ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಹೊಡೆತಕ್ಕೆ ನಲುಗಿದ ರಾಖಿ ವಹಿವಾಟು

ಅಂಗಡಿಗಳಲ್ಲೇ ರಾಶಿ ರಾಶಿ ಉಳಿದ ರಕ್ಷಾ ಬಂಧನ, ಭಣಗುಡುತ್ತಿರುವ ಅಂಗಡಿಗಳು, ವ್ಯಾಪಾರಿಗಳು ಕಂಗಾಲು
Last Updated 3 ಆಗಸ್ಟ್ 2020, 5:55 IST
ಅಕ್ಷರ ಗಾತ್ರ

ಮೈಸೂರು: ಕೊರೊನಾದ ಕರಾಳ ಛಾಯೆ ಈ ಬಾರಿ ರಾಖಿ ಉದ್ಯಮಕ್ಕೆ ಭಾರಿ ಹೊಡೆತವನ್ನೇ ನೀಡಿದೆ. ಇಡೀ ವಹಿವಾಟು ಸಂಪೂರ್ಣ ಕುಸಿದು ಹೋಗಿದ್ದು, ಮಾರಾಟಗಾರರು ಕಂಗಾಲಾಗಿದ್ದಾರೆ.

ರಂಗು ರಂಗಿನ ರಾಖಿ ಖರೀದಿಸಲು ಅಂಗಡಿಗಳಲ್ಲಿ ಕಾಲೇಜು ಯುವತಿಯರು ಪ್ರತಿ ವರ್ಷ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಸೋಂಕಿನ ಪರಿಣಾಮ, ಅಂಗಡಿಗಳು ಭಣಗುಡುತ್ತಿವೆ.

ಮಾರಾಟ ಮಾಡಲೆಂದು ತರಿಸಿದ ರಾಶಿ ರಾಶಿ ರಕ್ಷಾ ಬಂಧನದ ಎಳೆಗಳು ಮಾರಾಟವಾಗದೇ ಹಾಗೆಯೇ ಉಳಿದಿವೆ. ಇವುಗಳನ್ನು ವಾಪಸ್ ತೆಗೆದುಕೊಳ್ಳಲು ಸಗಟು ವ್ಯಾಪಾರಸ್ಥರು ಹಿಂದೇಟು ಹಾಕುತ್ತಿದ್ದಾರೆ. ಒಂದು ಕಡೆ ಲಾಭವೂ ಇಲ್ಲ, ಮತ್ತೊಂದು ಕಡೆ ಖರ್ಚು ಮಾಡಿದ ಹಣವೂ ಇಲ್ಲದ ಸ್ಥಿತಿಯಲ್ಲಿ ಫ್ಯಾನ್ಸಿ ಸ್ಟೋರ್‌ಗಳ ಮಾಲೀಕರು ಇದ್ದಾರೆ.

ಕೊರೊನಾ ಸಂಕಷ್ಟದಿಂದಾಗಿ ಇನ್ನೂ ಶಾಲಾ, ಕಾಲೇಜುಗಳು ಆರಂಭವಾಗದೇ ಇರುವುದು ರಾಖಿ ಖರೀದಿ ಕುಸಿಯಲು ಪ್ರಮುಖ ಕಾರಣ ಎನಿಸಿದೆ. ಬಹುತೇಕ ಶಾಲಾ, ಕಾಲೇಜುಗಳ ಹುಡುಗಿಯರು ರಾಖಿಗಳನ್ನು ಖರೀದಿಸಿ, ತಮ್ಮ ತಮ್ಮ ಸಹಪಾಠಿಗಳಿಗೆ ಕಟ್ಟುತ್ತಿದ್ದರು. ಈಗ ವಿದ್ಯಾರ್ಥಿನಿಯರು ಯಾರೂ ಅಂಗಡಿಗಳತ್ತ ಸುಳಿಯುತ್ತಿಲ್ಲ.

ಸಂಪ್ರದಾಯಬದ್ಧವಾಗಿ ಹಬ್ಬ ಮಾಡುವವರು ಅಂಗಡಿಗಳಲ್ಲಿ ಸಿಗುವ ರಂಗುರಂಗಿನ ರಾಖಿಗಳನ್ನು ಆಶ್ರಯಿಸುವುದು ಕಡಿಮೆ. ಶಾಸ್ತ್ರೋಕ್ತವಾಗಿ ಪೂಜೆಗೆ ಇರಿಸಿದ, ಮನೆಯಲ್ಲೇ ತಯಾರಿಸಿದ ರಾಖಿಯನ್ನು ತಮ್ಮ ತಮ್ಮ ಸೋದರರಿಗೆ ಕಟ್ಟುತ್ತಾರೆ. ಅಂಗಡಿಗಳಲ್ಲಿನ ಫ್ಯಾಷನ್‌ ರಾಖಿಗಳನ್ನು ಕಾಲೇಜು ವಿದ್ಯಾರ್ಥಿನಿಯರೇ ಹೆಚ್ಚಾಗಿ ಖರೀದಿಸುತ್ತಿದ್ದುದ್ದರಿಂದ ಈಗ ಇಡೀ ವ್ಯಾಪಾರಕ್ಕೆ ಗ್ರಹಣ ಹಿಡಿದಂತೆ
ಆಗಿದೆ.

ಇಲ್ಲಿನ ಶಿವರಾಂಪೇಟೆ, ದೇವರಾಜ ಮಾರುಕಟ್ಟೆ, ಉದಯರವಿ ರಸ್ತೆ, ಅಗ್ರಹಾರದ ಕೆಲವಡೆ ಸೇರಿದಂತೆ ಅಲ್ಲಲ್ಲಿ ಫ್ಯಾನ್ಸಿ ಸ್ಟೋರ್‌ಗಳು ಭಾನುವಾರವೂ ತೆರೆದಿದ್ದವು. ಆದರೆ, ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಮುಂದಾಗಲಿಲ್ಲ.

ಇದೇ ಪರಿಸ್ಥಿತಿ ಫ್ರೆಂಡ್‌ಶಿಪ್‌ ಬ್ಯಾಂಡಿಗೂ ಬಂದಿದ್ದು, ನೂರಾರು ಸಂಖ್ಯೆಯಲ್ಲಿ ಫ್ರೆಂಡ್‌ಶಿಪ್‌ ಬ್ಯಾಂಡ್‌ಗಳು ಮಾರಾಟವಾಗದೇ ಹಾಗೇಯೇ ಉಳಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT