ಗುರುವಾರ , ಆಗಸ್ಟ್ 5, 2021
23 °C
ಸಾರಿಗೆ ವ್ಯವಸ್ಥೆ ಸ್ಥಗಿತ; ಅಗತ್ಯ ಸೇವೆಗಷ್ಟೇ ಅವಕಾಶ

ಮೈಸೂರು ಜಿಲ್ಲೆಯಲ್ಲಿ ಭಾನುವಾರ ಸಂಪೂರ್ಣ ಲಾಕ್‌ಡೌನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೊರೊನಾ ವೈರಾಣು ಹರಡುವಿಕೆ ನಿಯಂತ್ರಣ ನಿಟ್ಟಿನಲ್ಲಿ ಭಾನುವಾರ (ಜುಲೈ 5) ದಿನವಿಡೀ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಘೋಷಿಸಲಾಗಿದೆ.

ಶನಿವಾರ ಸಂಜೆ 6 ಗಂಟೆ ನಿಷೇಧಾಜ್ಞೆ ಆರಂಭವಾಗಿದ್ದು, ಸೋಮವಾರ ಬೆಳಿಗ್ಗೆ 5 ಗಂಟೆವರೆಗೆ ಮುಂದುವರಿಯಲಿದೆ. ತುರ್ತು ಸಂದರ್ಭ ಹಾಗೂ ಅಗತ್ಯ ಸೇವೆ ಹೊರತುಪಡಿಸಿ ಸಾರ್ವಜನಿಕ ಸಂಚಾರ, ವ್ಯಾಪಾರ ವಹಿವಾಟು ಹಾಗೂ ಇನ್ನಿತರ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

ಆಗಸ್ಟ್‌ 2ರವರೆಗೆ ಪ‍್ರತಿ ಭಾನುವಾರದಂದು ಸಂಪೂರ್ಣ ಲಾಕ್‌ಡೌನ್‌ ಮಾಡಲು ಈಗಾಗಲೇ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

ಆಸ್ಪತ್ರೆ, ಔಷಧ ಅಂಗಡಿ, ಹಾಲು, ಹಣ್ಣು, ದಿನಸಿ, ತರಕಾರಿ, ಮಾಂಸದ ಅಂಗಡಿ ತೆರೆಯಲು ಮಾತ್ರ ಅವಕಾಶವಿರಲಿದೆ. ವೈದ್ಯರು, ನರ್ಸ್‌ ಓಡಾಟ ಹಾಗೂ ಆಂಬುಲೆನ್ಸ್‌ ಸಂಚಾರಕ್ಕೆ ಅವಕಾಶವಿರಲಿದೆ. ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ದಿನದಮಟ್ಟಿಗೆ ಕೆಎಸ್‌ಆರ್‌ಟಿಸಿ ಬಸ್‌, ಆಟೊ ಹಾಗೂ ಟ್ಯಾಕ್ಸಿ ಸಂಪೂರ್ಣ ಸ್ಥಗಿತಗೊಳ್ಳಲಿದೆ.

‘ಪೊಲೀಸ್‌ ಗಸ್ತು ವಾಹನಗಳು ಬೀದಿಗಿಳಿದು, ಧ್ವನಿವರ್ಧಕದ ಮೂಲಕ ಪ್ರಚಾರ ನಡೆಸಿವೆ. ಜನರು ಮನೆಯಲ್ಲೇ ಇದ್ದು ಸಹಕರಿಸಬೇಕು’ ಎಂದು ಡಿಸಿಪಿ ಡಾ.ಎ.ಎನ್‌.ಪ್ರಕಾಶ್‌ ಗೌಡ ತಿಳಿಸಿದರು.

ಹೀಗಾಗಿ, ಶನಿವಾರವೇ ಜನರು ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದದ್ದು ಕಂಡುಬಂತು. ಸಂಜೆ ಆರು ಗಂಟೆ ಆಗುತ್ತಿದ್ದಂತೆ ಪೊಲೀಸ್‌ ವಾಹನಗಳ ಸೈರನ್‌ ಕೂಡ ಜೋರಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಗಸ್ತು ತಿರುಗಿ ಅರಿವು ಮೂಡಿಸಿದವು.‌ ಪೊಲೀಸರು ಕೂಡ ರಸ್ತೆಗಳಲ್ಲಿ ತಿರುಗಾಡುತ್ತಾ ಜನರನ್ನು ಮನೆಗೆ ಕಳಿಸಿದರು. ಬ್ಯಾರಿಕೇಡ್‌ ಹಾಕಿ ವಾಹನಗಳನ್ನು ತಡೆದರು.

ಮದ್ಯ ಮಾರಾಟ ನಿಷೇಧ: ಲಾಕ್‌ಡೌನ್‌ ಇರುವ ನಾಲ್ಕು ಭಾನುವಾರಗಳಂದು ಎಲ್ಲ ರೀತಿಯ ಮದ್ಯ ಮಾರಾಟ ಮತ್ತು ಸಾಗಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್‌ ಆದೇಶ ಹೊರಡಿಸಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಪ್ರತಿದಿನ ಸಂಜೆ 6 ರಿಂದ ಬೆಳಿಗ್ಗೆ 5ರ ವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಆದ್ದರಿಂದ ಸೋಮವಾರದಿಂದ ಶನಿವಾರದವರೆಗೆ ಸಂಜೆ 6ರ ಬಳಿಕ ಎಲ್ಲಾ ವಿಧದ ಮದ್ಯದಂಗಡಿಗಳನ್ನು ಮುಚ್ಚಬೇಕು ಎಂದು ಸೂಚಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.