ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ.1ಕ್ಕೆ ದಸರಾ ಲೆಕ್ಕಪತ್ರ ಮಂಡನೆ: ಸಚಿವ ಎಸ್‌.ಟಿ.ಸೋಮಶೇಖರ್ ಹೇಳಿಕೆ

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಹೇಳಿಕೆ
Last Updated 27 ಅಕ್ಟೋಬರ್ 2020, 16:21 IST
ಅಕ್ಷರ ಗಾತ್ರ

ಮೈಸೂರು: ‘ಕರ್ನಾಟಕ ರಾಜ್ಯೋತ್ಸವದಂದು (ನ.1) 410ನೇ ದಸರಾ ಆಚರಣೆಯ ಲೆಕ್ಕಪತ್ರ ಮಂಡಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಮಂಗಳವಾರ ಇಲ್ಲಿ ಪ್ರಕಟಿಸಿದರು.

‘ದಸರಾ ಆಚರಣೆಗಾಗಿ ರಾಜ್ಯ ಸರ್ಕಾರ ₹ 10 ಕೋಟಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ₹ 5 ಕೋಟಿ ಅನುದಾನ ನೀಡಬೇಕು ಎಂಬುದು ನಿರ್ಧಾರವಾಗಿತ್ತು. ಇದರಲ್ಲಿ ಸರ್ಕಾರದ ಅನುದಾನವನ್ನಷ್ಟೇ ಬಳಸಿಕೊಳ್ಳಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಜಿಲ್ಲಾಡಳಿತಕ್ಕೆ ಈಗಾಗಲೇ ಖರ್ಚು–ವೆಚ್ಚದ ಲೆಕ್ಕ ಸಿದ್ಧಪಡಿಸುವಂತೆ ಸೂಚಿಸಿರುವೆ. ಮುಖ್ಯಮಂತ್ರಿ ಬಳಿ ಚರ್ಚಿಸಿ ಉಳಿಕೆ ಹಣವನ್ನು ಯಾವುದಕ್ಕೆ ಬಳಸಬೇಕು ಎಂಬುದನ್ನು ನಿರ್ಧರಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

‘ಮುಖ್ಯಮಂತ್ರಿಯ ಅನುಮತಿ ಪಡೆದೇ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ರಾಜ್ಯೋತ್ಸವದ ತನಕ ಆಯಕಟ್ಟಿನ ಪ್ರದೇಶಗಳಲ್ಲಿ ದೀಪಾಲಂಕಾರ ಉಳಿಸಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಸೋಮಶೇಖರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಈ ಬಾರಿಯ ದಸರಾ ಮಹೋತ್ಸವ ಐತಿಹಾಸಿಕವಾಗಿ ನೆನಪು ಉಳಿಯುವಂತಹ ಕಾರ್ಯಕ್ರಮ. ಸರಳವಾಗಿ, ಸಾಂಪ್ರದಾಯಿಕವಾಗಿ, ವರ್ಚುವಲ್ ಆಗಿ ಆಚರಿಸಲಾಯಿತು’ ಎಂದು ಹೇಳಿದರು.

‘ದಸರಾ ಮಹೋತ್ಸವದಲ್ಲಿ ನಮ್ಮನ್ನಗಲಿದ ಗಣ್ಯರೊಬ್ಬರ ಹೆಸರಿನಲ್ಲಿ ನುಡಿನಮನ ಕಾರ್ಯಕ್ರಮ ಆಯೋಜಿಸಿದ್ದು ಸಹ ಇದೇ ಮೊದಲು’ ಎಂದು ಸೋಮಶೇಖರ್ ತಿಳಿಸಿದರು.

‘ದಸರಾ ಸಂದರ್ಭದಲ್ಲಿ ಕೊರೊನಾ ವೈರಸ್‌ ಪತ್ತೆ ಪರೀಕ್ಷೆಯನ್ನು ಹೆಚ್ಚಿಸಲಾಯಿತು. ಪರೀಕ್ಷೆಯ ಪ್ರಮಾಣ ಹೆಚ್ಚಾದರೂ, ಸೋಂಕಿತರ ಸಂಖ್ಯೆ ಸೆಪ್ಟೆಂಬರ್‌ಗೆ ಹೋಲಿಸಿದಾಗ ಕಡಿಮೆ ಬಂದಿದ್ದು ಸಮಾಧಾನಕರ ಸಂಗತಿ’ ಎಂದು ಹೇಳಿದರು.

‘ಸಿದ್ದರಾಮಯ್ಯ ಧಮ್‌ ನಮ್ಗೂ ಗೊತ್ತಿದೆ’

‘ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಧಮ್‌ ಎಷ್ಟಿದೆ ಎಂಬುದು ನಮಗೂ ಗೊತ್ತಿದೆ’ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಗರಂ ಆದರು.

‘ಧಮ್ ಇದ್ರೆ ಅಧಿವೇಶನ ಕರೆಯಲಿ’ ಎಂದು ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿರುವುದಕ್ಕೆ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಸಚಿವರು, ‘ಸಿದ್ದರಾಮಯ್ಯ ಅವರ ಧಮ್‌ ಏನು ಎಂಬುದನ್ನು ಹತ್ತಿರದಿಂದ ನೋಡಿದ್ದೇನೆ. ಹೊರಗೆ ಏನು ಮಾತನಾಡ್ತಾರೆ, ಸದನದ ಒಳಗೆ ಏನು ಮಾತನಾಡುತ್ತಾರೆ ಅಂತ ಎಲ್ಲಾ ಚೆನ್ನಾಗಿ ಗೊತ್ತು’ ಎಂದು ಟಾಂಗ್‌ ನೀಡಿದರು.

‘ಸಿದ್ದರಾಮಯ್ಯ ಆಟ ಏನು ನಡೆಯಲ್ಲ. ಜನಪರ ಕಾಳಜಿಯಿಂದ ಅಧಿವೇಶನ ಕರೆದಾಗಲೇ ಬಾಯ್ಕಟ್‌ ಮಾಡಿದವರು. ನಮ್ಮ ಧಮ್‌ ನೀವ್ಯಾಕೆ ಚೆಕ್ ಮಾಡ್ತೀರಾ’ ಎಂದು ಸಹಕಾರ ಸಚಿವರು ತಿರುಗೇಟು ನೀಡಿದರು.

‘ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಮುನಿರತ್ನ ಇದೀಗ ಸೆಟ್‌ಟಾಪ್‌ ಬಾಕ್ಸ್‌ ಹಂಚಿಲ್ಲ. ಚುನಾವಣೆಗೂ ಮುನ್ನವೇ ಹಂಚಿದ್ದಾರೆ. ಮುನಿರತ್ನ ಸಿನಿಮಾ, ಕೇಬಲ್ ಉದ್ಯಮದಲ್ಲೂ ಇದ್ದಾರೆ. ನೀತಿ ಸಂಹಿತೆ ಉಲ್ಲಂಘನೆಯಾಗಿದ್ದರೆ ಚುನಾವಣಾ ಆಯೋಗದ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಸೋಮಶೇಖರ್‌ ಉತ್ತರಿಸಿದರು.

ಮಾವುತರು–ಕಾವಾಡಿಗಳಿಗೆ ಗೌರವಧನ

ನಾಡಹಬ್ಬ ಮೈಸೂರು ದಸರಾದ ಜಂಬೂ ಸವಾರಿಯನ್ನು ಅಚ್ಚುಕಟ್ಟಾಗಿ ಯಶಸ್ವಿಗೊಳಿಸಿದ ಗಜಪಡೆಯ ಮಾವುತರು ಹಾಗೂ ಕಾವಾಡಿಗಳಿಗೆ ಸಚಿವ ಎಸ್.ಟಿ.ಸೋಮಶೇಖರ್ ಗೌರವ ಧನ ವಿತರಿಸಿದರು.

ಅರಮನೆ ಆವರಣದಲ್ಲಿನ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗ ಅಭಿಮನ್ಯು ನೇತೃತ್ವದ ವಿಕ್ರಮ, ಗೋಪಿ, ವಿಜಯಾ, ಕಾವೇರಿ ಆನೆಗಳಿಗೆ ಪೂಜಾ ಸಲ್ಲಿಸಿದ ಸಚಿವರು ಕಬ್ಬು, ಹಣ್ಣು–ಬೆಲ್ಲ ನೀಡಿದರು.

‘ಮೊದಲ ಬಾರಿಗೆ ಅಭಿಮನ್ಯು ಆನೆಯು ಚಿನ್ನದ ಅಂಬಾರಿ ಹೊರುವಲ್ಲಿ ಯಶಸ್ವಿಯಾಯ್ತು. ಸಂಪ್ರದಾಯದಂತೆ ಜಂಬೂ ಸವಾರಿಯಲ್ಲಿ ಭಾಗವಹಿಸಿದ ಗಜಪಡೆಗೆ ಪೂಜೆ ಸಲ್ಲಿಸಿ, ಮಾವುತರು ಹಾಗೂ ಕಾವಾಡಿಗರಿಗೆ ಗೌರವ ಧನ ವಿತರಿಸಲಾಯಿತು’ ಎಂದು ಮಾಧ್ಯಮದವರಿಗೆ ಸಚಿವರು ಪ್ರತಿಕ್ರಿಯಿಸಿದರು.

‘ಮಾವುತರು, ಕಾವಾಡಿಗಳಿಗೆ ಗೌರವ ಧನವಾಗಿ ತಲಾ ₹ 10 ಸಾವಿರ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗುವುದು’ ಎಂದು ಸೋಮಶೇಖರ್ ಹೇಳಿದರು.


ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಡಿಸಿಎಫ್ ಅಲೆಕ್ಸಾಂಡರ್, ಗಜಪಡೆಯ ವೈದ್ಯ ಡಾ.ನಾಗರಾಜ್ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT