ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಮದ್ಯ ವ್ಯಸನಿಯಾಗಿದ್ದ ದೇವರಾಜು ಇಂದು ಆಪ್ತ ಸಮಾಲೋಚಕ

450 ವ್ಯಸನಿಗಳು ಮದ್ಯಮುಕ್ತರಾಗುವಂತೆ ಮಾಡುವಲ್ಲಿ ಯಶಸ್ವಿಯಾದ ದೇವರಾಜು
Last Updated 30 ಡಿಸೆಂಬರ್ 2020, 6:30 IST
ಅಕ್ಷರ ಗಾತ್ರ

ವ್ಯವಹಾರದಲ್ಲಿ ನಷ್ಟವಾಯಿತೆಂದು ಕುಡಿತದ ಚಟ ಬೆಳೆಸಿಕೊಂಡ ಆ ವ್ಯಕ್ತಿ, ಇದ್ದ ಎರಡು ಮನೆಗಳನ್ನೂ ಕಳೆದುಕೊಂಡರು. ಇದರಿಂದ ಮತ್ತಷ್ಟು ಕುಡಿಯಲಾರಂಭಿಸಿದರು. ಇದನ್ನು ಕಂಡ ಸ್ನೇಹಿತರು ಆ ವ್ಯಕ್ತಿಯನ್ನು ‘ಮದ್ಯ ವರ್ಜನಾ ಸಂಸ್ಥೆ’ಗೆ ದಾಖಲಿಸಿದ್ದರು. ಮದ್ಯವನ್ನು ಸಂಪೂರ್ಣವಾಗಿ ತ್ಯಜಿಸಿದ ಆ ವ್ಯಕ್ತಿ ಇಂದು ಮದ್ಯವ್ಯಸನಿಗಳಿಗೆ ಆಪ್ತ ಸಮಾಲೋಚಕರಾಗಿದ್ದು, 450ಕ್ಕೂ ಹೆಚ್ಚಿನ ವ್ಯಸನಿಗಳು ಮದ್ಯಮುಕ್ತರಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ!

ಇದು ಮೈಸೂರಿನ ಜನತಾ ನಗರದ ನಿವಾಸಿ ದೇವರಾಜು ಅವರ ಕಥೆ. ದ್ವಿತೀಯ ಪಿಯುಸಿ ಓದಿರುವ ಅವರು, ನಾಲ್ಕು ಸಂಸ್ಥೆಗಳಲ್ಲಿ ಆಪ್ತ ಸಮಾಲೋಚಕರಾಗಿದ್ದಾರೆ. ಮದ್ಯಪಾನಕ್ಕೆ ಕಾರಣಗಳು, ಅದರಿಂದ ಉಂಟಾಗುವ ಅನಾಹುತ, ಸಮಸ್ಯೆಗಳ ಬಗ್ಗೆ ಮನಮುಟ್ಟುವಂತೆ ಬೋಧಿಸುವ ಕೌಶಲವನ್ನು ಅವರು ರೂಢಿಸಿಕೊಂಡಿದ್ದಾರೆ.

ದೇವರಾಜು ಅವರು ಮದುವೆ ಆಗುವುದಕ್ಕೂ ಮುನ್ನ (2001) ಆಗೊಮ್ಮೆ ಈಗೊಮ್ಮೆ ಕುಡಿಯುತ್ತಿದ್ದರು. ಗ್ರಾಹಕರ ಅಗತ್ಯ ವಸ್ತುಗಳ ವಿತರಕರಾಗಿದ್ದ ಅವರಿಗೆ ವ್ಯಾಪಾರದಲ್ಲಿ ನಷ್ಟ ಉಂಟಾಗಿತ್ತು. ಈ ಬೇಸರದಿಂದ ಹೊರ ಬರಲು ಕುಡಿತದ ಮೊರೆ ಹೋಗಿದ್ದರು. ಅದರ ಚಟ ಯಾವ ಮಟ್ಟಿಗೆ ಹೋಯಿತೆಂದರೆ, ಬೆಳಿಗ್ಗೆ 5 ಗಂಟೆಗೇ ಮದ್ಯಪಾನ ಮಾಡಲಾರಂಭಿಸಿದ್ದರು. ರಾತ್ರಿ 12ರವರೆಗೂ ಮದ್ಯಾರಾಧನೆಯಲ್ಲೇ ಮುಳುಗಿರುತ್ತಿದ್ದರು. ಇದರಿಂದ ಸಂಸಾರದಲ್ಲೂ ನೆಮ್ಮದಿ ಇಲ್ಲದಂತಾಯಿತು. ತಂದೆ–ತಾಯಿ, ಅಣ್ಣ, ಸ್ನೇಹಿತರ ಮೇಲೆ ಜಗಳಕ್ಕೆ ಹೋಗುತ್ತಿದ್ದರು. ತಾಯಿಗೂ ಗೌರವ ನೀಡುತ್ತಿರಲಿಲ್ಲ.

ದೇವರಾಜು ಅವರ ತಂದೆ ಅಬಕಾರಿ ಇಲಾಖೆಯಲ್ಲಿ ದ್ವಿತೀಯ ದರ್ಜೆ ಕ್ಲರ್ಕ್‌ ಆಗಿದ್ದರು. ನಿವೃತ್ತಿಗೂ ಮುನ್ನ ಅವರು ಇನ್‌ಸ್ಪೆಕ್ಟರ್‌ ಆಗಿದ್ದರು. ನಿವೃತ್ತರಾದ ಬಳಿಕ ಕಾಯಿಲೆಗೆ ತುತ್ತಾಗಿದ್ದರು. 7 ವರ್ಷಗಳ ಹಿಂದೆ ಅವರು ನಿಧನರಾದರು. ತಂದೆ ಸಂಪಾದಿಸಿಟ್ಟಿದ್ದ ಎರಡು ಮನೆಗಳನ್ನೂ ಮಾರಾಟ ಮಾಡಿ ವ್ಯವಹಾರದಿಂದ ಉಂಟಾಗಿದ್ದ ನಷ್ಟವನ್ನು ಭರಿಸಿದ್ದರು.

ಇದೇ ಹೊತ್ತಿನಲ್ಲಿ ದೇವರಾಜು ಅವರು ಪಾಲಿಕೆಯ 15 ವಾರ್ಡ್‌ನಲ್ಲಿ ದಿನಗೂಲಿ ಆಧಾರದ ಮೇಲೆ ಸೂಪರ್‌ವೈಸರ್‌ ಆಗಿದ್ದರು. ಆದರೆ, ಆ ಕೆಲಸವನ್ನೂ ಕಳೆದುಕೊಂಡರು. ಇದರಿಂದ ಕುಡಿತವನ್ನು ಮತ್ತಷ್ಟು ಜಾಸ್ತಿ ಮಾಡಿದ್ದರು. ಇವರ ವರ್ತನೆಯಿಂದ ಬೇಸತ್ತಿದ್ದ ಸ್ನೇಹಿತರೊಬ್ಬರು 2015ರ ಜೂನ್‌ನಲ್ಲಿ ದಟ್ಟಗಳ್ಳಿಯ ಶ್ರೀನಿಧಿ ಫೌಂಡೇಷನ್‌ಗೆ ದಾಖಲಿಸಿದ್ದರು. ಅಲ್ಲಿ 90 ದಿನಗಳವರೆಗೆ ಮದ್ಯ ತ್ಯಜಿಸುವ ಕುರಿತು ಆಪ್ತ ಸಮಾಲೋಚನೆ ನೀಡಲಾಯಿತು. ಮದ್ಯಪಾನದಿಂದ ಉಂಟಾಗುವ ಪರಿಣಾಮಗಳ ಬಗ್ಗೆ ತಿಳಿಸಿಕೊಟ್ಟಿದ್ದರು. ಇದರಿಂದ ಅವರ ಮನಃಪರಿವರ್ತನೆಗೊಂಡಿತ್ತು.

‘ಶ್ರೀನಿಧಿ ಫೌಂಡೇಷನ್‌ಗೆ ದಾಖಲಾದಾಗ ಒಂದೂವರೆ ತಿಂಗಳವರೆಗೆ ಮದ್ಯ ಇಲ್ಲದೆ ಬದುಕಲು ಸಾಧ್ಯವಾಗಲಿಲ್ಲ. ಹೇಗೋ ಮಾಡಿ ಮದ್ಯ ಸೇವಿಸದೆಯೇ ಕಾಲದೂಡಿದ್ದೆ. 2 ತಿಂಗಳು ಕಳೆಯುತ್ತಿದ್ದಂತೆ ಕುಡಿತದ ಬಗ್ಗೆ ಆಸಕ್ತಿ ಕ್ಷೀಣಿಸುತ್ತಾ ಬಂತು. ಮನೆಯವರ ಮೇಲೆ ಪ್ರೀತಿ ಜಾಸ್ತಿ ಆಯ್ತು. ಮೂರು ತಿಂಗಳು ಕಳೆದ ಮೇಲೂ ನಾನು ಮದ್ಯವನ್ನು ಮುಟ್ಟಲಿಲ್ಲ. ಅಂದು ನಾನು ಮನಸ್ಸು ಗಟ್ಟಿ ಮಾಡಿಕೊಂಡು ಮದ್ಯವನ್ನು ಬಿಟ್ಟಿದ್ದಕ್ಕೆ ಫಲ ನೀಡಿತ್ತು. ಇಂದಿಗೆ ಮದ್ಯಪಾನ ಬಿಟ್ಟು 5 ವರ್ಷಗಳಾಗಿವೆ. ಮದ್ಯ ನನ್ನ ಬದುಕಿನಲ್ಲಿ ಮತ್ತೆ ಪ್ರವೇಶಿಸಿಲ್ಲ. ನಾನು ಆರೋಗ್ಯವಾಗಿ ಇದ್ದೇನೆ. ನನ್ನ ಕುಟುಂಬವೂ ನೆಮ್ಮದಿಯಿಂದ ಇದೆ’ ಎನ್ನುತ್ತಾರೆ ದೇವರಾಜು.‌

‘ಮದ್ಯ ತ್ಯಜಿಸಲು ಸೇರಿದ್ದ ಸಂಸ್ಥೆಯಲ್ಲೇ ಒಂದು ವರ್ಷ ಕೆಲಸ ಮಾಡಿದ್ದೆ. ನಂತರ, ಮಧು ಎಂಬುವರು ಮೂಗನಹುಂಡಿಯಲ್ಲಿರುವ ‘ರಿಕವರಿ ಫೌಂಡೇಷನ್‌’ನ ಶಮಂತ್‌, ಮೋಹನ್‌ ಅವರನ್ನು ಪರಿಚಯ ಮಾಡಿಕೊಟ್ಟರು. ‘ರಿಕವರಿ ಫೌಂಡೇಷನ್‌’ನಲ್ಲಿ ಆಪ್ತ ಸಮಾಲೋಚಕನಾಗಿ ಕೆಲಸ ಮಾಡಲು ಅವರು ಅವಕಾಶ ನೀಡಿದರು. ಇದಲ್ಲದೆ, ನವಜೀವನ ಟ್ರಸ್ಟ್‌, ನಿಸರ್ಗ ಫೌಂಡೇಷನ್‌ ಹಾಗೂ ಬಸವ ಮಾರ್ಗ ಸಂಸ್ಥೆಗಳಲ್ಲೂ ಆಪ್ತ ಸಮಾಲೋಚಕನಾಗಿದ್ದೇನೆ. ಇಲ್ಲೂ ನನಗೆ ಗೌರವಧನ ಸಿಗುತ್ತಿದ್ದು, ಜೀವನವನ್ನೂ ಮುನ್ನಡೆಸಲು ಸಹಕಾರಿಯಾಗಿದೆ’ ಎಂಬುದು ದೇವರಾಜು ಅವರ ನುಡಿಗಳು.

ಮದ್ಯ ವರ್ಜನಾ ಶಿಬಿರದ ದಿನಚರಿ

ಮದ್ಯವ್ಯಸನಿಗಳ ದೈನಂದಿನ ಚಟುವಟಿಕೆ ಬೆಳಿಗ್ಗೆ 5.45ಕ್ಕೆ ಶುರುವಾದರೆ, ರಾತ್ರಿ 10 ಗಂಟೆಗೆ ಮುಗಿಯುತ್ತದೆ. ಬೆಳಿಗ್ಗೆ ಧ್ಯಾನ, ಪ್ರಾರ್ಥನೆ, ಭಕ್ತಿಗೀತೆಗಳು, ದೇವರನಾಮ ಆದ ಮೇಲೆ ಚಹಾ ನೀಡಲಾಗುತ್ತದೆ. ಬಳಿಕ, ಎಲ್ಲರೂ ಸ್ನಾನ ಮಾಡುತ್ತಾರೆ. 8.30ಕ್ಕೆ ತಿಂಡಿ. 8.30ರಿಂದ ಡಿಟಾಕ್ಸ್‌ (ಕುಡಿತದ ದೇಹದಲ್ಲಿ ಉಂಟಾಗಿರುವ ಜಿಡ್ಡಿನಾಂಶ ಸ್ವಚ್ಛಗೊಳಿಸಲು) ನೀಡುತ್ತಾರೆ. 10 ಗಂಟೆಗೆ ರಾಷ್ಟ್ರಗೀತೆ, ಪ್ರಾರ್ಥನೆ ಆಗುತ್ತದೆ. ಆನಂತರ ಆಪ್ತಸಮಾಲೋಚಕರು ಮಾರ್ಗದರ್ಶನ ಮಾಡುತ್ತಾರೆ. ಕುಡಿತದಿಂದ ಜೀವನ ಹೇಗೆ ಹಾಳಾಯಿತು, ಕುಡಿತವನ್ನು ತ್ಯಜಿಸುವುದು ಹೇಗೆ? ಗುಣದೋಷಗಳ ಪ್ರಭಾವದ ಬಗ್ಗೆ ಬೋಧಿಸುತ್ತಾರೆ. ಮಧ್ಯಾಹ್ನ 1ಕ್ಕೆ ಊಟ. 2ರಿಂದ 4ರವರೆಗೆ ಮದ್ಯ ವ್ಯಸನಿಗಳಿಗೆ ಮಲಗಲು ಅವಕಾಶ ನೀಡಲಾಗುತ್ತದೆ. ಆನಂತರ ಟಿ.ವಿ ನೋಡುವುದು, ಒಳಾಂಗಣ ಆಟಗಳನ್ನು ಆಡುತ್ತಾರೆ. 5.30ರಿಂದ 6ರವರೆಗೆ ಧ್ಯಾನ ಇರುತ್ತದೆ. 6ರಿಂದ 7ರವರೆಗೆ ಶೇರಿಂಗ್‌ ಮೀಟಿಂಗ್‌ ನಡೆಯುತ್ತದೆ. ಇದರಲ್ಲಿ ಮದ್ಯ ವ್ಯಸನಿಗಳೇ ಭಾಗವಹಿಸುತ್ತಾರೆ. ಅವರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಲಾಗುತ್ತದೆ. ಶಿಬಿರದಲ್ಲಿ ಪಾಲ್ಗೊಂಡು 21 ದಿನಗಳು ಕಳೆದಿರುವವರು ಇದರಲ್ಲಿ ಭಾಗವಹಿಸುತ್ತಾರೆ. ಉಳಿದವರು ಸಭಿಕರಾಗಿ ಪಾಲ್ಗೊಳ್ಳಬಹುದು. ಇಲ್ಲಿ ನಮ್ಮ ಅನಿಸಿಕೆ, ನೋವು–ನಲಿವುಗಳ ಬಗ್ಗೆ ಮಾತನಾಡಲು 10 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.

ಬಳಿಕ, ಪ್ರಶಾಂತತೆ ಪ್ರಾರ್ಥನೆ ಆಗುತ್ತದೆ. 7.30ರಿಂದ ಮಾತ್ರೆ, ಅಗತ್ಯ ವಸ್ತುಗಳನ್ನು ಒದಗಿಸಲಾಗುತ್ತದೆ. 8.30ಕ್ಕೆ ಊಟ. ಬಳಿಕ, ಮದ್ಯ ವ್ಯಸನಿಗಳ ಆರೋಗ್ಯ ತಪಾಸಣೆ ಇರುತ್ತದೆ. ವಾರದಲ್ಲಿ ನಾಲ್ಕು ದಿನ ನರ್ಸ್‌ ಬರುತ್ತಾರೆ. ವಾರದಲ್ಲಿ ಒಮ್ಮೆ ವೈದ್ಯರು ಹಾಗೂ ಮನೋತಜ್ಞ ವೈದ್ಯರು ಬರುತ್ತಾರೆ.

***

ಕುಡಿತಕ್ಕೆ ಮದ್ದಿಲ್ಲ. ಅದನ್ನು ಮಾನಸಿಕವಾಗಿ ಬಿಡಬೇಕು. ನಾನು ಈಗ ಹೆಂಡತಿ–ಮಕ್ಕಳೊಂದಿಗೆ ನೆಮ್ಮದಿಯಾಗಿ ಬದುಕುತ್ತಿದ್ದೇನೆ.

–ದೇವರಾಜು, ಆಪ್ತ ಸಮಾಲೋಚಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT