ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತಬ್ದಗೊಂಡ ನಗರದ ಮಾಲ್‌ಗಳು

ಬಹುತೇಕ ಕಾರ್ಮಿಕರಿಗೆ ಇಲ್ಲ ಕೆಲಸ, ಸಂಬಳವೂ ಇಲ್ಲ
Last Updated 14 ಮಾರ್ಚ್ 2020, 10:17 IST
ಅಕ್ಷರ ಗಾತ್ರ

ಮೈಸೂರು: ಕೋರೊನಾ ವೈರಸ್‌ ಭೀತಿಯ ಛಾಯೆ ನಗರದಲ್ಲಿ ಶುಕ್ರವಾರವೇ ಕಾಣಿಸುತ್ತಿದೆ. ಮಾಲ್‌ಗಳಲ್ಲಿ ಜನಸಂದಣಿ ಎಂದಿನಂತೆ ಇರಲಿಲ್ಲ. ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳಲ್ಲೂ ಜನಜಂಗುಳಿ ಕಡಿಮೆ ಇತ್ತು. ಶನಿವಾರದಿಂದ ಮಾಲ್‌ಗಳು ಸಂಪೂರ್ಣ ಬಂದ್ ಆಗಲಿವೆ ಎಂಬ ಸುದ್ದಿ ಕೆಲಸಗಾರರನ್ನು ಮತ್ತಷ್ಟು ಆತಂಕಕ್ಕೆ ದೂಡಿತು.

ಇಷ್ಟಾದರೂ ಹಲವೆಡೆ ಜನಜಂಗುಳಿ ಎಂದಿನಂತಿತ್ತು. ದೇವರಾಜ ಮಾರುಕಟ್ಟೆ, ಸಯ್ಯಾಜಿರಾವ್ ರಸ್ತೆ, ದೇವರಾಜ ಅರಸ್ ರಸ್ತೆ ಸೇರಿದಂತೆ ಅನೇಕ ಕಡೆ ಜನರು ಎಂದಿನಂತೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದರು.

‘ಮಾಲ್‌ಗಳು ಬಂದ್ ಆದರೆ ಏನಂತೆ, ಮಾರುಕಟ್ಟೆಗಳು ಇರುತ್ತವೆ. ಬೇರೆ ಅಂಗಡಿಗಳು ತೆರೆದೇ ಇರುತ್ತವೆ. ಮಾಲ್‌ಗಳಿಗೆ ಬರುವ ಸಾರ್ವಜನಿಕರು ಬೇರೆ ಅಂಗಡಿಗಳಿಗೆ ಹೋಗುತ್ತಾರೆ ಅಲ್ಲವೇ’ ಎಂಬ ಪ್ರಶ್ನೆಯೊಂದನ್ನು ಮಾಲ್‌ನಲ್ಲಿ ಕೆಲಸ ಮಾಡುವ ಬಹುತೇಕರು ಕೇಳುತ್ತಾರೆ.

‘ನಮಗೆ ತಿಂಗಳಿಗೆ ನಾಲ್ಕೇ ದಿನ ವಾರದ ರಜೆ. ಬೇರೆ ದಿನ ರಜೆ ಹಾಕಿದರೆ ಆ ದಿನದ ಸಂಬಳ ಕೊಡುವುದಿಲ್ಲ. ಇನ್ನು ಒಂದು ವಾರ ಬಂದ್ ಆದರೆ ನಮ್ಮ ಸಂಸಾರದ ಗತಿ ಏನು ಎಂಬುದೇ ಚಿಂತೆಯಾಗಿದೆ’ ಎಂದು ಹೆಸರು ಹೇಳಿಲಿಚ್ಛಿಸದ ಉದ್ಯೋಗಿಯೊಬ್ಬರು ಹೇಳುತ್ತಾರೆ.

ಮತ್ತೆ ಕೆಲವು ಉದ್ಯೋಗಿಗಳ ‍ಪಾಡು ಇನ್ನೂ ಶೋಚನೀಯ. ಅವರು ತಮ್ಮ ವಿಭಾಗದಲ್ಲಿ ತೋರಿದ ಮಾರಾಟದ ಪ‍್ರಗತಿಯ ಆಧಾರದ ಮೇಲೆ ಸಂಬಳ ಪಡೆಯುತ್ತಾರೆ. ಆದರೆ, ಈಗ ಮಾಲ್ ಬಂದ್ ಆಗಿರುವುದರಿಂದ ಮಾರಾವೂ ಇಲ್ಲ, ಸಂಬಳವೂ ಇಲ್ಲದ ಪರಿಸ್ಥಿತಿಯಲ್ಲಿ ಅವರಿದ್ದಾರೆ. ಈ ಪರಿಸ್ಥಿತಿ ಎಷ್ಟು ದಿನ ಎಂಬ ಪ್ರಶ್ನೆ ಅವರಲ್ಲಿ ಕಾಡುತ್ತಿದೆ.

ಇದರ ನಡುವೆ ಹಲವು ಮಂದಿ ಸಕರಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ. ‘ಎಲ್ಲಕ್ಕೂ ಮಿಗಿಲಾಗಿ ಆರೋಗ್ಯ ಮತ್ತು ಜೀವ ಮುಖ್ಯ. ಇದು ತಾತ್ಕಾಲಿಕವಾದ ಪರಿಸ್ಥಿತಿ. ಸರ್ಕಾರದ ಜತೆ ನಾವೂ ಕೈಜೋಡಿಸೋಣ. ರೋಗ ನಿಯಂತ್ರಣಕ್ಕೆ ಬಂದ ಮೇಲೆ ಎಲ್ಲವೂ ಸರಿ ಹೋಗಲಿದೆ’ ಎಂಬ ಆಶಾಭಾವನೆ ವ್ಯಕ್ತಪಡಿಸುತ್ತಾರೆ.

ಮಾಲ್‌ನಲ್ಲೇ ಕೆಲಸ ಮಾಡುವ ಕಚೇರಿ ಸಹಾಯಕರು, ಸ್ವಚ್ಛತಾ ಸಿಬ್ಬಂದಿ, ಭದ್ರತಾ ಸಿಬ್ಬಂದಿಗೆ ಮಾಲ್ ಬಂದ್ ಆದರೂ ಕೆಲಸ ಇರುತ್ತದೆ. ಇವರು ಸ್ವಲ್ಪ ನಿರಾಳರಾಗಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ‘ಮಾಲ್‌ ಆಫ್ ಮೈಸೂರ್‌’ನ ನಿರ್ವಾಹಕ ಅಧಿಕಾರಿ ಸಂಜೀವ್, ‘ನಾವು ಕರ್ನಾಟಕ ಸರ್ಕಾರದ ಆದೇಶ ಮತ್ತು ಸೂಚನೆಗಳನ್ನು ಯಥಾವತ್ತಾಗಿ ಪಾಲಿಸುತ್ತೇವೆ. ಸಮಾಜದ ಎಲ್ಲರ ಆರೋಗ್ಯ ಎಲ್ಲರ ಜವಾಬ್ದಾರಿಯೂ ಆಗಿದೆ’ ಎಂದಷ್ಟೇ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT