ಸೋಮವಾರ, ಮಾರ್ಚ್ 30, 2020
19 °C

ಮೈಸೂರು: ಈ ಕಲಾವಿದನಿಗೆ ರಂಗಭೂಮಿಯೇ ಉಸಿರು

ಎನ್. ನವೀನ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಆಗಷ್ಟೇ ರಂಗಭೂಮಿ ಪ್ರವೇಶಿಸಿದ್ದ ಆ ಯುವಕನಿಗೆ ತಂದೆಯ ಸಾವು ಆಘಾತ ನೀಡಿತ್ತು. ಮರು ವರ್ಷ ತಾಯಿಯೂ ನಿಧನರಾದಾಗ ಜೀವನವೇ ಶೂನ್ಯ ಎನಿಸತೊಡಗಿತು. ಯಾವುದೇ ಭೇದಭಾವವಿಲ್ಲದೆ ಎಲ್ಲರನ್ನೂ ಪ್ರೀತಿಸುವ, ಸಮಾನವಾಗಿ ಕಾಣುವ ರಂಗಭೂಮಿಯು ಆ ಯುವಕನಿಗೆ ತಾಯಿಯ ಸ್ಥಾನ ತುಂಬಿತು. ರಂಗಭೂಮಿಯನ್ನೇ ಜೀವನವನ್ನಾಗಿ ಸ್ವೀಕರಿಸಿದ ಆ ಯುವಕ ಇಂದು ಭರವಸೆಯ ನಿರ್ದೇಶಕರಾಗಿ, ಕಲಾವಿದರಾಗಿ
ಹೊರಹೊಮ್ಮಿದ್ದಾರೆ.

ಆ ಕಲಾವಿದ ದಿನೇಶ್ ಚಮ್ಮಾಳಿಗೆ. ‘ಶರೀಫ’, ‘ಹಿರಣ್ಯಕಶಿಪು’, ‘ಬೆರಳ್ಗೆ ಕೊರಳ್’, ‘ರಾಜ ನರ್ತಕಿ’, ‘ಚಿಕ್ಕದೇವಭೂಪ’, ‘ಕೃಷ್ಣೇಗೌಡನ ಆನೆ’ ಸೇರಿದಂತೆ 20 ನಾಟಕಗಳನ್ನು ನಿರ್ದೇಶನ ಮಾಡಿರುವ ಅವರು, 80ಕ್ಕೂ ಹೆಚ್ಚಿನ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಸಾವಿರಾರು ವಿದ್ಯಾರ್ಥಿಗಳಿಗೆ ರಂಗತರಬೇತಿ ನೀಡಿದ್ದಾರೆ. ಸದ್ಯ, ಪರಿವರ್ತನ ಶಾಲೆಯಲ್ಲಿ ನಾಟಕ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ನಟ, ನಿರ್ದೇಶನದ ಜೊತೆಗೆ, ವಸ್ತ್ರವಿನ್ಯಾಸ, ರಂಗಸಜ್ಜಿಕೆ, ಸಂಗೀತ ನಿರ್ದೇಶಕರಾಗಿಯೂ ಗಮನ ಸೆಳೆದಿದ್ದಾರೆ. ಕಾಮಿಡಿ ಶೋಗಳಿಗೆ ಮೆಂಟರ್ ಆಗಿ ಕೆಲಸ
ಮಾಡಿದ್ದಾರೆ.

ನಗರದ ಕೆ.ಜಿ.ಕೊಪ್ಪಲಿನ ಮಹದೇವಪ್ಪ ಮತ್ತು ಗಿರಿಜಮ್ಮ ದಂಪತಿಯ ಪುತ್ರರಾದ ದಿನೇಶ್ ಚಮ್ಮಾಳಿಗೆ ಕೆ.ಜಿ.ಕೊಪ್ಪಲಿನ ಸರ್ಕಾರಿ ಶಾಲೆಯಲ್ಲಿ 1ರಿಂದ 4ನೇ ತರಗತಿ, ಕೃಷ್ಣಮೂರ್ತಿಪುರಂ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿವರೆಗೆ, ಲಕ್ಷ್ಮಿಪುರಂನ ಸರ್ಕಾರಿ ಪ್ರೌಢಶಾಲೆ ಮತ್ತು ಕಾಲೇಜಿನಲ್ಲಿ 8ರಿಂದ ಪಿಯುಸಿವರೆಗೆ
ಓದಿದರು.

2003ರಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ವೇಳೆ ಜನಮನ ಸಾಂಸ್ಕೃತಿಕ ಸಂಘಟನೆ ವತಿಯಿಂದ ಆಯೋಜಿಸಿದ್ದ ರಂಗ ತರಬೇತಿ ಶಿಬಿರಕ್ಕೆ ಸೇರಿದರು. ಆ ಶಿಬಿರವು ಅವರ ದಿಕ್ಕನ್ನೇ ಬದಲಿಸಿತು. ದ್ವಿತೀಯ ಪಿಯುಸಿ ಓದುತ್ತಿದ್ದಾಗ ತಾಯಿ ತೀರಿಕೊಂಡರು. ಅಂದು ಮನೆಯನ್ನು ತೊರೆದವರು ಅತ್ತ ಮುಖ ಮಾಡಲಿಲ್ಲ. ರಂಗಭೂಮಿಯ ಸ್ನೇಹಿತರೊಟ್ಟಿಗೆ ಇದ್ದು, ರಂಗಭೂಮಿಯಲ್ಲೇ ಬದುಕನ್ನು ಕಂಡುಕೊಂಡಿದ್ದಾರೆ.

ರಂಗಾಯಣದಲ್ಲಿ ಭಾರತೀಯ ರಂಗಶಿಕ್ಷಣ ಕೇಂದ್ರದಲ್ಲಿ 2006-07ರಲ್ಲಿ ಡಿಪ್ಲೊಮಾ ಕೋರ್ಸ್ ಮುಗಿಸಿದ ಅವರು, ಸಾಣೆಹಳ್ಳಿಯ ಶಿವಸಂಚಾರಕ್ಕೆ ಸೇರಿದರು. ಕಲಾವಿದ ಹಾಗೂ ತಂತ್ರಜ್ಞನಾಗಿ ಕೆಲಸ ಮಾಡಿದರು. 2009-10ರಲ್ಲಿ ಹೆಗ್ಗೋಡಿನ ನೀನಾಸಂ ತರಬೇತಿಗೆ ಸೇರಿದರು. ಶಿಬಿರಕ್ಕೆ ಹೋಗಲು ಅವರ ಬಳಿ ಒಂದು ರೂಪಾಯಿ ಸಹ ಇರಲಿಲ್ಲ. ಆಗ ರಂಗಕರ್ಮಿ ಲಿಂಗದೇವರು ಹಳೆಮನೆ ಅವರು ₹3,500 ನೀಡಿದ್ದರು.

ನೀನಾಸಂನಿಂದ ಬಂದ ಬಳಿಕ ಮಂಡ್ಯ ಜಿಲ್ಲೆಯ ಮಾಚಳ್ಳಿ ಗ್ರಾಮದ ಬಳಿ ಕಾಗೆಮಂಟಿದಲ್ಲಿ ಗಿರೀಶ್ ಮಾಚಳ್ಳಿ ನಿರ್ದೇಶನದ 10 ಗಂಟೆಗಳ ‘ಆರ್ಯದ್ರಾವಿಡ’ ನಾಟಕದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡುವ ಜೊತೆಗೆ ನಟರಾಗಿಯೂ ಅಭಿನಯಿಸಿದ್ದರು. ಇದಲ್ಲದೆ, ‘ಎಂಪ್ಲಾಯಿಸ್’ ಎಂಬ 8 ಗಂಟೆಗಳ ನಾಟಕದಲ್ಲೂ ಕೆಲಸ ಮಾಡಿದ್ದರು.

ನಾಟಕ ಅಕಾಡೆಮಿ ವತಿಯಿಂದ ಮಂಡ್ಯ ಜಿಲ್ಲೆಯಲ್ಲಿ ಹುಲಿಕೆರೆಯಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರದಲ್ಲಿ ರಂಗ ತರಬೇತಿ ನೀಡಿದ್ದರು. ಹಂಸಲೇಖ ಅವರ ದೇಸಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಶಿಬಿರದಲ್ಲಿ ಕೈಯ್ಯಂಬಳ್ಳಿಯ ಮಕ್ಕಳಿಗೆ ‘ಪ್ರಕೃತಿಯ ಮಡಿಲಲ್ಲಿ’, ‘ಜಲದವ್ವ’ ನಾಟಕಗಳನ್ನು ನಿರ್ದೇಶಿಸಿದ್ದರು. ಈ ನಾಟಕಗಳು ಜನಮನ್ನಣೆ ಗಳಿಸಿದ್ದವು.

ಹಿರಿಯ ರಂಗಕರ್ಮಿಗಳ ಸ್ಮರಣೆ: ನಾಲ್ವಡಿ ಸೋಷಿಯಲ್ ಮತ್ತು ಕಲ್ಚರಲ್ ಅಂಡ್ ಎಜುಕೇಷನಲ್ ಟ್ರಸ್ಟ್ ಸ್ಥಾಪಿಸುವ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಶಯ, ಕೊಡುಗೆ ಹಾಗೂ ಸಾಧನೆಗಳನ್ನು ಜನಮಾನಸಕ್ಕೆ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ನಾಲ್ವಡಿ ಅವರ ಜೀವನ ಕುರಿತ ‘ಮಧುವನದಲ್ಲಿ ನಾಲ್ವಡಿ’ ಎಂಬ ನಾಟಕವನ್ನೂ ನಿರ್ದೇಶಿಸಿದ್ದರು. ಇದಲ್ಲದೆ, ‘ಹಳೆಮನೆಯ ಅಂಗಳದಲ್ಲಿ ರಂಗತಾರೆಗಳ ನೆನಪು’ ಎಂಬ ಕಾರ್ಯಕ್ರಮವನ್ನು ಪ್ರತಿ ವರ್ಷ ಆಯೋಜಿಸುವ ಮೂಲಕ ಲಿಂಗದೇವರು ಹಳೆಮನೆ ಹಾಗೂ ಹಿರಿಯ ರಂಗಕರ್ಮಿಗಳನ್ನು ಸ್ಮರಿಸುತ್ತಿದ್ದಾರೆ.

ಕಾಮಿಡಿ ಶೋ ಮೆಂಟರ್

2018ರಲ್ಲಿ ಕಲರ್ಸ್ ಸೂಪರ್ ವಾಹಿನಿಯ ‘ಮಜಾಭಾರತ’, ಕಲರ್ಸ್ ಕನ್ನಡ ವಾಹಿನಿಯ ‘ಕಾಮಿಡಿ ಟಾಕೀಸ್’ನಲ್ಲಿ ಮೆಂಟರ್ ಆಗಿಯೂ ಕೆಲಸ ಮಾಡಿದ್ದರು. ಇವರ ಶಿಷ್ಯರಾದ ಜಗದೀಶ್ ಕುಮಾರ್, ವರಲಕ್ಷ್ಮಿ, ವಿನೋದ್ ಕಾಮಿಡಿ ಶೋಗಳ ಮೂಲಕ ಗಮನ ಸೆಳೆದಿದ್ದಾರೆ. ಜಗದೀಶ್ ಕುಮಾರ್, ವಿನೋದ್ ‘ಸಿಲ್ಲಿ ಲಲ್ಲಿ’ ಧಾರಾವಾಹಿಯಲ್ಲೂ ಅಭಿನಯಿಸುತ್ತಿದ್ದಾರೆ.

ರಂಗಭೂಮಿ ಎಂದು ಜೀವಂತ ಕಲೆ. ಇಲ್ಲಿ ಸಿಗುವ ತೃಪ್ತಿ ನೆಮ್ಮದಿ ರಿಯಾಲಿಟಿ ಶೋಗಳಲ್ಲಿ ಸಿಗೋದಿಲ್ಲ. ಅಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಕೆಲಸ ಮಾಡಬೇಕು. ಆದರೆ, ಒಳ್ಳೆಯ ಸಂಭಾವನೆ ಸಿಗುತ್ತದೆ ಎನ್ನುತ್ತಾರೆ ದಿನೇಶ್ ಚಮ್ಮಾಳಿಗೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)