದೆ. ಜಿಲ್ಲಾ ಪಂಚಾಯಿತಿಯಲ್ಲೂ ಅದೇ ರೀತಿ ಮೈತ್ರಿ ಆಗಬೇಕು ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT