ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನ ಕೆ.ಆರ್‌.ಆಸ್ಪತ್ರೆಯಲ್ಲಿ ಅಂತರವೇ ಮಾಯ: ಸೋಂಕು ಹರಡುವ ಅಪಾಯ

Last Updated 16 ಮೇ 2021, 19:48 IST
ಅಕ್ಷರ ಗಾತ್ರ

ಮೈಸೂರು: ಕೊರೊನಾ ವೈರಸ್‌ ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ಎಂಬುದು ಜಗಜ್ಜಾಹೀರು. ಆದರೆ ಬಡವರ ದೊಡ್ಡಾಸ್ಪತ್ರೆ ಎಂದು ಬಿಂಬಿತಗೊಂಡಿರುವ ನಗರದ ಕೆ.ಆರ್.ಆಸ್ಪತ್ರೆಯಲ್ಲೇ ಕನಿಷ್ಠ ಅಂತರ ಕಾಪಾಡುತ್ತಿಲ್ಲ.

ಆಮ್ಲಜನಕ ಹಾಸಿಗೆ, ವೆಂಟಿಲೇಟರ್‌, ಐಸಿಯುನಲ್ಲಿ ಗಂಭೀರ ಪರಿಸ್ಥಿತಿಯಲ್ಲಿರುವ ಕೋವಿಡ್‌ ಪೀಡಿತರ ಪಕ್ಕದಲ್ಲೇ, ಆರೈಕೆಗಾಗಿ ಕುಟುಂಬದ ಸದಸ್ಯರಿದ್ದಾರೆ.

ಸೋಂಕಿತರ ಹಾಸಿಗೆಯಲ್ಲೇ ಕೂರುವುದು, ಪಕ್ಕದಲ್ಲೇ ಕುರ್ಚಿ ಹಾಕಿಕೊಂಡು ಕಾಳಜಿ ಮಾಡುವುದು, ನೆಲದಲ್ಲೇ ಕುಳಿತು ರೋಗಿಯನ್ನು ನೋಡಿಕೊಳ್ಳುವುದು, ಆಯಾಸವಾದಾಗ ಅಲ್ಲಿಯೇ ಮಲಗಿದ್ದ ಚಿತ್ರಣ ಭಾನುವಾರ ಕಂಡುಬಂತು.

ಕೆಲ ಸೋಂಕಿತರುಹಾಸಿಗೆಯಿಲ್ಲದ ಮಂಚದ ಮೇಲೆಮಲಗಿ ಚಿಕಿತ್ಸೆ ಪಡೆದರೆ; ಬೆರಳೆಣಿಕೆಯ ಸೋಂಕಿತರು ನೆಲದಲ್ಲಿ–ಕುರ್ಚಿಯಲ್ಲಿ ಕುಳಿತು ಕುಟುಂಬದವರ ಸಹಾಯದಿಂದ ಆಮ್ಲಜನಕ ಪಡೆಯುತ್ತಿರುವುದು ಕಂಡು ಬಂದಿತು.

ಸೋಂಕಿತರ ಆರೈಕೆಗಾಗಿ ಮಹಿಳೆಯರೇ ಇಲ್ಲಿ ಹೆಚ್ಚಿದ್ದಾರೆ. ರೋಗಿ ಮತ್ತು ಆರೈಕೆದಾರರಿಗೆ ಊಟೋಪಚಾರ ಪೂರೈಸುವ
ವರು ಸಹ ಆಸ್ಪತ್ರೆಯೊಳಗೆ ಬಂದು,ಯೋಗಕ್ಷೇಮ ನೋಡಿಕೊಂಡು ಹೋಗುತ್ತಿದ್ದಾರೆ. ಕೌಂಟರ್‌ನಲ್ಲಿರುವ ವೈದ್ಯಕೀಯ ಸಿಬ್ಬಂದಿ ಬಳಿಯೂ ಗುಂಪಾಗಿ ಬಂದು ತಮ್ಮವರ ಆರೋಗ್ಯ ವಿಚಾರಿಸಿಕೊಳ್ಳುತ್ತಾರೆ. ಬಹುತೇಕರು ಮಾಸ್ಕ್‌ ಸಹ ಸರಿಯಾಗಿ ಧರಿಸಿಲ್ಲದಿರುವುದು ಕಾಣಿಸಿತು.

ಪರಾಕಾಷ್ಠೆ: ‘ಕೆ.ಆರ್‌.ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ಸಾಕಷ್ಟು ವಿಡಿಯೊಗಳು ವೈರಲ್ ಆಗಿವೆ. ಸಂಸದರೇ ಸ್ವತಃ ಭೇಟಿ ನೀಡಿ ವೀಕ್ಷಿಸಿದ್ದಾರೆ. ಉಸ್ತುವಾರಿ ಸಚಿವರ ಗಮನಕ್ಕೆ ತಂದರೂ ಸ್ವಲ್ಪವೂ ಬದಲಾವಣೆಯಾಗಿಲ್ಲ. ದಿನೇ ದಿನೇ ಅವ್ಯವಸ್ಥೆ ಪರಾಕಾಷ್ಠೆಗೆ ತಲುಪುತ್ತಿದೆ. ಸೋಂಕು ಹರಡುವ ಕಾರ್ಖಾನೆಯಾಗಿ ಆಸ್ಪತ್ರೆ ಮಾರ್ಪಟ್ಟಿದೆ’ ಎಂದು ಬಿಜೆಪಿ ಮುಖಂಡ ಕೇಬಲ್‌ ಮಹೇಶ್‌ ತಿಳಿಸಿದರು.

‘ಕೆ.ಆರ್‌.ಆಸ್ಪತ್ರೆ ಚಿಕಿತ್ಸಾ ಕೇಂದ್ರವಾಗಿ ಉಳಿದಿಲ್ಲ. ಅಸಮರ್ಥ ಆಡಳಿತದಿಂದ ಕೊರೊನಾ ವೈರಸ್‌ ಹರಡುವಿಕೆಯ ತಾಣವಾಗಿದೆ. ಜಿಲ್ಲಾಡಳಿತದ ವೈಫಲ್ಯ ಇದು’ ಎನ್ನುತ್ತಾರೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌.

560 ಸೋಂಕಿತರು: ಸಿಬ್ಬಂದಿ ಕೊರತೆ ‘ಕೆ.ಆರ್‌.ಆಸ್ಪತ್ರೆಯಲ್ಲಿ 560 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 75 ಜನರು ಐಸಿಯುನಲ್ಲಿದ್ದಾರೆ. ಒಬ್ಬರ ಆರೈಕೆಗೆ ಇಬ್ಬರು ಬೇಕಿದೆ. ಐಸಿಯುಗೆ ಮೂರು ಪಾಳಿಗೆ 450 ಸಿಬ್ಬಂದಿ ಬೇಕು. ನಮ್ಮಲ್ಲಿರುವುದು 250 ಜನರು ಮಾತ್ರ. ಇವರಲ್ಲೇ ನಿತ್ಯವೂ 50ಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರು ಗೈರಾಗುತ್ತಾರೆ. ದಿಕ್ಕು ತೋಚದ ಸ್ಥಿತಿ ನಮ್ಮದಾಗಿದೆ’ ಎಂದು ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ನಂಜುಂಡಸ್ವಾಮಿ ತಿಳಿಸಿದರು.

‘ಶುಶ್ರೂಷಕರು, ಡಿ ಗ್ರೂಪ್‌ ಸಿಬ್ಬಂದಿಯ ಕೊರತೆ ಸಾಕಷ್ಟಿದೆ. ರೋಗಿಗಳ ಸಂಬಂಧಿಕರಿಂದ ಹಲ್ಲೆಯೂ ನಡೆದಿದೆ. ಹೊರಗೆ ಹೋಗಿ ಎಂದರೇ ಜಗಳ ಮಾಡುತ್ತಾರೆ. ಕೆಲಸ ಬಿಟ್ಟು ಪೊಲೀಸ್ ಠಾಣೆಗೆ ಅಲೆಯೋದಾಗಿದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT