ಗುರುವಾರ , ಸೆಪ್ಟೆಂಬರ್ 29, 2022
26 °C
ನೂತನ ಮೇಯರ್‌ ಶಿವಕುಮಾರ್‌ ಭರವಸೆ

₹ 100 ಕೋಟಿ ವಿಶೇಷ ಅನುದಾನ: ಮೇಯರ್‌ ಶಿವಕುಮಾರ್‌

ಎಂ.ಮಹೇಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೇಂದ್ರದಲ್ಲಿ, ರಾಜ್ಯದಲ್ಲಿ ಹಾಗೂ ಮಹಾನಗರಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದೆ. ಇದರಿಂದಾಗಿ ‘ತ್ರಿಬಲ್‌ ಎಂಜಿನ್‌ ಸರ್ಕಾರ’ ಆದಂತಾಗಿದೆ. ಅಲ್ಲದೇ, ಮೇಯರ್‌ ಮತ್ತು ಉಪ ಮೇಯರ್‌ ಎರಡೂ ಸ್ಥಾನಕ್ಕೂ ಬಿಜೆಪಿಯವರು ಆಯ್ಕೆಯಾಗಿರುವುದು ಇದೇ ಮೊದಲು. ಹೀಗಾಗಿ, ಜನರ ನಿರೀಕ್ಷೆಗಳು ಕೂಡ ಜಾಸ್ತಿ ಇವೆ.

‘ಜನರ ಅಶಯಕ್ಕೆ ತಕ್ಕಂತೆ ಸ್ಪಂದಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇದಕ್ಕಾಗಿ ಮೂಲಸೌಲಭ್ಯಗಳನ್ನು ಒದಗಿಸಲು–ಸುಧಾರಿಸಲು ಆಡಳಿತ ಯಂತ್ರವು ಸದಾ ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳುವ ಕೆಲಸ ಮಾಡುತ್ತೇನೆ’ ಎನ್ನುತ್ತಾರೆ ಮೇಯರ್‌ ಶಿವಕುಮಾರ್‌.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ತಮ್ಮೆದುರಿನ ಸವಾಲುಗಳು ಹಾಗೂ ಯೋಜನೆಗಳನ್ನು ಹಂಚಿಕೊಂಡಿದ್ದಾರೆ.

ಸದ್ಯದ ಸವಾಲುಗಳೇನು?

ಮೈಸೂರು ನಗರದಾದ್ಯಂತ ರಸ್ತೆಗಳು ಗುಂಡಿ ಬಿದ್ದಿವೆ. ಅವುಗಳನ್ನು ಮುಚ್ಚಲು ತುರ್ತಾಗಿ ಕ್ರಮ ಆಗಬೇಕಿದೆ. ಶಾಸಕರಾದ ಎಲ್.ನಾಗೇಂದ್ರ ಮತ್ತು ಎಸ್.ಎ.ರಾಮದಾಸ್ ಅವರವರ ಕ್ಷೇತ್ರಗಳಿಗೆ ವಿಶೇಷ ಅನುದಾನ ತಂದಿದ್ದಾರೆ. ಆದರೆ, ಮಳೆಯಿಂದಾಗಿ ಕಾಮಗಾರಿಗೆ ಅಡ್ಡಿಯಾಗಿದೆ. ದಸರಾ ಸಮೀಪಿಸುತ್ತಿರುವುದರಿಂದ, ಮಳೆ ಮುಂದುವರಿದರೂ ತೊಂದರೆ ಆಗದಂತಹ ಹೊಸ ತಂತ್ರಜ್ಞಾನವನ್ನು ಬಳಸಿ ರಸ್ತೆ ಗುಂಡಿ ಮುಚ್ಚಿಸಲು  ಪ್ರಯತ್ನಿಸಲಾಗುವುದು. ಈ ಬಗ್ಗೆ ಚರ್ಚಿಸುವುದಕ್ಕಾಗಿ ಸೆ.12 (ಸೋಮವಾರ) ಅಧಿಕಾರಿಗಳ ಸಭೆ ಕರೆದಿದ್ದೇನೆ. ಬಳಿಕ ಮಾಜಿ ಮೇಯರ್‌ಗಳು, ಸಂಘ–ಸಂಸ್ಥೆಗಳವರು, ತಾಂತ್ರಿಕ ಪರಿಣತರು ಮೊದಲಾದವರು ಸಭೆ ನಡೆಸಿ, ಅವರ ಸಲಹೆಯಂತೆ ನಗರದ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಲಾಗುವುದು.

ವ್ಯಾಪಾರ ಪರವಾನಗಿ ತೆರಿಗೆ ಪಡೆದುಕೊಳ್ಳಲು ಆನ್‌ಲೈನ್‌ ವ್ಯವಸ್ಥೆಯನ್ನು ಸುಗಮಗೊಳಿಸಲಾಗುವುದು. ಬಹುತೇಕ ಪಾರ್ಕ್‌ಗಳು ಹಾಳಾಗಿರುವುದು ಗಮನದಲ್ಲಿದೆ. ಅವುಗಳ ನಿರ್ವಹಣೆಗೆ ಗಮನಕೊಡಲಾಗುವುದು. ಇದಕ್ಕಾಗಿ ನಗರದ ಪ್ರಮುಖರ ಮನೆಗಳಿಗೆ ಭೇಟಿ ನೀಡಿ ಸಲಹೆ–ಸೂಚನೆ ಪಡೆಯುವ ಕಾರ್ಯಕ್ರಮ ಹಮ್ಮಿಕೊಂಡಿರುವೆ.

ಸ್ವಚ್ಛ ನಗರಿ ರ‍್ಯಾಂಕಿಂಗ್‌ ಕುಸಿಯುತ್ತಿದೆಯಲ್ಲಾ?

ಸ್ವಚ್ಛ ನಗರಿಯಲ್ಲಿ 4, 5ನೇ ಸ್ಥಾನಕ್ಕೆ ಇಳಿದಿದ್ದೇವೆ. ಮತ್ತೆ ಮೊದಲ ಸ್ಥಾನಕ್ಕೆ ತರಬೇಕಾಗಿದೆ. ಇದಕ್ಕಾಗಿ ಸ್ವಚ್ಛತಾ ಕಾರ್ಯ ಸಮರ್ಪಕವಾಗಿ ನಡೆಯಬೇಕಾಗುತ್ತದೆ. ಹೀಗಾಗಿ, ಎಲ್ಲ ಪೌರಕಾರ್ಮಿಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಯೋಜನೆ ರೂಪಿಸಲಾಗುವುದು. ಪೌರಕಾರ್ಮಿಕರ ಕಲಸ ಕಾಯಂಗೆ ಸರ್ಕಾರ ಕ್ರಮ ವಹಿಸಿದೆ. ಆ ಸಂಘದ ನಾಯಕರನ್ನು ವಿಶ್ವಾಕ್ಕೆ ತೆಗೆದುಕೊಂಡು, ದಸರಾ ಸಮಯದಲ್ಲಿ ಸ್ವಚ್ಛತೆಗೆ ತೊಡಕಾಗದಂತೆ ನೋಡಿಕೊಳ್ಳಲಾಗುವುದು.

ದಸರಾ ಸಮೀಪಿಸಿದರೂ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಿಲ್ಲವಲ್ಲ?

ರಸ್ತೆಗಳ ನಿರ್ಮಾಣಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು. ಸುಣ್ಣ–ಬಣ್ಣ ಬಳಿಯುವುದು, ವೃತ್ತಗಳ ಸೌಂದರ್ಯೀಕರಣಕ್ಕೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ದಸರಾ ಯಶಸ್ಸಿಗೆ ಶ್ರಮಿಸಲಾಗುತ್ತದೆ.

ದಸರೆಗೆ ವಿಶೇಷ ಅನುದಾನ ದೊರೆಯುವುದೇ?

ಖಂಡಿತವಾಗಿಯೂ ಈ ಬಾರಿ ವಿಶೇಷ ಅನುದಾನ ಕೇಳುವೆ. ನಾಡಹಬ್ಬವನ್ನು ಅದ್ಧೂರಿಯಾಗಿ ನಡೆಸುವುದಾಗಿ ಸರ್ಕಾರ ಹೇಳಿರುವುದರಿಂದಾಗಿ, ನಗರದಲ್ಲಿ ಅಭಿವೃದ್ಧಿ ಕಾಮಗಾರಿಗೆಂದೇ ಪಾಲಿಕೆಗೆಂದೇ ವಿಶೇಷವಾಗಿ ₹ 25 ಕೋಟಿ ಅನುದಾನವನ್ನು ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಕೇಳುವೆ.

ಆಡಳಿತ ವ್ಯವಸ್ಥೆ ಜಡ್ಡುಗಟ್ಟಿದೆಯಲ್ಲಾ?

ಅಧಿಕಾರಿಗಳು ಪರಿಪೂರ್ಣವಾಗಿ ನಮ್ಮ ಜೊತೆ ಸೇರಿ ಕೆಲಸ ಮಾಡಬೇಕಾಗುತ್ತದೆ. ವಾರ್ಡ್‌ಗಳ ಪ್ರದಕ್ಷಿಣೆ ಶುರು ಮಾಡಿ, ಆ ಭಾಗದ ಅಧಿಕಾರಿಗಳನ್ನು ಚುರುಕುಗೊಳಿಸಲಾಗುವುದು. ಜವಾಬ್ದಾರಿ ನಿಗದಿಪಡಿಸಿ ಗುರಿ ಕೊಡಲಾಗುವುದು. ನಿರ್ಲಕ್ಷ್ಯ ವಹಿಸುವವರನ್ನು ಸಹಿಸಲಾಗದು.

ವಿಶೇಷ ಯೋಜನೆಗೆ ಚಿಂತನೆ ಇದೆಯೇ?

ಪಾಲಿಕೆಯ ವ್ಯಾಪ್ತಿಯ ಅಲ್ಲಲ್ಲಿ ಕಟ್ಟಡ ನಿರ್ಮಾಣ ತ್ಯಾಜ್ಯ (ಡೆಬ್ರಿಸ್‌) ನಿರ್ವಹಣೆ–ಮರುಬಳಕೆ ಘಟಕಗಳ ನಿರ್ಮಾಣ ಯೋಜನೆ ಅನುಷ್ಠಾನಗೊಳಿಸಲಾಗುವುದು.

ತ್ರಿಬಲ್ ಎಂಜಿನ್‌ ಸರ್ಕಾರದಲ್ಲಿ ಏನನ್ನು ನಿರೀಕ್ಷಿಸಬಹುದು?

ಕೇಂದ್ರದ ಅನುದಾನವನ್ನು ಸಂಸದರು, ರಾಜ್ಯ ಸರ್ಕಾರದಿಂದ ಅನುದಾನವನ್ನು ಶಾಸಕರು ತರುತ್ತಾರೆ. ಈಗಾಗಲೇ ಸಾವಿರಾರು ಕೋಟಿ ರೂಪಾಯಿ ತಂದಿದ್ದಾರೆ. ಅವರೆಲ್ಲರ ಸಹಕಾರದಿಂದ ಮಹಾನಗರಪಾಲಿಕೆಗೆ ವಿಶೇಷವಾಗಿ ₹ 100 ಕೋಟಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕೋರುತ್ತೇನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು