ಬುಧವಾರ, ಆಗಸ್ಟ್ 4, 2021
27 °C
ಒಳಚರಂಡಿಯ ಕೊಳಚೆ ನೀರು, ಕೋಳಿ–ಮೀನಿನ ತ್ಯಾಜ್ಯವೂ ರಾಜಕಾಲುವೆ ಒಡಲಿಗೆ

ಮೈಸೂರು | ದಿವಾನ್ ಪೂರ್ಣಯ್ಯ ನಾಲೆ ಅತಿಕ್ರಮಣ; ಅನೈರ್ಮಲ್ಯದ ತಾಣ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮಳೆ ನೀರಿನಿಂದಲೇ ಮೈಸೂರಿನ ವಿವಿಧ ಕೆರೆಗಳ ಒಡಲು ತುಂಬಿಸುತ್ತಿದ್ದ ದಿವಾನ್ ಪೂರ್ಣಯ್ಯ ನಾಲೆಯ (ರಾಜಕಾಲುವೆ) ಒಡಲಲ್ಲೇ ಇದೀಗ ಹೂಳು ತುಂಬಿಕೊಂಡಿದೆ.

ಮಹಾರಾಜರ ಆಡಳಿತದ ಅವಧಿಯಲ್ಲೇ ನಿರ್ಮಾಣಗೊಂಡಿರುವ ಈ ರಾಜಕಾಲುವೆಯುದ್ದಕ್ಕೂ ಇದೀಗ ಅಲ್ಲಲ್ಲಿ ಕಳೆ ಗಿಡಗಳು ಬೆಳೆದು ನೀರಿನ ಹರಿವಿಗೆ ತೊಡಕಾಗಿವೆ. ಇದರ ಜೊತೆಗೆ ನಾಲೆಯ ಅತಿಕ್ರಮಣವೂ ನಡೆದಿದ್ದು, ಹೂಳು ತುಂಬಿಕೊಳ್ಳಲು ಪ್ರಮುಖ ಕಾರಣವಾಗಿದೆ.

ಹುಣಸೂರು ರಸ್ತೆ ಬದಿ ಬರುವ ಸುಬ್ರಹ್ಮಣ್ಯ ನಗರದಲ್ಲಿ ನಾಲೆಯೊಡಲಿಗೆ ಇತ್ತೀಚಿನ ವರ್ಷಗಳಲ್ಲಿ ಹಿನಕಲ್‌ನಿಂದ ಬರುವ ಒಳಚರಂಡಿಯ ಕೊಳಚೆ ನೀರು ನೇರವಾಗಿ ಸೇರುತ್ತಿದೆ. ಸಮೀಪದಲ್ಲೇ ಯುಜಿಡಿ ಸಂಪರ್ಕವಿದೆ. ಆದರೆ ಮೈಸೂರು ಮಹಾನಗರ ಪಾಲಿಕೆಯಾಗಲಿ, ನಗರಾಭಿವೃದ್ಧಿ ಪ್ರಾಧಿಕಾರವಾಗಲಿ, ಹಿನಕಲ್ ಗ್ರಾಮ ಪಂಚಾಯಿತಿ ಆಡಳಿತವಾಗಲಿ ಕೊಳಚೆ ನೀರನ್ನು ಯುಜಿಡಿಗೆ ಸಂಪರ್ಕಿಸುವ ಯತ್ನವನ್ನೇ ನಡೆಸಿಲ್ಲ. ಮೂರು ವರ್ಷಗಳಿಂದ ಅಸಹ್ಯಕರ ವಾತಾವ ರಣದಲ್ಲೇ ಬದುಕುವಂತಾಗಿದೆ ಎಂಬ ದೂರು ಸ್ಥಳೀಯರದ್ದು.

ಇದೇ ನಾಲೆಗೆ ಕೋಳಿ–ಮೀನಿನ ತ್ಯಾಜ್ಯ ಸುರಿಯಲಾಗುತ್ತಿದೆ. ಕಾರು ಶೋ ರೂಂನ ಕಲುಷಿತ ನೀರು ಸಹ ಇದರೊಳಕ್ಕೆ ಹರಿಯುತ್ತಿದೆ. ಇದರಿಂದ ಸೊಳ್ಳೆಗಳು ಹೆಚ್ಚಾಗಿದೆ. ಸಾಂಕ್ರಾಮಿಕ ರೋಗದ ಭೀತಿಯೂ ಹೆಚ್ಚಿದೆ. ನಾಲೆಯೊಳಗೆ ಹೂಳು ತುಂಬಿರುವುದರಿಂದ ಮಳೆಗಾಲದಲ್ಲಿ ಮಳೆ ನೀರು ರಾಜಕಾಲುವೆ ತುಂಬಿ, ರಸ್ತೆಯಲ್ಲಿ ಹರಿಯುತ್ತದೆ.

‘ಹೆಬ್ಬಾಳದಿಂದ ಆರಂಭಗೊಳ್ಳುವ ಈ ರಾಜಕಾಲುವೆ 20 ಅಡಿ ಅಗಲ ವಿದೆ. ಮುಂದೆ ಸಾಗಿದಂತೆ 40 ಅಡಿ ಅಗಲವಿದೆ. ಮೈಸೂರು ನಗರದ ವಿವಿಧ ಭಾಗಗಳ ಮೂಲಕ ಹಾದು, ಅಂತಿ ಮವಾಗಿ ಲಿಂಗಾಂಬುದಿ ಕೆರೆ ಸೇರುತ್ತದೆ. ಇದೀಗ ನಾಲೆಯ ಸ್ವರೂಪ ಬದಲಾಗಿದೆ. ಕೆಲವೆಡೆ ಅತಿಕ್ರಮಣದಿಂದ ಆರು ಅಡಿ ಅಗಲವೂ ಇಲ್ಲವಾಗಿದೆ’ ಎಂದು ಸುಬ್ರಹ್ಮಣ್ಯ ನಗರದ ವಿನಾಯಕ ಭಟ್ ‘ಪ್ರಜಾವಾಣಿ’ ಬಳಿ ದೂರಿದರು.

‘ಹರ್ಷಗುಪ್ತ ಅವರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ಆರಂಭಗೊಂಡಿತ್ತು. ಆದರೆ ಪೂರ್ಣಗೊಳ್ಳಲಿಲ್ಲ. ಅಂದಿನಿಂದಲೂ ನಾಲೆ ಅವನತಿ ಹೊಂದುತ್ತಿದೆ. ಈಗಲಾದರೂ ಒತ್ತುವರಿ ತೆರವುಗೊಳಿಸಬೇಕು’ ಎಂದು ಸ್ಥಳೀಯ ನಿವಾಸಿಗಳ ಸಂಘಟನೆಯ ಕಾರ್ಯದರ್ಶಿ ವೆಂಕಟೇಶ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು