ಗುರುವಾರ , ಡಿಸೆಂಬರ್ 3, 2020
21 °C
ಮುಡಾ ಅಭಿವೃದ್ಧಿ ಸಂಬಂಧಿತ ಸಭೆಯಲ್ಲಿ ಸಚಿವ ಸೋಮಶೇಖರ್‌ ಭರವಸೆ

ನಗರದ ಅಭಿವೃದ್ಧಿಗೆ ಪೂರ್ಣ ಸಹಕಾರ

ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮೈಸೂರು ನಗರದ ಅಭಿವೃದ್ಧಿಗೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಕ್ಕೆ ಸಂಬಂಧಿಸಿ ದಂತೆ ಸಚಿವದ್ವಯರ ಅಧ್ಯಕ್ಷತೆಯಲ್ಲಿ ವಿಕಾಸಸೌಧದಲ್ಲಿ ಶನಿವಾರ ಸಭೆ ನಡೆಯಿತು.

2005ರ ನಂತರ ಮುಡಾ ಹಂಚಿಕೆ ಮಾಡಿರುವ ನಿವೇಶನಗಳಿಗೆ ಕ್ರಯಪತ್ರ ನೀಡುವುದಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲು ಒಪ್ಪಿಗೆ ಸೂಚಿಸಲಾಯಿತು. ಪ್ರಾಧಿಕಾರಕ್ಕೆ ಹೊಸ ವಾಹನಗಳ ಖರೀದಿ, ಸಹಾಯಕ, ಕಿರಿಯ ಎಂಜಿನಿಯರುಗಳ ನಿಯೋಜನೆ ಸೇರಿದಂತೆ ಹಲವು ವಿಷಯಗಳಿಗೆ ಕೆಲವು ತಿದ್ದುಪಡಿ ಗಳೊಂದಿಗೆ ಒಪ್ಪಿಗೆ ಪಡೆಯಲು ತೀರ್ಮಾನಿಸಲಾಯಿತು.

ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‌ಡೌನ್‌ ಕಟ್ಟಡದ ಅಭಿವೃದ್ಧಿಗೆ ಇರುವ ತೊಡಕಿನ ಬಗ್ಗೆ ಸಚಿವರ ಗಮನಕ್ಕೆ ತಂದಾಗ, ಈ ಎರಡೂ ಪಾರಂಪರಿಕ ಕಟ್ಟಡಗಳ ನವೀಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತೆಗೆದುಕೊಂಡಿರುವ ಕ್ರಮ, ಮುಂದಿನ ಕಾಮಗಾರಿಗಳ ಯೋಜನೆ ಏನು ಎಂಬ ಬಗ್ಗೆ ಪ್ರಸ್ತಾವನೆಯನ್ನು ಮುಂದಿನ 15 ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸಚಿವ
ಬಸವರಾಜು ಅವರು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಿದರು.

ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿ, ‘ಮೈಸೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಚಿವ ಸೋಮಶೇಖರ್ ಅವರು ಸಾಕಷ್ಟು ಮುತುವರ್ಜಿ ವಹಿಸಿದ್ದಾರೆ. ಮುಡಾದಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಕ್ಕೆ ಇರುವ ತಾಂತ್ರಿಕ ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದೆವು. ಈ ಹಿನ್ನೆಲೆಯಲ್ಲಿ ಈಗ ನಗರಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಏರ್ಪಡಿಸಿ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಟ್ಟಿದ್ದಾರೆ’ ಎಂದರು.

ಸಂಸದ ಪ್ರತಾಪ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ತನ್ವೀರ್ ಸೇಠ್, ಎಲ್.ನಾಗೇಂದ್ರ, ಹರ್ಷವರ್ಧನ್, ಮುಡಾ ಆಯುಕ್ತ ನಟೇಶ್ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.