ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಕ್ಕಟ್ಟಿನಲ್ಲಿ ಪ್ರಜಾಪ್ರಭುತ್ವ; ಎಸ್.ಆರ್.ಹಿರೇಮಠ

ಎಸ್.ಆರ್.ಹಿರೇಮಠ ಕಳವಳ
Last Updated 17 ಮೇ 2019, 20:42 IST
ಅಕ್ಷರ ಗಾತ್ರ

ಮೈಸೂರು: ದೇಶದಲ್ಲಿ ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿದ್ದು, ಈ ಸಂದರ್ಭದಲ್ಲಿ ನಾಗರಿಕ ಸಮಾಜದ ಹೊಣೆಗಾರಿಕೆ ಮಹತ್ವದ್ದಾಗಿದೆ ಎಂದು ಸಿಟಿಜನ್ ಫಾರ್ ಡೆಮಾಕ್ರಸಿ ಅಧ್ಯಕ್ಷ ಎಸ್.ಆರ್.ಹಿರೇಮಠ ತಿಳಿಸಿದರು.

‘ಜನಾಂದೋಲನಗಳ ಮಹಾ ಮೈತ್ರಿ, ಜನಸಂಗ್ರಾಮ ಪರಿಷತ್, ಸಿಟಿಜನ್ ಫಾರ್ ಡೆಮಾಕ್ರಸಿ ಸೇರಿ ದಂತೆ ಹಲವಾರು ಸಂಘಟನೆಗಳು ಜೊತೆಗೂಡಿ ಗಣತಂತ್ರ ವ್ಯವಸ್ಥೆ ಗಂಭೀರ ಬಿಕ್ಕಟ್ಟಿನಲ್ಲಿರುವ ಸಂದರ್ಭದಲ್ಲಿ ಸಂವಿಧಾನ ಬದ್ಧ ಸ್ಥಾನದಲ್ಲಿರುವವರು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ರಾಷ್ಟ್ರಪತಿಗೆ ಬಹಿರಂಗ ಪತ್ರ ಬರೆದಿವೆ. ದೇಶದ 11 ವಲಯಗಳಲ್ಲಿ ಮಾಡಬೇಕಾಗಿರುವ ಬದಲಾವಣೆಗಳ ಬಗ್ಗೆ ಪತ್ರದಲ್ಲಿ ವಿವರಿಸಲಾಗಿದೆ’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಆಡಳಿತಾವಧಿಯಲ್ಲಿ ತುರ್ತು ಪರಿಸ್ಥಿತಿ 20 ಪಟ್ಟು ಹೆಚ್ಚಾಗಿದೆ ಎಂದು ದೂರಿದರು.

ರಾಜ್ಯಪಾಲರೊಬ್ಬರು ಬಿಜೆಪಿಗೆ ಮತ ಹಾಕಿ ಎನ್ನುತ್ತಿದ್ದರೆ, ಮುಖ್ಯಮಂತ್ರಿಯೊಬ್ಬರು ದೇಶದ ಸೈನ್ಯವನ್ನು ಮೋದಿ ಸೈನ್ಯ ಎನ್ನುತ್ತಾರೆ. ಇನ್ನೂ ಪ್ರಧಾನಮಂತ್ರಿ ನರೇಂದ್ರ ಮೋದಿ ಸೈನಿಕರ ಹೆಸರಿನಲ್ಲಿ ಮತ ಯಾಚಿಸುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಜಯಪ್ರಕಾಶ್ ನಾರಾಯಣ್ ಅವರು ನಡೆಸಿದ ರೀತಿಯ ಆಂದೋಲನ ಈಗ ಅಗತ್ಯವಾಗಿದೆ. ಸಮಾನ ಮನಸ್ಕ ಸಂಘಟನೆಗಳು ಕೂಡಿಕೊಂಡು ವ್ಯವಸ್ಥಿತವಾಗಿ ದೀರ್ಘಾವಧಿ ಅಭಿಯಾನ ನಡೆಸುವ ಮೂಲಕ ಸಂವಿಧಾನಾತ್ಮಕ ಸಂಸ್ಥೆಗಳ ಸಶಕ್ತಿಕರಣಗೊಳಿಸಲು ಹೋರಾಟ ಮಾಡಬೇಕಾಗಿದೆ. ಇದಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದರು.

ಆಮಿಷಗಳಿಗೆ ಒಳಗಾಗಿ ರಾಜಕಾರಣಿಗಳು ಮಾಡುವ ಪಕ್ಷಾಂತರ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಜನರಲ್ಲಿ ಸಂವಿಧಾನ ನೀಡಿರುವ ಜವಾಬ್ದಾರಿ ಕುರಿತು ಅರಿವು ಮೂಡಿಸದ ಹೊರತು ರಾಜಕಾರಣಿಗಳ ಇಂಥ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗದು. ರಾಜ್ಯದಲ್ಲಿ ಜೆಡಿಎಸ್‌, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಹೊರತಾದ ಪರ್ಯಾಯ ರಾಜಕೀಯ ವ್ಯವಸ್ಥೆ ರೂಪಿಸಲು ಚಿಂತನೆ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ದೇಶದ ಪ್ರಜಾಪ್ರಭುತ್ವ ಗಂಭೀರ ಬಿಕ್ಕಟ್ಟನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳಿಗೆ ತಾವು ಬರೆದ ಪತ್ರ ಹಾಗೂ ಪ್ರಜಾಪ್ರಭುತ್ವ ರಕ್ಷಣೆ ಹಿನ್ನೆಲೆಯಲ್ಲಿ ಜೂನ್ 29 ಮತ್ತು 30ರಂದು ದೆಹಲಿಯ ಗಾಂಧಿ ಪ್ರತಿಷ್ಠಾನದಲ್ಲಿ ಜನಸಂಕಲ್ಪ ಸಭೆ ನಡೆಸುವುದಾಗಿ ತಿಳಿಸಿದರು.

ಅಭಿರುಚಿ ಪ್ರಕಾಶನದ ಅಭಿರುಚಿ ಗಣೇಶ್, ಚಂದ್ರಶೇಖರ ಮೇಟಿ, ಕರುಣಾಕರನ್ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT