ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡು: ಉಚ್ಚಗಣಿ ಗ್ರಾಮದಲ್ಲಿ ತಾತ್ಕಾಲಿಕ ದೇಗುಲ ನಿರ್ಮಾಣ

ಮಹದೇವಮ್ಮ ದೇವಾಲಯವಿದ್ದ ಸ್ಥಳದಲ್ಲೇ ಶೆಡ್‌; ದೇವರಿಗೆ ಪೂಜೆ
Last Updated 12 ಸೆಪ್ಟೆಂಬರ್ 2021, 4:51 IST
ಅಕ್ಷರ ಗಾತ್ರ

ನಂಜನಗೂಡು/ ಹಂಪಾಪುರ: ತಾಲ್ಲೂಕಿನ ಉಚ್ಚಗಣಿ ಗ್ರಾಮದಲ್ಲಿ ಮಹದೇವಮ್ಮ ದೇವಾಲಯವನ್ನು ತೆರವುಗೊಳಿಸಿದ್ದ ಸ್ಥಳದಲ್ಲೇ ತಾತ್ಕಾಲಿಕ ದೇವಾಲಯ ನಿರ್ಮಿಸಿರುವ ಗ್ರಾಮಸ್ಥರು, ಶುಕ್ರವಾರ ಪೂಜಾ ಕಾರ್ಯ ನಡೆಸಿದರು. ಹೋಮವೂ ನಡೆಯಿತು.

ಸೆ.8ರಂದು ಮುಂಜಾನೆ ತಾಲ್ಲೂಕು ಆಡಳಿತದ ಅಧಿಕಾರಿಗಳು ಪೊಲೀಸರ ನೆರವಿನೊಂದಿಗೆ ಮಹದೇವಮ್ಮ ದೇವಾಲಯವನ್ನು ಜೆಸಿಬಿ ಯಂತ್ರಗಳ ಮೂಲಕ ನೆಲಸಮಗೊಳಿಸಿದ್ದರು. ದೇವರ ಮೂರ್ತಿಗಳನ್ನು ಸ್ಥಳೀಯರ ವಶಕ್ಕೆ ಒಪ್ಪಿಸಿದ್ದರು.

ತೆರವು ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದ ತಹಶೀಲ್ದಾರ್ ಮೋಹನ ಕುಮಾರಿ, ‘2010ರಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅಫಿಡವಿಟ್ ಆಧರಿಸಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತಿದ್ದ ದೇವಾಲಯ ವನ್ನು ತೆರವುಗೊಳಿಸಲಾಗಿದೆ’ ಎಂದು ತಿಳಿಸಿದ್ದರು.

ಬಳಿಕ ಹುಚ್ಚಗಣಿ, ಹರದನಹಳ್ಳಿ, ಇಬ್ಜಾಲ, ಕಪ್ಪಸೋಗೆ, ಚಂದ್ರವಾಡಿ, ಕಣೇನೂರು ಗ್ರಾಮಗಳ ಗ್ರಾಮಸ್ಥರು ಸಭೆ ಸೇರಿ, ದೇವಾಲಯವನ್ನು ರಾತ್ರೋರಾತ್ರಿ ತೆರವುಗೊಳಿಸಿದ ಅಧಿಕಾರಿಗಳ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ದೇಗುಲವನ್ನು ಪುನರ್ ನಿರ್ಮಾಣ ಮಾಡುವ ಸಂಕಲ್ಪದೊಂದಿಗೆ, ಅದೇ ಸ್ಥಳದಲ್ಲಿ ದೇವರ ಮೂರ್ತಿಯನ್ನು ಪುನರ್ ಪ್ರತಿಷ್ಠಾಪಿಸಿ ಪೂಜೆಯನ್ನು ಪುನರಾರಂಭಿಸಿದರು.

ದೇಗುಲವನ್ನು ಪುನರ್ ನಿರ್ಮಿಸುವ ಗ್ರಾಮಸ್ಥರ ನಿರ್ಧಾರಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ. ಗ್ರಾಮದ ನಿವಾಸಿ ಸಂಗಮೇಶ್ ಮತ್ತು ಭಾಗ್ಯಾ ದಂಪತಿ ದೇವಾಲಯಕ್ಕೆ 5 ಗುಂಟೆ ಜಾಗ ನೀಡಲು ಒಪ್ಪಿಗೆ ಸೂಚಿಸಿದ್ದಾರೆ.

ಹಿಂದೂ ಜಾಗರಣಾ ವೇದಿಕೆ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಶಾಸಕ ಬಿ.ಹರ್ಷವರ್ಧನ್ ಗ್ರಾಮಕ್ಕೆ ಭೇಟಿ ನೀಡಿ, ದೇವಾಲಯ ಪುನರ್ ನಿರ್ಮಾಣಕ್ಕೆ ಬೆಂಬಲ ಸೂಚಿಸಿದ್ದಾರೆ. ಶಾಸಕರ ಪ್ರದೇಶಾಭಿವೃದ್ಧಿಯಿಂದ ಅನುದಾನ ನೀಡುವುದಾಗಿ ಶಾಸಕರು ಭರವಸೆ ನೀಡಿದ್ದಾರೆ.

ಭಕ್ತರ ನೆರವಿನೊಂದಿಗೆ ಭವ್ಯವಾದ ಮಹದೇವಮ್ಮ ದೇವಾಲಯ ನಿರ್ಮಿಸಲು ಗ್ರಾಮಸ್ಥರು ಮುಂದಾಗಿದ್ದಾರೆ.

‘ಚೋಳರ ಕಾಲದ ದೇವಾಲಯ’

‘ದೇವಾಲಯ ಚೋಳರ ಕಾಲದ್ದೋ, ಇಲ್ಲವೋ ಎಂಬುದನ್ನು ಪುರಾತತ್ವ ಇಲಾಖೆ ಅಧಿಕಾರಿಗಳು ನಿರ್ಧರಿಸಿದ ನಂತರ ನೆಲಸಮಗೊಳಿಸಬೇಕಿತ್ತು’ ಎಂದು ಗ್ರಾಮದ ಮುಖಂಡ ನರಸಿಂಹೇಗೌಡ ಹೇಳಿದರು.

‘ದೇವಸ್ಥಾನದಲ್ಲಿ ಚೋಳರ ಕಾಲದ ವೀರಗಲ್ಲು, ಮಾಸ್ತಿಗಲ್ಲುಗಳಿವೆ. ಅವುಗಳನ್ನೂ ಪರಿಶೀಲಿಸಿಲ್ಲ. ಾ ಬಗ್ಗೆ ಕಾನೂನು ಹೋರಾಟ ನಡೆಸುತ್ತೇವೆ’ ಎಂದರು.

‘ದೇವಸ್ಥಾನ ನೆಲಸಮಗೊಳಿಸಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಸೆ.16ರಂದು ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT