ಮಂಗಳವಾರ, ಜನವರಿ 28, 2020
23 °C
ಕೂಲಿಯಾಳು ಸಿಗದೆ ಯಂತ್ರಗಳ ಮೊರೆ ಹೋದ ರೈತರು

ವರುಣಾ: ಭತ್ತದ ಕಟಾವು ವಿಳಂಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವರುಣಾ: ರೈತರು ಭತ್ತದ ಕಟಾವು ಮಾಡಲು ಕೂಲಿ ಆಳುಗಳ ಬದಲಾಗಿ ಭತ್ತದ ಕಟಾವು ಯಂತ್ರಗಳ ಮೊರೆ ಹೋಗಿದ್ದಾರೆ. ಆದರೆ, ಯಂತ್ರಗಳ ಕೊರತೆಯಿಂದಾಗಿ ಬಹುತೇಕ ಗ್ರಾಮಗಳಲ್ಲಿ ಭತ್ತ ಕಟಾವು ವಿಳಂಬವಾಗುತ್ತಿದೆ.

ಹೊಸಕೋಟೆ, ತುಮ್ಮನೇರಳೆ, ಆಲತ್ತೂರು, ಸುತ್ತೂರು ನಂದಿಗುಂದಪುರ, ನಂದಿಗುಂದ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಭತ್ತ ಬೆಳೆದು ನಿಂತಿದೆ. ಕಟಾವು ಮಾಡಲು ಕೂಲಿ ಆಳುಗಳು ಸಿಗುತ್ತಿಲ್ಲ. ಹೀಗಾಗಿ, ಯಂತ್ರಗಳನ್ನೇ ಅವಲಂಬಿಸಬೇಕಾದ ಅನಿವಾರ್ಯವಿದೆ. ಆದರೆ, ಸರಿಯಾದ ಸಮಯಕ್ಕೆ ಯಂತ್ರಗಳು ಬಾರದೆ ರೈತರು ಪರದಾಡುವಂತಾಗಿದೆ.

ನಾಲ್ಕು ವಿವಿಧ ಯಂತ್ರಗಳು ಲಭ್ಯವಿದ್ದು, ಒಂದು ಎಕರೆ ಕಟಾವು ಮಾಡಲು ₹1,800ರಿಂದ ₹2,800 ರವರೆಗೆ ದರ ನಿಗದಿ ಮಾಡಲಾಗಿದೆ. ಕೆಲ ದಲ್ಲಾಳಿಗಳು ಯಂತ್ರಗಳನ್ನು ಪಡೆದು ಕಟಾವು ಮಾಡುತ್ತಾರೆ.

ಈ ಯಂತ್ರಗಳು ತಮಿಳುನಾಡಿನಿಂದ ಬಂದಿದ್ದು, ನರಸೀಪುರದ ಮೂಲಕ ಕುಪ್ಪೇಗಾಲ, ಸಿದ್ದರಾಮನಹುಂಡಿ, ಯಡಕೊಳ ಹೀಗೆ ವಿವಿಧ ಭಾಗದ ಭತ್ತದ ಕಟಾವು ಮಾಡುತ್ತಿದ್ದು, ಅಲ್ಲಿ ಮುಗಿದ ನಂತರ ಇತ್ತ ಕಡೆ ಬರುತ್ತಾರೆ ಎಂದು ಹೊಸಕೋಟೆ ರೈತ ರಾಜಶೇಖರ್ ತಿಳಿಸಿದರು.

15 ದಿನಗಳ ಹಿಂದೆಯೇ ಭತ್ತ ಕಟಾವು ಮಾಡಬೇಕಿತ್ತು. ತೆನೆಗಳು ಭಾರವಾಗಿ ನೆಲ ಕಚ್ಚುವ ಜೊತೆಗೆ ಭತ್ತದ ಕಾಳುಗಳು ಉದುರುವ ಸಂಭವವಿದೆ ಎಂದು ತುಮ್ಮನೇರಳೆ ರೈತ ರಂಗಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಈ ಯಂತ್ರವು ದಿನಕ್ಕೆ ಸುಮಾರು ಎಂಟು ಎಕರೆ ಭತ್ತವನ್ನು ಕಟಾವು ಮಾಡುತ್ತದೆ. ಯಂತ್ರ ಕೊಯ್ಲು ಮಾಡಿ ಹೊರ ಹಾಕುವ ಭತ್ತದ ಹುಲ್ಲು ಪಡೆಯಲು ಆಳುಗಳನ್ನು ಅವಲಂಬಿಸಬೇಕಾಗಿದೆ ಎಂದು ಕುಪ್ಪೇಗಾಲ ಮಹೇಂದ್ರ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು