ಸೋಮವಾರ, ಜನವರಿ 25, 2021
26 °C
ಜಯಪುರ ಹೋಬಳಿಯ ಗ್ರಾಮಗಳ ಜನರ ಆಕ್ರೋಶ

ಕಬಿನಿಯಿಂದ ಕಲುಷಿತ ನೀರು ಪೂರೈಕೆ, ರೋಗಭೀತಿಯಲ್ಲಿ ಗ್ರಾಮಸ್ಥರು

ಬಿಳಿಗಿರಿ.ಆರ್ Updated:

ಅಕ್ಷರ ಗಾತ್ರ : | |

Prajavani

ಜಯಪುರ: ಹೋಬಳಿಯ ವಿವಿಧ ಗ್ರಾಮಗಳಿಗೆ ಕಬಿನಿ ಜಲಾಶಯದಿಂದ ಕಲುಷಿತ ನೀರು ಪೂರೈಸಲಾಗಿದೆ. ಈ ಕುರಿತು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಲಾಶಯದಿಂದ ಕಳೆದ ಎರಡು ದಿನಗಳಿಂದ ಪೂರೈಸಿರುವ ನೀರು ಮಣ್ಣು ಹಾಗೂ ಮರಳು ಮಿಶ್ರಿತವಾಗಿದೆ.

ಹುಲ್ಲಹಳ್ಳಿಯ ಸಮೀಪ ಕಬಿನಿ ಜಲಾಶಯದಿಂದ ಪಂಪ್ ಆಗುವ ನೀರನ್ನು ಬಿದರಗೂಡಿನ ಪಂಪ್ ಹೌಸ್‌ನ ಘಟಕದಲ್ಲಿ ಶುದ್ಧೀಕರಣ ಮಾಡಲಾಗುತ್ತದೆ. ತಳೂರು ಸರ್ಕಲ್ ಮತ್ತು ಉದ್ಬೂರು ಗೇಟ್ ಬಳಿ ಬೃಹತ್ ಜಲಸಂಗ್ರಹಗಾರ ನಿರ್ಮಿಸಿ ಅಲ್ಲಿಂದ, ಮೈಸೂರು ನಗರದ ಶ್ರೀರಾಂಪುರ, ದಟ್ಟಗಳ್ಳಿ, ರಾಜರಾಜೇಶ್ವರಿ ನಗರ, ರಾಮಕೃಷ್ಣನಗರ, ಜೆ.ಪಿ.ನಗರ, ಗುರೂರು ಸೇರಿದಂತೆ ಜಯಪುರ ಹೋಬಳಿ ವ್ಯಾಪ್ತಿಯ ಉದ್ಬೂರು, ಧನಗಳ್ಳಿ, ಸಿಂದುವಳ್ಳಿ, ಹಾರೋಹಳ್ಳಿ, ಜಯಪುರ, ಗೋಪಾಲಪುರ ಗ್ರಾಮ ಪಂಚಾಯಿತಿಯ ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.

ಆದರೆ, ಈಗ ಕಲುಷಿತ ನೀರು ಸೇವನೆಯಿಂದ ಜನರು ನೆಗಡಿ, ಕೆಮ್ಮು, ಜ್ವರದಿಂದ ಬಳಲುತ್ತಿದ್ದಾರೆ. ಈ ಸಂಬಂಧ ಪಿಡಿಒಗಳನ್ನು ಪ್ರಶ್ನಿಸಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಶುದ್ಧ ಕುಡಿಯುವ ನೀರನ್ನು ಪೂರೈಸಬೇಕು ಎಂದು ಧನಗಳ್ಳಿ ಗ್ರಾಮದ ಶಿವಶಂಕರ್, ರಘು, ಕಿರಣ್, ಬಸವರಾಜು ಆಗ್ರಹಿಸಿದ್ದಾರೆ.

ಕೆಂಪು ಮಣ್ಣು ಮಿಶ್ರಿತ ನೀರು ಬರುತ್ತಿರುವುದರಿಂದ ಅಡುಗೆ, ಸ್ನಾನದ ಬಳಕೆಗೆ ಸಾಧ್ಯವಾಗುತ್ತಿಲ್ಲ. ಶುದ್ಧ ಕುಡಿಯುವ ನೀರಿನ ಘಟಕವೂ ಇಲ್ಲ. 20 ಲೀಟರ್ ನೀರಿನ ಕ್ಯಾನ್‌ಗೆ ₹40 ಕೊಟ್ಟು ಖರೀದಿಸಬೇಕಾಗಿದೆ ಎಂದು ದಾರಿಪುರ ಗ್ರಾಮದ ಬಸವಣ್ಣ ಅಳಲು ತೋಡಿಕೊಂಡರು.

ಓವರ್ ಹೆಡ್ ಟ್ಯಾಂಕ್‌ಗಳನ್ನು ಕಾಲಕಾಲಕ್ಕೆ ಶುಚಿಗೊಳಿಸುತ್ತಿಲ್ಲ. ಕಲುಷಿತ ನೀರನ್ನೇ ಕುಡಿಯಲು ಬಿಡುತ್ತಿದ್ದಾರೆ ಎಂದು ಹಾರೋಹಳ್ಳಿ ಗ್ರಾಮಸ್ಥರು ದೂರಿದರು.

ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕಬಿನಿ ನೀರು ಮಣ್ಣು ಮಿಶ್ರಿತ ಕೆಂಪು ಬಣ್ಣಕ್ಕೆ ತಿರುಗಿದ್ದು, ಜಲಸಂಗ್ರಹಗಾರದಲ್ಲಿ ಶುದ್ಧೀಕರಣ ಮಾಡಿಯೇ ನೀರನ್ನು ಪೂರೈಸಲಾಗುತ್ತಿದೆ. ಆದರೂ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬುದಾಗಿ ಜನರು ದೂರಿದ್ದಾರೆ. ಶುದ್ಧ ಕುಡಿಯುವ ನೀರನ್ನು ಪೂರೈಸುವುದಾಗಿ ಎಂಜಿನಿಯರ್ ಮಂಜುನಾಥ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಕಲುಷಿತ ನೀರನ್ನು ಕುಡಿದು ಅನಾರೋಗ್ಯಕ್ಕೆ ತುತ್ತಾದರೆ ಯಾರು ಹೊಣೆ? ಅಧಿಕಾರಿಗಳು, ಎಂಜಿನಿಯರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯುತ್ತೇನೆ ಎಂದು ಜಯಪುರ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರೇಮಕುಮಾರಿ ಮಹದೇವಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು