ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ದಸರಾ ಮೆರವಣಿಗೆ–ತಾಲೀಮು ಯಶಸ್ವಿ

ಜಂಬೂಸವಾರಿಗೆ ಅರಮನೆ ಆವರಣ ಸಿದ್ಧ–ಅಭ್ಯಾಸದ ವೇಳೆ ಸೈ ಎನಿಸಿಕೊಂಡ ಅಭಿಮನ್ಯು
Last Updated 25 ಅಕ್ಟೋಬರ್ 2020, 8:08 IST
ಅಕ್ಷರ ಗಾತ್ರ

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಆಯುಧಪೂಜೆ ಸಡಗರಕ್ಕೆ ಸಿದ್ಧತೆ ನಡೆಯುತ್ತಿದ್ದರೆ, ಇತ್ತ ಅರಮನೆ ಆವರಣದಲ್ಲಿ ಜಂಬೂಸವಾರಿಯದ್ದೇ ಧ್ಯಾನ.

ಸೋಮವಾರ ನಡೆಯಲಿರುವ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿಗೆ ಪೂರ್ವಭಾವಿಯಾಗಿ ಶನಿವಾರ ನಡೆದ ಅಂತಿಮ ತಾಲೀಮು ಯಶಸ್ವಿಯಾಗಿ ಕೊನೆಗೊಂಡಿದೆ.

ಮರದ ಅಂಬಾರಿಯಲ್ಲಿ ಇರಿಸಿದ್ದ ಮರಳಿನ ಮೂಟೆ ಹೊತ್ತು ನಡೆದು ಬಂದ ಕ್ಯಾಪ್ಟನ್‌ ಅಭಿಮನ್ಯು ಆನೆಗೆ ಅರಮನೆ ಮುಂಭಾಗದಲ್ಲಿ ಪೊಲೀಸ್‌ ಕಮಿಷನರ್‌ ಡಾ.ಚಂದ್ರಗುಪ್ತ ಪುಷ್ಪಾರ್ಚನೆ ನೆರವೇರಿಸಿದರು. ಬಳಿಕ ಗೌರವ ವಂದನೆ ಸಲ್ಲಿಸಿದರು.

ಅವರಿಗೆ ಡಿಸಿಎಫ್‌ (ವನ್ಯಜೀವಿ) ಎಂ.ಜಿ.ಅಲೆಕ್ಸಾಂಡರ್‌ ಹಾಗೂ ಇತರ ಅಧಿಕಾರಿಗಳು ಸಾಥ್‌ ನೀಡಿದರು. ಈ ಸಂದರ್ಭದಲ್ಲಿ ಫಿರಂಗಿ ಗಾಡಿಗಳಿಂದ
21 ಸುತ್ತು ಕುಶಾಲತೋಪು ಸಿಡಿಸಲಾಯಿತು.

ವಿವಿಧ ಕಲಾತಂಡಗಳು ಅರಮನೆ ಮುಂಭಾಗ ಪ್ರದರ್ಶನ ನೀಡಿ ವಿಜಯದಶಮಿ ಮೆರವಣಿಗೆಗೆ ಸಿದ್ಧತೆ ನಡೆಸಿದವು. ಕರ್ನಾಟಕ ವಾದ್ಯ ತಂಡ ಹಾಗೂ ಅಶ್ವಾರೋಹಿ ಪಡೆ ಭಾಗವಹಿಸಿದ್ದವು. ಅಭಿಮನ್ಯು ಅಕ್ಕಪಕ್ಕದಲ್ಲಿಕುಮ್ಕಿ ಆನೆಗಳಾದ ಕಾವೇರಿ, ವಿಜಯಾ ಇದ್ದವು.

ಈ ಬಾರಿ ದಸರಾ ಮೆರವಣಿಗೆ ಅರಮನೆ ಆವರಣಕ್ಕೆ ಸೀಮಿತಗೊಂಡಿರುವುದರಿಂದ ನಿಗದಿತ ಸ್ಥಳದಲ್ಲಿ ತಾಲೀಮು ನಡೆಸಲಾಯಿತು.

ಅರಮನೆ ಆವರಣದಲ್ಲಿನ ಅಂಬಾರಿ ಕಟ್ಟುವ ಜಾಗದಿಂದ
ವರಹಾ ದ್ವಾರಕ್ಕೆ ಗಜಪಡೆ ಬರಲಿದೆ. ಬಳಿಕ ಪುಷ್ಪಾರ್ಚನೆಗಾಗಿ ಅರಮನೆ ಮುಂಭಾಗ ನಿಂತು, ಬಲರಾಮ ದ್ವಾರದ ಕಡೆ ತೆರಳಲಿದೆ. ಅಲ್ಲಿಂದ ಎಡಕ್ಕೆ ತಿರುವು ಪಡೆದು, ಮತ್ತೆ
ಎಡಕ್ಕೆ ಸಾಗಿ ಅಂಬಾರಿ ಕಟ್ಟುವ ಜಾಗದಲ್ಲೇ ಮೆರವಣಿಗೆ ಸಮಾಪ್ತಿಗೊಳ್ಳಲಿದೆ.

ಅರಮನೆಯಲ್ಲೂ ಪೂಜೆ: ಶರನ್ನವರಾತ್ರಿ ಅಂಗವಾಗಿ ರಾಜವಂಶಸ್ಥರು ಅರಮನೆಯಲ್ಲಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಪೂಜಾ ಕೈಂಕರ್ಯ ಮುಂದುವರಿಸಿದ್ದಾರೆ.

ಎಂಟನೇ ದಿನ ದುರ್ಗಾದೇವಿಯನ್ನು ಪೂಜಿಸಲಾಯಿತು. ಪಟ್ಟದಾನೆ, ಪಟ್ಟದ ಕುದುರೆ, ಪಟ್ಟದ ಹಸು, ಪಟ್ಟದ ಒಂಟೆಯನ್ನು ಪೂಜೆಗೆಂದು ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಪಟ್ಟದ ಕುದುರೆ ಮತ್ತೆ ಗಾಬರಿಗೊಂಡಿತು. ತಕ್ಷಣವನ್ನೇ ಅದನ್ನು ನಿಯಂತ್ರಿಸಲಾಯಿತು.

ಜಂಬೂಸವಾರಿ–ಕಲಾ ತಂಡ ನಿಯೋಜನೆ

ಈ ಬಾರಿ ಜಂಬೂಸವಾರಿಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಕಲಾತಂಡಗಳು ಪಾಲ್ಗೊಳ್ಳುತ್ತಿವೆ. ಕಲಾತಂಡಗಳು ಹಾಗೂ ಸ್ತಬ್ಧಚಿತ್ರಗಳು ಸಾಗುವ ಕ್ರಮಾಂಕದ ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಚನ್ನಪ್ಪ ಬಿಡುಗಡೆ ಮಾಡಿದ್ದಾರೆ.

ಸೋಮವಾರ ಮಧ್ಯಾಹ್ನ 2.59 ರಿಂದ 3.20 ರವರೆಗೆ ನಂದಿಧ್ವಜ ಪೂಜೆ ಹಾಗೂ ವೀರಗಾಸೆ ಇರಲಿದೆ. ಮೆರವಣಿಗೆಯಲ್ಲಿ 3.30 ರಿಂದ 3.40 ರವರೆಗೆ ನಿಶಾನೆ ಆನೆ, ನೌಪತ್ ಆನೆ ಸಾಗಲಿವೆ. ಬಳಿಕ ನಾದಸ್ವರ ಹಾಗೂ ವೀರಗಾಸೆ ಕಲಾವಿದರು ಪ್ರದರ್ಶನ ನೀಡುತ್ತಾ ಮುಂದೆ ಹೋಗಲಿದ್ದಾರೆ.

ಆನಂತರ ಆರೋಗ್ಯ ಇಲಾಖೆ ಸ್ತಬ್ಧಚಿತ್ರ ಸಾಗಲಿದೆ. ಚೆಂಡೆ ಮೇಳ, ಮರ ಗಾಲು ವೇಷ, ಚಿಲಿಪಿಲಿ ಗೊಂಬೆ ಕಲಾವಿದರು ಪ್ರದರ್ಶನ ನೀಡಲಿದ್ದಾರೆ. 3.50 ರಿಂದ 4.15ರವರೆಗೆ ಕರ್ನಾಟಕ ಪೊಲೀಸ್‌ ಬ್ಯಾಂಡ್ ವತಿಯಿಂದ ಆನೆ ಬಂಡಿ ಸ್ತಬ್ಧಚಿತ್ರ, ಬಳಿಕ ಅಶ್ವಾರೋಹಿ ಪಡೆಯ ಪ್ರಧಾನ ಕಮಾಂಡೆಂಟ್‌–ಕೆಎಆರ್‌ಪಿ ಮೌಂಟೆಂಡ್‌ ಕಂಪನಿ ಸಾಗಲಿದೆ. ಆನಂತರ ಪಟ್ಟದ ನಾದಸ್ವರ ಇರಲಿದೆ.

ಚಿನ್ನದ ಅಂಬಾರಿಯಲ್ಲಿರುವ ನಾಡದೇವಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಕೆ, ಬಳಿಕ ಅಶ್ವಾರೋಹಿ ಪಡೆ, ಫಿರಂಗಿ ಗಾಡಿಗಳು, ಅರಣ್ಯ ಇಲಾಖೆ ವೈದ್ಯರ ತಂಡ, ಅಗ್ನಿಶಾಮಕ ತಂಡ ಹಾಗೂ ತುರ್ತುಚಿಕಿತ್ಸಾ ವಾಹನ ಸಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT