ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಿಷ ದಸರೆ ಬೇಡವಾದರೆ ನಿಮ್ಮ ದಸರೆಯೂ ಬೇಕಿಲ್ಲ’

ಸಂಸದ ಪ್ರತಾಪಸಿಂಹ ವಿರುದ್ಧ ಆಕ್ರೋಶ; ಮೈಸೂರು ದಸರೆಗೆ ಕಪ್ಪುಬಾವುಟ ಪ್ರದರ್ಶನದ ಎಚ್ಚರಿಕೆ
Last Updated 28 ಸೆಪ್ಟೆಂಬರ್ 2019, 7:25 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಗೆ ಇನ್ನೆರಡು ದಿನ ಬಾಕಿ ಇರುವಂತೆಯೇ, ಮಹಿಷ ದಸರಾ ಆಚರಣೆ ವಿಚಾರವಾಗಿ ಇದ್ದ ಭಿನ್ನಾಭಿಪ್ರಾಯದ ಕುದಿ ಶುಕ್ರವಾರ ಸ್ಫೋಟಗೊಂಡಿದೆ.

ಮಹಿಷ ದಸರಾ ಆಚರಣೆಗೆ ತಡೆಯೊಡ್ಡಿ, ನಿಷೇಧಾಜ್ಞೆ ವಿಧಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮಹಿಷ ದಸರಾ ಆಚರಣಾ ಸಮಿತಿ ಸದಸ್ಯರು, ಮೈಸೂರು ದಸರಾ ಮಹೋತ್ಸವವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

‘ಎಂದಿನಂತೆ ಶಾಂತಿಯುತವಾಗಿ ನಡೆಸಿಕೊಂಡು ಬಂದಿದ್ದ ಈ ಆಚರಣೆಯನ್ನು ಸಂಸದ ಪ್ರತಾಪಸಿಂಹ ಲೇವಡಿ ಮಾಡಿದ್ದಾರೆ; ಸದಸ್ಯರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ’ ಎಂದು ಆರೋಪಿಸಿರುವ ಅವರು, ನಾಡಹಬ್ಬದ ಉತ್ಸವದಲ್ಲಿ ಕಪ್ಪುಬಾವುಟ ಪ್ರದರ್ಶಿಸುವ ಮೂಲಕ ‍ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.

‘ಮಹಿಷ ದಸರಾ ನಿಮಗೆ ಬೇಡವಾದಲ್ಲಿ, ನಮಗೂ ಮೈಸೂರು ದಸರಾ ಬೇಕಿಲ್ಲ’ ಎಂದಿರುವ ಸಮಿತಿಯ ಅಧ್ಯಕ್ಷ ಪುರುಷೋತ್ತಮ್‌, ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ್‌ ಸ್ವಾಮೀಜಿ, ದಸರಾ ಉತ್ಸವದ ಸಂದರ್ಭದಲ್ಲಿ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೂ ಘೇರಾವ್‌ ಹಾಕುವುದಾಗಿ ಎಚ್ಚರಿಸಿದ್ದಾರೆ.

ಘಟನೆ ವಿವರ:ಮಹಿಷ ದಸರಾ ಆಚರಣೆಗಾಗಿ ಸಮಿತಿಯ ಸದಸ್ಯರು ಪುರಭವನದಿಂದ ಮೆರವಣಿಗೆ ಹೊರಟು, ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರ ಪ್ರತಿಮೆಗೆ ಮಾಲಾರ್ಪಣೆ ಮಾಡುವವರಿದ್ದರು. ವೇದಿಕೆ ಕಾರ್ಯಕ್ರಮವನ್ನೂ ಯೋಜಿಸಲಾಗಿತ್ತು. ಆದರೆ, ಈ ಆಚರಣೆಗೆ ಗುರುವಾರ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಬೆಟ್ಟದಲ್ಲಿ ಹಾಗೂ ಪುರಭವನದ ಆವರಣ ಎರಡೂ ಕಡೆ ನಿಷೇಧಾಜ್ಞೆ ಜಾರಿ ಮಾಡಿ ನಗರ ಪೊಲೀಸ್‌ ಆಯುಕ್ತರು ಆದೇಶ ಹೊರಡಿಸಿದ್ದರು. ಬೆಟ್ಟದಲ್ಲಿ ಮಾಡಿದ್ದ ವ್ಯವಸ್ಥೆಯನ್ನು ಸಂಸದ ಪ್ರತಾಪ ಸಿಂಹ ಅವರೇ ಖುದ್ದಾಗಿ ನಿಂತು ತೆರವುಗೊಳಿಸಿದ್ದರು.

ಇದರಿಂದ ಕೆರಳಿದ ಸಮಿತಿಯ ಸದಸ್ಯರು, ನಿಷೇಧಾಜ್ಞೆಯ ನಡುವೆಯೇ ಶುಕ್ರವಾರ ಪುರಭವನದಿಂದ ಮೆರವಣಿಗೆ ಹೊರಟರು. ಆದರೆ, ಆರಂಭದಲ್ಲೇ ಅವರನ್ನು ಪೊಲೀಸರು ತಡೆದರು. ಹೀಗಾಗಿ, ಅಂಬೇಡ್ಕರ್ ಉದ್ಯಾನದಲ್ಲಿ ಮಹಿಷ ದಸರಾ ಆಚರಿಸಿ, ಕಲಾಮಂದಿರದ ಆವರಣದಲ್ಲಿರುವ ಮಹಿಷಾಸುರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.‌ ಈ ವೇಳೆ ಬಿಗಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು.

ಸಂಸದ ಪ್ರತಾಪಸಿಂಹ ವಿರುದ್ಧ ಆಕ್ರೋಶ

ಇದಾದ ಬಳಿಕ ಮೆರವಣಿಗೆ ಹೊರಟ ಸದಸ್ಯರು, ಸಂಸದ ಪ್ರತಾಪಸಿಂಹ ತಮ್ಮನ್ನು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗೆ ಮುಂದಾದರು.

ಸಮಿತಿ ಅಧ್ಯಕ್ಷ ಪುರುಷೋತ್ತಮ್ ಮಾತನಾಡಿ, ‘ಕಳೆದ 6 ವರ್ಷಗಳಿಂದ ಶಾಂತಿಯುತವಾಗಿ ಮಹಿಷ ದಸರಾವನ್ನು ಆಚರಿಸಲಾಗುತ್ತಿತ್ತು. ಆದರೆ, ಈ ಬಾರಿ ಸಂಸದ ಪ್ರತಾಪಸಿಂಹ ಒತ್ತಡ ತಂದು ತಡೆಯೊಡ್ಡಿದ್ದಾರೆ. ಜತೆಗೆ, ನಮ್ಮನ್ನು ಅವಾಚ್ಯವಾಗಿ ನಿಂದಿಸಿದ್ದಾರೆ’ ಎಂದು ಕಿಡಿಕಾರಿದರು.

‘ನಿಮ್ಮ ದೇವತೆಗಳಲ್ಲಿ ಬಹುತೇಕರಲ್ಲಿ ತಾತ–ಮೊಮ್ಮಕ್ಕಳು, ಅಪ್ಪ–ಮಗಳು, ಅಣ್ಣ–ತಂಗಿಯರ ನಡುವೆ ಮದುವೆಯಾಗಿದೆ. ಆದರೆ, ನಮ್ಮ ಪೂರ್ವಜ ಮಹಿಷಾಸುರ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ’ ಎಂದರು. ಮೆರವಣಿಗೆಯುದ್ದಕ್ಕೂ ಪ್ರತಾಪಸಿಂಹ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ, ವಿವಿಧ ಸಂಘಟನೆಗಳ 500ಕ್ಕೂ ಹೆಚ್ಚು ಜನರು ‍ಭಾಗವಹಿಸಿದ್ದರು.

ಅಪಚಾರ ನಿಲ್ಲಿಸಿದ್ದು ತಪ್ಪೇ?

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪಸಿಂಹ, ‘ನಾಡದೇವತೆ ಚಾಮುಂಡೇಶ್ವರಿಯ ಮೂರ್ತಿಯನ್ನು ಅಂಬಾರಿಯಲ್ಲಿಟ್ಟು ಸರ್ಕಾರ ಪ್ರತಿವರ್ಷ ದಸರೆ ಆಚರಿಸುತ್ತಿದೆ. ಆದರೆ, ಜಿಲ್ಲಾಡಳಿತ ಈ ಆಚರಣೆಗೂ ಮುಂಚೆ ಆಕೆಯನ್ನು ಬಯ್ಯುವ ಮಹಿಷ ದಸರಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಇದನ್ನು ತಡೆದು, ಕೋಟ್ಯಂತರ ಮಂದಿಯ ಆರಾಧ್ಯ ದೈವ ಚಾಮುಂಡೇಶ್ವರಿಗೆ ಅಪಚಾರ ಎಸಗುವುದನ್ನು ನಿಲ್ಲಿಸಿರುವುದು ತಪ್ಪೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT