ಮಂಗಳವಾರ, ಆಗಸ್ಟ್ 16, 2022
21 °C
ಪಾಲಿಕೆ ಆಯುಕ್ತರ ಮನವಿಯನ್ನು ಗಣನೆಗೆ ತೆಗೆದುಕೊಳ್ಳದ ಸದಸ್ಯರು

ಕಟ್ಟಡ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ತಾತ್ವಿಕ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕಟ್ಟಡ ತ್ಯಾಜ್ಯ ನಿರ್ವಹಣಾ ಘಟಕದ ಸ್ಥಾಪನೆಗೆ ಇಲ್ಲಿ ಸೋಮವಾರ ನಡೆದ ಪಾಲಿಕೆಯ ಕೌನ್ಸಿಲ್ ಸಭೆ ತಾತ್ವಿಕ ಒಪ್ಪಿಗೆ ನೀಡಿತು. ಆದರೆ, ಈ ಘಟಕದ ಜವಾಬ್ದಾರಿಯನ್ನು ಸುಸ್ಥಿರ ಟ್ರಸ್ಟ್‌ಗೆ ನೀಡಲು ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಮತ್ತೊಮ್ಮೆ ಈ ಯೋಜನೆಗೆ ಕಂಪನಿಗಳನ್ನು ಆಹ್ವಾನಿಸಲು ಸಭೆ ನಿರ್ಣಯಿಸಿತು.

ಪಾಲಿಕೆ ಆಯುಕ್ತ ಗುರುದತ್ತ ಹೆಗೆಡೆ ಮಾತನಾಡಿ, ‘ಈ ಯೋಜನೆಯಿಂದ ಸ್ವಚ್ಛ ಸರ್ವೇಕ್ಷಣೆಯಲ್ಲಿ 50 ಅಂಕ ಗಳಿಸಲು ಸಾಧ್ಯವಾಗುತ್ತದೆ. ಮೈಸೂರಿಗೆ ಪ್ರತಿಸ್ಪರ್ಧೆ ಒಡ್ಡುತ್ತಿರುವ ಭೋಪಾಲ್ ಹಾಗೂ ಇಂದೋರ್‌ ನಗರಗಳು ಈ ಯೋಜನೆ ಅಳವಡಿಸಿಕೊಳ್ಳುತ್ತಿವೆ. ನವದೆಹಲಿಯಲ್ಲಿ ಈಗಾಗಲೇ ಇದು ಕಾರ್ಯಾರಂಭ ಮಾಡಿದೆ. ಒಂದು ವೇಳೆ ತಡ ಮಾಡಿದರೆ ಸ್ವಚ್ಛ ಸರ್ವೇಕ್ಷಣೆಯಲ್ಲಿ ಸಾಂಸ್ಕೃತಿಕ ನಗರಿ ಹಿಂದೆ ಬೀಳುವುದು ನಿಶ್ಚಿತ’ ಎಂದು ಮಾಹಿತಿ ನೀಡಿದರು.

ಯೋಜನೆಗೆ ಪಾಲಿಕೆಯು ಹೂಡಿಕೆ ಮಾಡುವ ಅಗತ್ಯ ಇಲ್ಲ. ಸುಸ್ಥಿರ ಟ್ರಸ್ಟ್‌ಗೆ ಭೂಮಿ, ನೀರು, ವಿದ್ಯುತ್ ಹಾಗೂ ನಿತ್ಯ 100 ಟನ್ ಕಟ್ಟಡ ತ್ಯಾಜ್ಯ ನೀಡಬೇಕು. ಕಟ್ಟಡ ತ್ಯಾಜ್ಯವನ್ನು ಸೂಯೆಜ್‌ಫಾರಂಗೆ ಹಾಕುವ ಬದಲು ಘಟಕಕ್ಕೆ ಹಾಕಿದರೆ ಸಾಕಾಗಿದೆ. ಇದರಿಂದ ಪಾಲಿಕೆಗೆ ಕನಿಷ್ಠ ಎಂದರೂ ವಾರ್ಷಿಕ ₹ 10ರಿಂದ ₹ 12 ಲಕ್ಷ ಉಳಿತಾಯವಾಗುತ್ತದೆ ಎಂದು ಹೇಳಿದರು.‌

ಇಷ್ಟು ಮಾಹಿತಿ ನೀಡಿದರೂ ಪಾಲಿಕೆ ಸದಸ್ಯರಲ್ಲಿ ಯೋಜನೆ ಕುರಿತು ಒಮ್ಮತ ಮೂಡಲಿಲ್ಲ. ಕಳೆದೆರಡು ಸಭೆಗಳಲ್ಲಿಯಂತೆ ಈ ಬಾರಿಯೂ ವಿಷಯವನ್ನು ಮುಂದಕ್ಕೆ ಹಾಕಲು ಮೇಯರ್ ತಸ್ನೀಂ ಯತ್ನಿಸಿದಾಗ ಸಭೆಯಲ್ಲಿ ಗದ್ದಲ ಏರ್ಪಟ್ಟಿತು. ಮೇಯರ್ ವೇದಿಕೆಯ ಸಮೀಪಕ್ಕೆ ನುಗ್ಗಿದ ಮ.ವಿ.ರಾಮಪ್ರಸಾದ್ ಯೋಜನೆಗೆ ಒಪ್ಪಿಗೆ ನೀಡಲೇಬೇಕು ಎಂದು ಪಟ್ಟು ಹಿಡಿದರು. ಸುಬ್ಬಯ್ಯ, ಪ್ರೇಮಾ, ಅಯೂಬ್‌ಖಾನ್, ಎಸ್‌ಬಿಎಂ ಮಂಜು, ಬಿ.ವಿ.ಮಂಜುನಾಥ್ ಸೇರಿದಂತೆ ಹಲವು ಸದಸ್ಯರು ಒಪ್ಪಿಗೆ ನೀಡಲು ಒತ್ತಾಯಿಸಿದರು. ನಂತರ, ಸಾರ್ವಜನಿಕವಾಗಿ ಪ್ರಕಟಣೆ ಹೊರಡಿಸಿ ಇತರೆ ಕಂಪನಿಗಳು ಬಾರದೇ ಹೋದರೆ ಸುಸ್ಥಿರ ಟ್ರಸ್ಟ್‌ಗೆ ನೀಡಬೇಕು ಎನ್ನುವ ಕೆ.ವಿ.ಶ್ರೀಧರ್ ಸೇರಿದಂತೆ ಇತರೆ ಸದಸ್ಯರ ಅಭಿಪ್ರಾಯಕ್ಕೆ ಮನ್ನಣೆ ನೀಡಿದ ಮೇಯರ್ ತಾತ್ವಿಕ ಒಪ್ಪಿಗೆ ನೀಡಿ, ಸಾರ್ವಜನಿಕವಾಗಿ ಕಟ್ಟಡ ತ್ಯಾಜ್ಯ ನಿರ್ವಹಣೆ ಮಾಡಲು ಕಂಪನಿಗಳನ್ನು ಆಹ್ವಾನಿಸಲು ಸೂಚಿಸಿದರು.

57ನೇ ವಾರ್ಡಿನ ಉದಯರವಿ ಮುಖ್ಯರಸ್ತೆಯಲ್ಲಿರುವ ಉದ್ಯಾನಕ್ಕೆ ದಿವಂಗತ ಎಚ್.ಎಸ್.ಮಹದೇವಪ್ರಸಾದ್ ಅವರ ಹೆಸರಿಡಲು ಸಭೆ ಒಪ್ಪಿಗೆ ನೀಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು