ಗುರುವಾರ , ಆಗಸ್ಟ್ 18, 2022
27 °C

ಭೂತಕಾಲದ ಒಳಿತನ್ನಷ್ಟೆ ಸ್ವೀಕರಿಸಬೇಕು: ಡಾ.ರಹಮತ್‌ ತರೀಕೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ವಿಚಾರ ಕ್ರಾಂತಿಗೆ ಆಹ್ವಾನ ನೀಡಿದ ಕುವೆಂಪು ನಾಡಿನಲ್ಲಿ ವಿಚಾರ ಮಾಡುವುದೇ ಅಪರಾಧ ಎನ್ನುವಂತಾಗಿದೆ. ವಿಚಾರವಂತರನ್ನು ಕೊಲ್ಲಲಾಗುತ್ತಿದೆ; ಜೈಲಿನಲ್ಲಿರಿಸಲಾಗುತ್ತಿದೆ’ ಎಂದು ವಿಮರ್ಶಕ ಡಾ.ರಹಮತ್‌ ತರೀಕೆರೆ ಕಳವಳ ವ್ಯಕ್ತಪಡಿಸಿದರು.

ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಕಾವೇರಿ ಸಭಾಂಗಣದಲ್ಲಿ ಪ್ರಚಾರೋಪನ್ಯಾಸ ಮಾಲೆಯನ್ನು ಶುಕ್ರವಾರ ಉದ್ಘಾಟಿಸಿ, ‘ಕುವೆಂಪು ಚಿಂತನೆಗಳಲ್ಲಿ ನಾಗರಿಕ ಸಮಾಜದ ಪರಿಕಲ್ಪನೆ’ ವಿಷಯದ ಕುರಿತು ಅವರು ಮಾತನಾಡಿದರು.

‘ಕೆಟ್ಟ ವ್ಯವಸ್ಥೆ ವಿರುದ್ಧ ಬಂಡೆದ್ದ ಲೇಖಕರೆಲ್ಲರೂ ಪರ್ಯಾಯ ಸಮಾಜದ ಪರಿಕಲ್ಪನೆ ಕೊಟ್ಟಿದ್ದಾರೆ. ಜಗತ್ತನ್ನು ಸುಂದರವಾಗಿಸಲು ಪ್ರಯತ್ನಿಸಿದ್ದಾರೆ. ಬಸವಣ್ಣ, ಅಂಬೇಡ್ಕರ್, ಕುವೆಂಪು ಮೊದಲಾದವರು ಪರ್ಯಾಯ ಸಮಾಜದ ಪರಿಕಲ್ಪನೆ ಕೊಟ್ಟ ಮಹನೀಯರು’ ಎಂದು ಸ್ಮರಿಸಿದರು.

‘ವರ್ತಮಾನದ ನಾಗರಿಕ ಸಮಾಜ ಭೂತ ಕಾಲದ ಕೇಡುಗಳನ್ನು ಧ್ಯಾನಿಸುತ್ತಿದ್ದರೆ ಉತ್ತಮ ಭವಿಷ್ಯ ನಿರ್ಮಾಣ ಸಾಧ್ಯವಾಗದು. ಭೂತಕಾಲವನ್ನು ಹೇಗೆ ನೋಡಬೇಕು? ಭವಿಷ್ಯವನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂಬುದು ತಿಳಿದಿರಬೇಕು. ಭೂತಕಾಲದಿಂದ ಒಳಿತನ್ನಷ್ಟೆ ಸ್ವೀಕರಿಸಬೇಕು. ಚರಿತ್ರೆಯಿಂದ ಪಾಠ ಕಲಿಯದಿದ್ದರೆ ಭವಿಷ್ಯ ಕಟ್ಟುವುದು ಸಾಧ್ಯವಾಗುವುದಿಲ್ಲ ಎನ್ನುವ ಅರಿವಿರಬೇಕು’ ಎಂದು ತಿಳಿಸಿದರು.

‘ಕುವೆಂಪು ಸಾಂಸ್ಕೃತಿಕ ನಾಯಕ. ಹಾಗಾಗಿಯೇ ನಮಗೆಲ್ಲ ನೋವಾದಾಗ ಮತ್ತೆ ಮತ್ತೆ ನೆನಪಾಗುತ್ತಾರೆ. ಬಿಸಿಲಿನಲ್ಲಿ ನಿಂತವರಿಗೆ ಮರದಂತೆ ನೆರಳು ನೀಡುತ್ತಾರೆ. ಅವರೊಂದಿಗೆ ಎಲ್ಲರೂ ಅನುಸಂಧಾನ ಮಾಡಬೇಕು’ ಎಂದು ನುಡಿದರು.

‘ನಮ್ಮಲ್ಲಿ ಎರಡು ಪರಂಪರೆಯ ಲೇಖಕರಿರುತ್ತಾರೆ. ಸೌಂದರ್ಯ ವರ್ಣಿಸುವವರು. ಮತ್ತೊಂದು ವರ್ಗದವರು, ವ್ಯವಸ್ಥೆಯನ್ನು ಪ್ರಶ್ನಿಸಿ ಸಾರ್ವಜನಿಕ ಅಪಾದನೆ–ಆಕ್ರೋಶ ಎದುರಿಸುತ್ತಾರೆ. ಕುವೆಂಪು ಮತ್ತು ಬಸವಣ್ಣ 2ನೇ ಸಾಲಿನಲ್ಲಿ ನಿಲ್ಲುತ್ತಾರೆ. ಇವರಿಬ್ಬರೂ ಕರ್ನಾಟಕದ ವಿವೇಕದ ಕಣ್ಣುಗಳು’ ಎಂದು ಸ್ಮರಿಸಿದರು.

ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ಆರ್. ರಾಜಣ್ಣ, ಪ್ರಸಾರಾಂಗ ಸಂಯೋಜನಾಧಿಕಾರಿ ಡಾ.ಆರ್. ಸಂತೋಷ್ ನಾಯಕರ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು