ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾಷಾ ಕೌಶಲ ಬೆಳೆಸಿಕೊಳ್ಳಿ; ಭವಿಷ್ಯ ಉಜ್ವಲಗೊಳಿಸಿಕೊಳ್ಳಿ’

ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರದ ಅಧ್ಯಯನ ಪುಸ್ತಕ ಬಿಡುಗಡೆ
Last Updated 13 ಸೆಪ್ಟೆಂಬರ್ 2019, 15:03 IST
ಅಕ್ಷರ ಗಾತ್ರ

ಮೈಸೂರು: ‘ಭಾಷಾ ಕೌಶಲ, ಕಂಪ್ಯೂಟರ್ ಜ್ಞಾನದ ಜತೆಗೆ ವಿಷಯ ತಜ್ಞತೆಯನ್ನು ನಾವು ಬೆಳೆಸಿಕೊಂಡರೆ ಮಾತ್ರ ಭವಿಷ್ಯದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಬಹುದು’ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ ಹೇಳಿದರು.

ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಮುಕ್ತ ಗಂಗೋತ್ರಿ ಆವರಣದಲ್ಲಿನ ಕಾವೇರಿ ಸಭಾಂಗಣ‌ದಲ್ಲಿ ಶುಕ್ರವಾರ ನಡೆದ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರದ ಅಧ್ಯಯನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬ್ಯಾಂಕಿಂಗ್ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇಂದು ವಿಪುಲವಾದ ಅವಕಾಶಗಳಿವೆ. ಆದರೆ ನಮ್ಮಲ್ಲಿ ಅವಕಾಶ ಪಡೆದುಕೊಳ್ಳುವ ಕೌಶಲದ ಕೊರತೆ ಇದೆ. ನಮ್ಮಲ್ಲಿ ಬಹುತೇಕರು ಕನ್ನಡ ಭಾಷೆ ಬಿಟ್ಟು, ಇತರೆ ಭಾಷೆಯನ್ನು ಕಲಿಯಲು ಹಿಂಜರಿಯುತ್ತಿದ್ದಾರೆ. ಈ ಕಾರಣದಿಂದಾಗಿಯೇ ಬ್ಯಾಂಕಿಂಗ್‍ನಲ್ಲಿ ಉತ್ತರ ಭಾರತದವರೇ ಹೆಚ್ಚಾಗಿದ್ದಾರೆ. ಕನ್ನಡದ ಜತೆಯಲ್ಲೇ ಇತರೆ ಭಾಷಾ ಕೌಶಲ ಬೆಳೆಸಿಕೊಳ್ಳುವುದು ಸೂಕ್ತ’ ಎಂದರು.

ಕೆನರಾ ಬ್ಯಾಂಕ್‍ನ ಜನರಲ್ ಮ್ಯಾನೇಜರ್ ಡಾ.ಎಸ್.ಟಿ.ರಾಮಚಂದ್ರ ಮಾತನಾಡಿ ‘ಬ್ಯಾಂಕಿಂಗ್ ವಲಯಗಳಿಗೆ ರಾಜ್ಯದ ಯುವಕರು ವಿಮುಖರಾಗಿದ್ದು, ಹೆಚ್ಚು ಜನರು ಈ ಕ್ಷೇತ್ರಕ್ಕೆ ಕೆಲಸಕ್ಕಾಗಿ ಬರುತ್ತಿಲ್ಲ. ಪರಿಣಾಮ ಈ ಕ್ಷೇತ್ರದಲ್ಲಿನ ಉದ್ಯೋಗವಕಾಶಗಳು ಉತ್ತರ ಭಾರತದವರ ಪಾಲಾಗುತ್ತಿದೆ. ಈ ಕ್ಷೇತ್ರಕ್ಕೆ ಬಂದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಉತ್ತಮ ಸಂಬಳ, ಉದ್ಯೋಗ ಭದ್ರತೆ ಸೇರಿದಂತೆ ಎಲ್ಲಾ ಸೌಲಭ್ಯಗಳು ಇರುತ್ತದೆ. ಆದರೆ ಎಲ್ಲರೂ ಐಟಿ, ಬಿಟಿ ಎಂದು ಖಾಸಗಿ ಕಂಪನಿಗಳ ಬಾಗಿಲು ತಟ್ಟುತ್ತಿದ್ದಾರೆ. ಆದರೆ ಆ ಉದ್ಯೋಗದಲ್ಲಿ ಭದ್ರತೆ ಇದೆಯೇ ಎಂಬುದನ್ನು ಅರಿಯಬೇಕು’ ಎಂದು ಹೇಳಿದರು.

ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್, ಕುಲಸಚಿವ ಪ್ರೊ.ಬಿ.ರಮೇಶ್ ಉಪಸ್ಥಿತರಿದ್ದರು.

ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮನೋವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪಿ.ಮಂಜುನಾಥ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT