ಸೋಮವಾರ, ಜೂನ್ 1, 2020
27 °C
ಕೋವಿಡ್‌– 19 ಪೀಡಿತರ ನೇರ ಸಂಪರ್ಕದಲ್ಲಿದ್ದವರಿಗಾಗಿ ಶೋಧ; ಪ್ರತ್ಯೇಕ ನಿಗಾ–ಸ್ಯಾಂಪಲ್ ಪರೀಕ್ಷೆಗೆ

ಬಳ್ಳಾರಿಗೂ ವ್ಯಾಪಿಸಿದ ನಂಜನಗೂಡಿನ ‘ನಂಜು’

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಂಜನಗೂಡಿನ ಔಷಧ ಕಾರ್ಖಾನೆಯ ನೌಕರರೊಬ್ಬರಿಗೆ (ರೋಗಿ ಸಂಖ್ಯೆ–52) ತಗುಲಿದ್ದ ಕೋವಿಡ್‌–19 ‘ನಂಜು’, ಕಾರ್ಖಾನೆಯ ಉದ್ಯೋಗಿಗಳ ಜತೆ, ಅವರ ಕುಟುಂಬದವರನ್ನೂ ಬಾಧಿಸುತ್ತಿದೆ. ಸುತ್ತಲಿನ ಪರಿಸರದಲ್ಲೂ ಭೀತಿ ಮೂಡಿಸಿದೆ.

ಕಾರ್ಖಾನೆಯ ಗುಣಮಟ್ಟ ನಿಯಂತ್ರಕರೊಬ್ಬರಲ್ಲಿ ಮಾರ್ಚ್‌ 26ರಂದು ಕೋವಿಡ್ ದೃಢಪಟ್ಟಿತ್ತು. ಇದು ಜಿಲ್ಲೆಯಲ್ಲಿನ ಮೂರನೇ ಪ್ರಕರಣ ಆಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಅವರ ಸಂಪರ್ಕಕ್ಕೆ ಬಂದವರ ಪೈಕಿ 19 ಜನರು ರೋಗ ಪೀಡಿತರಾಗಿರುವುದು ಆತಂಕ ಹೆಚ್ಚಿಸಿದೆ.

ದುಬೈನಿಂದ ಬಂದಿದ್ದ ಇಬ್ಬರಲ್ಲಿ ಈ ಕಾಯಿಲೆ ಪತ್ತೆಯಾಗಿತ್ತು. ಇವರಿಂದ ಇದುವರೆಗೂ ಜಿಲ್ಲೆಯಲ್ಲಿ ಯಾರೊಬ್ಬರಿಗೂ ರೋಗ ಪಸರಿಸಿಲ್ಲ. ಆದರೆ, ನಂಜನಗೂಡಿನ ‘ನಂಜು’ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೀಗ ಇದರ ವ್ಯಾಪ್ತಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪಕ್ಕೂ ವಿಸ್ತರಿಸಿದೆ. ಸಿರುಗುಪ್ಪ ಮೂಲದ ಕಾರ್ಖಾನೆಯ ನೌಕರನ ಪುತ್ರ 14 ವರ್ಷದ ಬಾಲಕನಿಗೂ ರೋಗ ದೃಢಪಟ್ಟಿದ್ದು, ಬಳ್ಳಾರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ.

ಜಿಲ್ಲೆಯ ವ್ಯಾಪ್ತಿಯಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ 21. ಇವರಲ್ಲಿ ಇಬ್ಬರು ವಿದೇಶದಿಂದ ಬಂದವರಿದ್ದರೆ, ಇನ್ನಿಬ್ಬರು ರೋಗಿ ಸಂಖ್ಯೆ 52ರ ಪತ್ನಿ, ಮಾವ. ಉಳಿದ 17 ಜನರು ಔಷಧ ಕಾರ್ಖಾನೆಯ ಉದ್ಯೋಗಿಗಳು.

ನಂಜನಗೂಡಿನ ಔಷಧ ಕಾರ್ಖಾನೆಯ ಉದ್ಯೋಗಿಗಳಿಗೆ ಕೋವಿಡ್ ಪಸರಿಸುವ ಜತೆಯಲ್ಲೇ, ಅವರ ಕುಟುಂಬದವರಿಗೂ ತಗುಲುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಈಗಾಗಲೇ ಮೂವರಿಗೆ ತಗುಲಿದೆ. ಇಬ್ಬರು ಕಾರ್ಖಾನೆಯ ಮೊದಲ ರೋಗಿಯ ಸಂಬಂಧಿಗಳಾದರೆ, ಮತ್ತೊಬ್ಬ ಬಾಲಕ ನೌಕರರೊಬ್ಬರ ಪುತ್ರ.

ಕೋವಿಡ್‌ ಪೀಡಿತರ ಸಂಖ್ಯೆ ಹೆಚ್ಚಳ ?: ‘ಔಷಧ ಕಾರ್ಖಾನೆಯ ನೌಕರರಲ್ಲಿ ಕೋವಿಡ್ ಪಸರಿಸುತ್ತಿದೆ. ಈ ಸಂಖ್ಯೆ ಎಷ್ಟಕ್ಕೆ ಏರಲಿದೆ? ಎಂಬುದು ಗೊತ್ತಿಲ್ಲ. ಜಿಲ್ಲೆಯಲ್ಲಿರುವ 19 ಪೀಡಿತರ ನೇರ ಸಂಪರ್ಕದಲ್ಲಿದ್ದವರ ಶೋಧ ನಡೆದಿದೆ. ಇದುವರೆಗೆ 223 ಜನರನ್ನು ಗುರುತಿಸಿ ಪ್ರತ್ಯೇಕ ನಿಗಾದಲ್ಲಿಡಲಾಗಿದೆ’ ಎಂದು ಉನ್ನತ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗಾಗಲೇ ಪ್ರತ್ಯೇಕ ನಿಗಾದಲ್ಲಿರುವವರ ಗಂಟಲು ದ್ರವದ ಮಾದರಿ, ರಕ್ತವನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. 12 ದಿನದೊಳಗೆ ಈ ಎಲ್ಲಾ ಪರೀಕ್ಷೆ ನಡೆದರೆ ಮಾತ್ರ ಕೋವಿಡ್‌ ದೃಢಪಡಲಿದೆ. ಇಲ್ಲದಿದ್ದರೆ ಮತ್ತೊಮ್ಮೆ ಸ್ಯಾಂಪಲ್‌ ತೆಗೆದು ಪರೀಕ್ಷೆಗೆ ಕಳುಹಿಸಬೇಕಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

‘ಕೋವಿಡ್‌ ಪೀಡಿತರ ನೇರ ಸಂಪರ್ಕದಲ್ಲಿದ್ದವರ ಸಂಖ್ಯೆಯನ್ನು ನಿಖರವಾಗಿ ಹೇಳಲಾಗದು. ರೋಗಿಗಳ ಸಂಖ್ಯೆ ಹೆಚ್ಚಿದಂತೆ ಸಂಪರ್ಕದಲ್ಲಿದ್ದವರ ಸಂಖ್ಯೆಯೂ ಹೆಚ್ಚುತ್ತಿದೆ. ಇವರೆಲ್ಲರನ್ನೂ ಪತ್ತೆ ಹಚ್ಚುವುದೇ ಕಷ್ಟವಾಗುತ್ತಿದೆ. ಇದರ ಜತೆಯಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಜನರ ಸ್ಯಾಂಪಲ್ ಪರೀಕ್ಷೆಯೂ ಸವಾಲಾಗಿದೆ. ಇದು ಪೂರ್ಣಗೊಂಡ ಬಳಿಕವಷ್ಟೇ ಸಮಗ್ರ ಮಾಹಿತಿ ಸಿಗಲಿದೆ’ ಎಂದು ತಿಳಿಸಿದರು.

ಕ್ವಾರಂಟೈನ್‌ಗೆ ಸಹಕರಿಸಿ; ಡಿಸಿ ಮನವಿ

ಮೈಸೂರಿನ ಲಾಡ್ಜ್‌ನಲ್ಲಿ ಕ್ವಾರಂಟೈನ್‌ ಮಾಡಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಕ್ಕೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕ್ವಾರಂಟೈನ್‌ ಆಗುವವರಿಗೂ ಕುಟುಂಬ, ಮಕ್ಕಳಿದ್ದಾರೆ. ಅವರನ್ನು ಮಾನವೀಯತೆಯಿಂದ ನೋಡಿ. ರೋಗ ಪಸರಿಸದಂತೆ, ಸಾವು ಸಂಭವಿಸದಂತೆ ತಡೆಗಟ್ಟುವ ನಿಟ್ಟಿನಲ್ಲಿ ಹಲವು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ವಿರೋಧ ಸಹಜ. ಆದರೆ ವಿರೋಧಿಸುವುದಕ್ಕೂ ಮುನ್ನ, ಒಮ್ಮೆ ಆಲೋಚಿಸಿ. ನಮಗಿದು ಅನಿವಾರ್ಯ ಕ್ರಮವೂ ಆಗಿದೆ. ಸಹಕರಿಸಿ’ ಎಂದು ಜನರಲ್ಲಿ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.

ಮೈಸೂರು ಜಿಲ್ಲೆಯ ಕೋವಿಡ್–19 ಚಿತ್ರಣ

2809 ಜನರು ಹೋಂ ಕ್ವಾರಂಟೈನ್‌ಗೊಳಪಟ್ಟವರು (ಪ್ರತ್ಯೇಕ ನಿಗಾದಲ್ಲಿರುವವರು)

1051 ಜನರು ಹೋಂ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದವರು

1705 ಜನರು ಪ್ರಸ್ತುತ ಹೋಂ ಕ್ವಾರಂಟೈನ್‌ನಲ್ಲಿ ಇರುವವರು

151 ಜನರ ಗಂಟಲು ದ್ರವದ ಮಾದರಿ, ರಕ್ತ ಪರೀಕ್ಷೆ

21 ಜನರಿಗೆ ಕೋವಿಡ್–19 ಪಾಸಿಟಿವ್

130 ಜನರ ಪರೀಕ್ಷಾ ವರದಿ ನೆಗೆಟಿವ್

ಆಧಾರ: ಜಿಲ್ಲಾಡಳಿತ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು