ಶುಕ್ರವಾರ, ಆಗಸ್ಟ್ 12, 2022
25 °C
ಸಚಿವರಾದ ಎಸ್‌.ಟಿ.ಸೋಮಶೇಖರ್‌, ಬಿ.ಸಿ.ಪಾಟೀಲ ಭಾಗಿ l ಲಸಿಕೆ ಅಭಿಯಾನಕ್ಕೆ ಚಾಲನೆ

ಜಿಲ್ಲೆಯ ಕಲಾವಿದರಿಗೆ ಆಹಾರ ಕಿಟ್‌ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಚಲನಚಿತ್ರ ಸಹ ಕಲಾವಿದರು ಮತ್ತು ಹವ್ಯಾಸಿ ರಂಗಕರ್ಮಿಗಳಿಗೆ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಕೃಷಿ ಸಚಿವ ಬಿ.ಸಿ.ಪಾಟೀಲ್ ಉಪಸ್ಥಿತಿಯಲ್ಲಿ ಆಹಾರ ಕಿಟ್ ವಿತರಣೆ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹವ್ಯಾಸಿ ಕಲಾ ಒಕ್ಕೂಟದ ವತಿಯಿಂದ ಕಲಾಮಂದಿರದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಲಾವಿದರು, ಕಲಾ ತಂಡಗಳ ಸದಸ್ಯರು ಪಾಲ್ಗೊಂಡರು.

‘ಜಿಲ್ಲಾ ಉಸ್ತುವಾರಿ ಸಚಿವರು ಕಲಾವಿದರನ್ನು ಗಮನದಲ್ಲಿಟ್ಟುಕೊಂಡು 520 ಕಿಟ್‌ಗಳನ್ನು ಕಳುಹಿಸಿಕೊಟ್ಟಿದ್ದಾರೆ. ಇವುಗಳನ್ನು 120 ಚಲನಚಿತ್ರ ಸಹ ಕಲಾವಿದರಿಗೆ ಹಾಗೂ 400 ರಂಗಕರ್ಮಿಗಳಿಗೆ ವಿತರಿಸಲಾಗುತ್ತಿದೆ. ಇನ್ನೂ ಹೆಚ್ಚಿನ ಕಿಟ್ ಅಗತ್ಯವಿದ್ದರೆ ಒದಗಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಚನ್ನಪ್ಪ ಮಾಹಿತಿ ನೀಡಿದರು.

‘ಕಲಾವಿದರಿಗೆ ಈ ಹಿಂದೆ ಹರೀಶ್‌ ಗೌಡ ಅವರು ನೀಡಿದ್ದ 300 ಹಾಗೂ ಹಾಗೂ ಕಲಾವಿದರ ಕ್ಷೇಮಾಭವೃದ್ಧಿ ಸಂಘ ನೀಡಿದ್ದ 300 ಕಿಟ್‌ಗಳು ಸೇರಿದಂತೆ ಒಟ್ಟು 600 ಕಿಟ್‌ಗಳನ್ನು ವಿತರಿಸಲಾಗಿದೆ. ಅವರನ್ನು ಹೊರತುಪಡಿಸಿ ಉಳಿದವರಿಗೆ ಸಚಿವರು ನೀಡಿದ 520 ಕಿಟ್‌ಗಳನ್ನು ಹಂಚಲಾಗಿದೆ’ ಎಂದು ಮಾಹಿತಿ ನೀಡಿದರು.

‘ಮೈಸೂರು ನಗರದಲ್ಲಿರುವ 2 ಸಾವಿರ ಕಲಾವಿದರು ಸೇರಿದಂತೆ, ನಮ್ಮ ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ 4,500 ಕಲಾವಿದರು ಇದ್ದಾರೆ. ಇನ್ನೂ ಕೆಲವರಿಗೆ ಕಿಟ್‌ ದೊರೆತಿಲ್ಲ. ದಾನಿಗಳಿಂದ ಕಿಟ್‌ಗಳನ್ನು ಪಡೆದು ಮುಂದಿನ ದಿನಗಳಲ್ಲಿ ಅವರಿಗೆ ಹಂಚಲು ಕ್ರಮವಹಿಸಲಾಗುವುದು’ ಎಂದು ತಿಳಿಸಿದರು.

‘ಕಲಾಮಂದಿರದ ಆವರಣದಲ್ಲಿ ಕಲಾವಿದರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಇದೀಗ ಲಭ್ಯವಿರುವ 400 ಲಸಿಕೆಗಳನ್ನು ನೀಡಲಾಗುವುದು. ಇನ್ನೂ ಹೆಚ್ಚಿನ ಲಸಿಕೆಗೆ ಬೇಡಿಕೆ ಬಂದರೆ, ಅದನ್ನು ದೊರಕಿಸಲು ಕ್ರಮವಹಿಸುತ್ತೇವೆ’ ಎಂದರು.

ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಅರಗು ಮತ್ತು ಬಣ್ಣದ ಕಾರ್ಖಾನೆ ಅಧ್ಯಕ್ಷ ಫಣೀಶ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿ ಸಿಇಒ ಎ.ಎಂ.ಯೋಗೀಶ್, ಪಾಲಿಕೆ ಆಯುಕ್ತ ಜಿ.ಲಕ್ಷ್ಮಿಕಾಂತ್ ರೆಡ್ಡಿ, ಡಿಸಿಪಿ ಗೀತಾ ಪ್ರಸನ್ನ, ರಂಗಕರ್ಮಿಗಳಾದ ಬಸವಲಿಂಗಯ್ಯ, ಮಂಡ್ಯ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು