ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃಗಾಲಯದ ಮುಂದೆ ಕೋವಿಡ್ ‘ರ್‍ಯಾಟ್’ ‍ಪರೀಕ್ಷೆಗೆ ಚಿಂತನೆ: ಎಲ್.ಆರ್.ಮಹದೇವಸ್ವಾಮಿ

Last Updated 23 ಜೂನ್ 2021, 11:41 IST
ಅಕ್ಷರ ಗಾತ್ರ

ಮೈಸೂರು: ರಾಜ್ಯದ ಎಲ್ಲ 9 ಮೃಗಾಲಯಗಳ ಮುಂದೆ ಪ್ರವಾಸಿಗರನ್ನು ಕೋವಿಡ್ ‘ರ‍್ಯಾಟ್’ (ರ‍್ಯಾಪಿಡ್‌ ಆ್ಯಂಟಿಜನ್ ಪರೀಕ್ಷೆ) ಪರೀಕ್ಷೆಗೆ ಒಳಪಡಿಸಲು ಚಿಂತಿಸಲಾಗಿದೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ತಿಳಿಸಿದರು.

ಈ ಕುರಿತು ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಲಾಗುವುದು. ಈಗಾಗಲೇ ಹಂಪಿ ಮೃಗಾಲಯ, ಬೆಳಗಾವಿಹಾಗೂ ಗದಗ ಕಿರು ಮೃಗಾಲಯಗಳನ್ನು ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗಿದೆ. ಮೈಸೂರಿನಲ್ಲಿ ಲಾಕ್‌ಡೌನ್‌ ತೆರವಾದ ನಂತರ ಚಾಮರಾಜೇಂದ್ರ ಮೃಗಾಲಯದಲ್ಲಿ ಪ್ರವಾಸಿಗರಿಗೆ ಪ್ರವೇಶ ನೀಡಲಾಗುವುದು ಎಂದು ಅವರು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಟ ದರ್ಶನ್‌ ಅವರ ಕರೆಯ ಮೇರೆಗೆ ಪ್ರಾಧಿಕಾರಕ್ಕೆ ಒಟ್ಟು ₹ 2.92 ಕೋಟಿ ದೇಣಿಗೆ ಹರಿದು ಬಂದಿದೆ. ಆ್ಯಪ್‌ ಮೂಲಕ ₹ 1.94 ಕೋಟಿ ಮತ್ತು ನೇರವಾಗಿ ₹ 97.99 ಲಕ್ಷ ದೇಣಿ ಬಂದಿದೆ. ದತ್ತು ಪಡೆದವರಲ್ಲಿ ನಟಿ ಅಮೂಲ್ಯ ಸೇರಿದಂತೆ ಹಲವು ಮಂದಿ ಚಿತ್ರರಂಗದ ಕಲಾವಿದರು ಇದ್ದಾರೆ. ಪ್ರಾಣಿಗಳನ್ನು ದತ್ತು ಪಡೆದ ಎಲ್ಲರಿಗೂ ನಟ ದರ್ಶನ ಅವರಿಂದಲೇ ಪ್ರಮಾಣಪತ್ರ ಕೊಡಿಸಲಾಗುವುದು ಎಂದು ಹೇಳಿದರು.‌

ಎಲ್.ಆರ್.ಮಹದೇವಸ್ವಾಮಿ
ಎಲ್.ಆರ್.ಮಹದೇವಸ್ವಾಮಿ

ಪ್ರಾಧಿಕಾರಕ್ಕೆ 2018–19ರಲ್ಲಿ ₹ 58.84 ಲಕ್ಷ, 2019–20ರಲ್ಲಿ ₹ 66.49 ಲಕ್ಷ ಆದಾಯ ಬಂದಿದ್ದರೆ, 2020–21ರಲ್ಲಿ ಕೇವಲ ₹ 24.26 ಲಕ್ಷ ಆದಾಯವಷ್ಟೇ ಬಂದಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಮೃಗಾಲಯಕ್ಕೆ ನೆರವಾದ ನಟ ದರ್ಶನ್ ಹಾಗೂ ಕಳೆದ ವರ್ಷ ₹ 3.5 ಕೋಟಿ ದೇಣಿಗೆ ಬರುವುದಕ್ಕೆ ಸಹಕರಿಸಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೂ ಕೃತಜ್ಞತೆ ಅರ್ಪಿಸಲಾಗುವುದು ಎಂದರು.

ಎಲ್ಲ ಮೃಗಾಲಯದಲ್ಲೂ ಪ್ರಾಣಿಮನೆಗೆ ಹೋಗುವ ಸಿಬ್ಬಂದಿಗೆ ಆಗಾಗ್ಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಪ್ರತಿ ಬಾರಿಯೂ ಅವರು ಸ್ಯಾನಿಟೈಸ್‌ ಹಾಕಿಕೊಂಡೇ ಪ್ರಾಣಿಮನೆ ಪ್ರವೇಶಿಸುತ್ತಾರೆ. ಜತೆಗೆ, ಮಾಸ್ಕ್‌ ಧರಿಸುವುದನ್ನೂ ಕಡ್ಡಾಯಗೊಳಿಸಲಾಗಿದೆ. ಮೃಗಾಲಯಗಳನ್ನು ನಿತ್ಯ ಮೂರು ಬಾರಿ ಸ್ಯಾನಿಟೈಸ್ ಮಾಡುವ ಮೂಲಕ ಎಲ್ಲ ಬಗೆಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT