ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಾಂತ್ಯ ಕರ್ಫ್ಯೂ: ಮೈಸೂರು ಅರಮನೆ, ಮೃಗಾಲಯಕ್ಕೆ ಇಲ್ಲ ಪ್ರವೇಶ

Last Updated 14 ಆಗಸ್ಟ್ 2021, 5:08 IST
ಅಕ್ಷರ ಗಾತ್ರ

ಮೈಸೂರು: ಗಡಿ ಜಿಲ್ಲೆಗಳಲ್ಲಿ ಕೋವಿಡ್‌ ಪ್ರಕರಣಗಳ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹೇರಿರುವ ವಾರಾಂತ್ಯ ಕರ್ಫ್ಯೂ ಸತತ 2ನೇ ವಾರವೂ ಜಿಲ್ಲೆಯಲ್ಲಿ ಮುಂದುವರಿಯಲಿದೆ.

ದಿನಸಿ ಹಾಗೂ ಇತರೆ ಅಗತ್ಯ ವಸ್ತುಗಳ ಮಾರಾಟದ ಅಂಗಡಿಗಳು ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ತೆರೆದಿರಲಿವೆ. ಉಳಿದೆಲ್ಲ ಅಂಗಡಿಗಳ ವಹಿವಾಟಿಗೆ ಅವಕಾಶ ಇರುವುದಿಲ್ಲ.

ಆ. 14 ಮತ್ತು 15ರಂದು ಇಲ್ಲಿನ ಮೈಸೂರು ಅರಮನೆ, ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿ ಕೆರೆಗಳು ಸಾರ್ವಜನಿಕ ವೀಕ್ಷಣೆ ಲಭ್ಯವಿರುವುದಿಲ್ಲ. ಮೃಗಾಲಯದ ವಾರದ ರಜಾ ದಿನವಾದ ಆಗಸ್ಟ್ 17ರಂದು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರಲಿದೆ.

ಸ್ವಾತಂತ್ರ್ಯೋತ್ಸವಕ್ಕೆ ಅವಕಾಶ

ಆಗಸ್ಟ್ 15ರಂದು ಬೆಳಿ‌ಗ್ಗೆ 9 ಗಂಟೆಗೆ ಇಲ್ಲಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದ್ದು, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಇಲ್ಲಿ ಸಾರ್ವಜನಿಕರಿಗೆ ಮುಕ್ತ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಆಹ್ವಾನ ಪತ್ರಿಕೆ ಇಲ್ಲವೇ ಪಾಸ್‌ ಹೊಂದಿದವರಿಗಷ್ಟೇ ಪ್ರವೇಶ ಇರಲಿದೆ. ಶಾಲಾ, ಕಾಲೇಜುಗಳಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.

ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಎಂದಿನಂತೆ ಇರಲಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಬಸ್‌ ಸಂಚಾರ ಇರಲಿದೆ ಎಂದು ಮೈಸೂರು ನಗರ ಕೆಎಸ್‌ಆರ್‌ಟಿಸಿ ವಿಭಾಗದ ನಿಯಂತ್ರಣಾಧಿಕಾರಿ ನಾಗರಾಜು ತಿಳಿಸಿದರು.

ಲೋಕ್ ಅದಾಲತ್‌ಗೆ ಅಡ್ಡಿ ಇಲ್ಲ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಆಗಸ್ಟ್ 14ರಂದು ಜಿಲ್ಲೆಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಕಾನೂನು ಪ್ರಕಾರ ರಾಜಿಯಾಗಬಹುದಾದ ಪ್ರಕರಣಗಳನ್ನು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಏರ್ಪಡಿಸಿರುವ ಲೋಕ್ ಅದಾಲತ್‍ ನಡೆಯಲಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT