ಕಾವೇರಿ ನೀರು ಕೊಡ್ರಿ; ಸಹಕಾರ ಕೊಡ್ರಿ..!

ಗುರುವಾರ , ಜೂಲೈ 18, 2019
22 °C
ಚಾಮುಂಡಿ ಬೆಟ್ಟದ ರಸ್ತೆ ಬದಿಯೇ ತಾವರೆಕಟ್ಟೆ ಗ್ರಾಮಸ್ಥರ ಅಳಲು ಆಲಿಸಿದ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ

ಕಾವೇರಿ ನೀರು ಕೊಡ್ರಿ; ಸಹಕಾರ ಕೊಡ್ರಿ..!

Published:
Updated:
Prajavani

ಮೈಸೂರು: ‘ನಿಮ್ಮೂರಿನಲ್ಲಿ ಕುಡಿಯುವ ನೀರಿಗೆ ತೊಂದರೆಯಿದೆಯಾ..?’ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಚಾಮುಂಡಿಬೆಟ್ಟದ ರಸ್ತೆಯಲ್ಲಿನ ತಾವರೆಕಟ್ಟೆ ಗ್ರಾಮಸ್ಥರನ್ನು ಗುರುವಾರ ಭೇಟಿಯಾಗುತ್ತಿದ್ದಂತೆ ಕೇಳಿದ ಪ್ರಶ್ನೆಯಿದು.

ಮೈಸೂರು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದಾಗಿ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಲಿಕ್ಕಾಗಿ ಬಂದಿದ್ದ ಸಚಿವರು ಚಾಮುಂಡೇಶ್ವರಿ ದರ್ಶನ ಪಡೆದು, ಮರಳುವ ಹಾದಿಯಲ್ಲಿ ತಾವರೆಕಟ್ಟೆ ಗ್ರಾಮಸ್ಥರ ಅಳಲನ್ನು ರಸ್ತೆ ಬದಿಯೇ ಆಲಿಸಿದರು.

ಸಚಿವರನ್ನು ಸುತ್ತುವರಿದ ಗ್ರಾಮಸ್ಥರು, ನಮ್ಮೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ನಮಗೂ ಕುಡಿಯಲು ಕಾವೇರಿ ನೀರು ಕೊಡಿಸಿ ಎಂದು ದುಂಬಾಲು ಬಿದ್ದರು. ಅಧಿಕಾರಿಗಳು ನೀರಿನ ಸಮಸ್ಯೆಯಿಲ್ಲ ಎಂದಿದ್ದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು.

‘ಎಸ್‌ಡಿಎಂ ಕಾಲೇಜಿನವರೆಗೆ ಕಾವೇರಿ ನೀರಿನ ಪೂರೈಕೆಯಿದೆ. ಮಾಜಿ ಶಾಸಕ ವಾಸು ಸಲಹೆಯಂತೆ, ಟ್ಯಾಂಕ್ ನಿರ್ಮಿಸಿ ಬೂಸ್ಟರ್ ಮೂಲಕ ಪೈಪ್‌ಲೈನ್‌ ಎಸ್ಟಿಮೇಟ್ ಮಾಡಿ ವರದಿ ಕೊಡಿ. ಆದಷ್ಟು ಬೇಗನೆ ಕುಡಿಯುವ ನೀರು ಪೂರೈಸಿ’ ಎಂದು ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಗೆ ದೇಶಪಾಂಡೆ ಸೂಚಿಸಿದರು.

ನಾಲ್ಕೈದು ಜನರು ಒಟ್ಟಿಗೆ ಸಚಿವರ ಬಳಿ ದೂರುಗಳ ಸುರಿಮಳೆಗೈಯಲಾರಂಭಿಸುತ್ತಿದ್ದಂತೆ, ‘ಐದೈದು ಜನ ಒಟ್ಟಿಗೆ ಮಾತನಾಡಿದ್ರೇ ನಾವ್ ಹುಚ್ಚರಾಗ್ತೀವಿ. ಸಮಸ್ಯೆ ಬಗೆಹರಿಸಲು ನಿಮ್ಮ ಬಳಿಯೇ ಬಂದಾಗ ಸಹಕಾರ ಕೊಡ್ರಿ’ ಎಂದು ಕಂದಾಯ ಸಚಿವರು ಸ್ಥಳದಲ್ಲಿ ನೆರೆದಿದ್ದ ಜನರಿಗೆ ಮನವಿ ಮಾಡಿದರು.

ಕೆರೆಯ ಮಣ್ಣನ್ನು ಇಟ್ಟಿಗೆ ಗೂಡಿಗೆ ಬಳಸಿಕೊಂಡಿದ್ದಾರೆ ಎಂಬ ದೂರನ್ನು ಗ್ರಾಮಸ್ಥರೊಬ್ಬರು ಹೇಳುತ್ತಿದ್ದಂತೆ, ‘ನೀವ್ ಲೀಡ್ರೇನಪ್ಪಾ’ ಎಂದು ದೇಶಪಾಂಡೆ ಪ್ರಶ್ನಿಸಿದರು. ‘ಕೆರೆಯ ಮಣ್ಣು ಫಲವತ್ತಾದ ಗೊಬ್ಬರವಿದ್ದಂತೆ. ರೈತರ ಹೊಲಕ್ಕೆ ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ಕ್ರಮ ಜರುಗಿಸಿ’ ಎಂದು ಸ್ಥಳದಲ್ಲಿದ್ದ ತಹಶೀಲ್ದಾರ್‌ಗೆ ಸೂಚಿಸಿದರು.

ಗ್ರಾಮದ ಹಲವರು ಹಕ್ಕುಪತ್ರದ ಸಮಸ್ಯೆ ಪ್ರಸ್ತಾಪಿಸುತ್ತಿದ್ದಂತೆ ದೇಶಪಾಂಡೆ ಗರಂ ಆದರು. ‘ಜನರಿಗೆ ಕಿರಿಕಿರಿ ಕೊಡೋದು ಒಳ್ಳೆಯದಲ್ಲ. ತಾತನ ಕಾಲದ ಮನೆಗೆ ಸ್ಥಳದಲ್ಲೇ ಹಕ್ಕುಪತ್ರ ವಿತರಿಸಿ’ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್‌ಗೆ ಆದೇಶಿಸಿದರು.

ಮೇಯರ್ ಪುಷ್ಪಲತಾ ಜಗನ್ನಾಥ್, ಜಿ.ಪಂ. ಸಿಇಒ ಕೆ.ಜ್ಯೋತಿ ಸಚಿವರ ಜತೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !