ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರ ವೇತನ ಪಾವತಿಗೆ ಗುತ್ತಿಗೆ ಪೌರಕಾರ್ಮಿಕರ ಆಗ್ರಹ

ಸಾಂಕೇತಿಕವಾಗಿ ಕೆಲಸ ಸ್ಥಗಿತಗೊಳಿಸಿದ ಗುತ್ತಿಗೆ ಪೌರಕಾರ್ಮಿಕರು
Last Updated 9 ಅಕ್ಟೋಬರ್ 2020, 3:59 IST
ಅಕ್ಷರ ಗಾತ್ರ

ಮೈಸೂರು: ನೇರ ವೇತನ ಪಾವತಿ ಮಾಡುವಂತೆ ಆಗ್ರಹಿಸಿ ನಗರ ಪಾಲಿಕೆಯ ಗುತ್ತಿಗೆ ಪೌರಕಾರ್ಮಿಕರು ಗುರುವಾರ ಸಾಂಕೇತಿಕವಾಗಿ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.

ಮೈಸೂರು ನಗರ ಪಾಲಿಕೆ ಕಾಯಂ ಪೌರಕಾರ್ಮಿಕರ ಹಾಗೂ ಗುತ್ತಿಗೆ ಪೌರಕಾರ್ಮಿಕರ ಮಹಾ ಸಂಘದ ವತಿಯಿಂದ ಪಾಲಿಕೆ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ 50 ಕ್ಕೂ ಅಧಿಕ ಪೌರಕಾರ್ಮಿಕರು ಪಾಲ್ಗೊಂಡರು.

ಪ್ರತಿಭಟನೆ ಅಂಗವಾಗಿ ಗುರುವಾರ ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿದರು. ಪಾಲಿಕೆಯಲ್ಲಿ 1,563 ಮಂದಿ ಗುತ್ತಿಗೆ ಪೌರಕಾರ್ಮಿಕರಿಗೆ ನೇರ ವೇತನ ಪಾವತಿ ಮಾಡುವಂತೆ ಜಿಲ್ಲಾಧಿಕಾರಿ ಅವರು ಕೌನ್ಸಿಲ್ ಅನುಮೋದನೆಯನ್ನು ಪಡೆದು ಆದೇಶಿಸಿದ್ದಾರೆ. ಆದೇಶ ಮಾಡಿ ಸುಮಾರು 4 ತಿಂಗಳು ಕಳೆದರೂ ವಿಳಂಬ ಧೋರಣೆ ಮಾಡುತ್ತಾ ಕಾಲಹರಣ ಮಾಡುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು.

ಈ ಕೂಡಲೇ ಕೌನ್ಸಿಲ್ ಸಭೆಯಲ್ಲಿ ಅನುಮೋದನೆಯನ್ನು ಪಡೆದು ಪೌರಕಾರ್ಮಿಕರಿಗೆ ನೇರ ವೇತನ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲಾ ಪೌರಕಾರ್ಮಿಕರು, ಒಳಚರಂಡಿ ಕಾರ್ಮಿಕರು, ಮನೆ ಮನೆ ಕಸ ಸಂಗ್ರಹಣೆ ಮಾಡುವ ಆಟೊ ಟಿಪ್ಪರ್‌ಗಳ ಚಾಲಕರು ಕೆಲಸ ಸ್ಥಗಿತಗೊಳಿಸಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಮಾಜಿ ಮೇಯರ್ ನಾರಾಯಣ, ಸಂಘದ ಉನ್ನತ ಸಮಿತಿ ಅಧ್ಯಕ್ಷ ಎನ್.ಮಾರ, ಅಧ್ಯಕ್ಷ ಜಿ.ಮಹಾದೇವ, ಪದಾಧಿಕಾರಿಗಾದ ಶ್ರೀನಿವಾಸ್, ಆರ್.ಶಿವಣ್ಣ, ಆರ್ಮುಗಂ, ಎಸ್.ಎಂ.ಪಳನಿಸ್ವಾಮಿ ಪಾಲ್ಗೊಂಡಿದ್ದರು.

ಭೂಮಿ ಕಬಳಿಕೆ ಕೈಬಿಡುವಂತೆ ಆಗ್ರಹ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) ರೈತರ ಫಲವತ್ತಾದ ಭೂಮಿ ಕಬಳಿಸುವುದನ್ನು ಕೈಬಿಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮೈಸೂರು ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಮುಡಾ ಆವರಣದಲ್ಲಿ ಸೇರಿದ ಪ್ರತಿಭಟನಕಾರರು ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತರ ಭೂಮಿಯನ್ನು ಪಡೆದು ಬಡಾವಣೆ ನಿರ್ಮಿಸಲು ಹೊರಟಿರುವ ಅವರ ಕ್ರಮವನ್ನು ಖಂಡಿಸಿದರು.

ರೈತರ ಭೂಮಿ ಕಬಳಿಸುವ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು. ಮುಖ್ಯಮಂತ್ರಿ ಅವರು ದಸರಾ ಉದ್ಘಾಟನೆಗೆ ಬರುವ ಸಂದರ್ಭ ಕಪ್ಪುಬಾವುಟ ಪ್ರದರ್ಶಿಸಲಾಗುವುದು. ಮುಡಾ ಅಧ್ಯಕ್ಷರ ಮನೆಯ ಮುಂದೆ ಅನಿರ್ದಿಷ್ಟಾವಧಿ ಧರಣಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನಕಾರರು ಮುಡಾ ಅಧ್ಯಕ್ಷರ ಪ್ರತಿಕೃತಿ ಸುಡಲು ಮುಂದಾದಾಗ ಪೊಲೀಸರು ತಡೆದರು. ಈ ವೇಳೆ ಮಾತಿನ ಚಕಮಕಿ ನಡೆಯಿತು.

ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಗುರುಪ್ರಸಾದ್, ಪದಾಧಿಕಾರಿಗಳಾದ ಮಹದೇವು ಬಲ್ಲಹಳ್ಳಿ, ಶಿವಣ್ಣ, ಬಸವರಾಜ್, ಸಣ್ಣೇಗೌಡ ಇತರರು ಭಾಗವಹಿಸಿದ್ದರು.

ಒಡನಾಡಿಯಿಂದ ಪ್ರಾಯಶ್ಚಿತ್ತ ದಿವಸ

ಉತ್ತರ ಪ್ರದೇಶದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಮತ್ತು ದೇಶದ ವಿವಿಧೆಡೆ ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಒಡನಾಡಿ ಸಂಸ್ಥೆಯ ವತಿಯಿಂದ ಗುರುವಾರ ‘ಪ್ರಾಯಶ್ಚಿತ್ತ ಹಾಗೂ ನಿರಾಹಾರ’ ದಿವಸ ಆಚರಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ ಪ್ರತಿಭಟನಕಾರರು ಕಪ್ಪು ಮಾಸ್ಕ್‌ ಧರಿಸಿ, ಭಿತ್ತಿಪತ್ರಗಳನ್ನು ಹಿಡಿದು ಮೌನಪ್ರತಿಭಟನೆ ನಡೆಸಿದರು. ಧರ್ಮ, ಜಾತಿ ಎಂಬ ಭೇದಭಾವ ತೋರದೆ ಇಂತಹ ಘಟನೆಯನ್ನು ಎಲ್ಲರೂ ಖಂಡಿಸಬೇಕು ಎಂದು ಮನವಿ ಮಾಡಿದರು.

ಒಡನಾಡಿ ಸಂಸ್ಥೆಯ ನಿರ್ದೇಶಕರಾದ ಸ್ಟ್ಯಾನ್ಲಿ, ಪರಶು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT