ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂಚಾಲಿತ ಸ್ವ‌ಚ್ಛತಾ ಘಟಕಕ್ಕೆ ಚಾಲನೆ

ರೈಲ್ವೆ ಕಾರ್ಯಾಗಾರಕ್ಕೆ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪ‍ಕ ಸಂಜೀವ್‌ ಕಿಶೋರ್‌ ಭೇಟಿ; ಪರಿಶೀಲನೆ
Last Updated 17 ಏಪ್ರಿಲ್ 2022, 2:26 IST
ಅಕ್ಷರ ಗಾತ್ರ

ಮೈಸೂರು: ರೈಲು ಕೋಚ್‌ಗಳ ಹೊರಭಾಗವನ್ನು ಸ್ವಯಂಚಾಲಿತವಾಗಿ ಸ್ವಚ್ಛಗೊಳಿಸುವ ನೂತನ ವ್ಯವಸ್ಥೆಗೆ ನಗರದ ರೈಲು ನಿಲ್ದಾಣದಲ್ಲಿ ಚಾಲನೆ ನೀಡಲಾಗಿದೆ. ನೈರುತ್ಯ ರೈಲ್ವೆ ಹುಬ್ಬಳ್ಳಿಯ ಪ್ರಧಾನ ವ್ಯವಸ್ಥಾಪ‍ಕ ಸಂಜೀವ್‌ ಕಿಶೋರ್‌ ಅವರು ಹೊಸ ಸೌಲಭ್ಯವನ್ನು ಉದ್ಘಾಟಿಸಿದರು.

‘ಸ್ವಯಂಚಾಲಿತ ರೈಲು ಕೋಚ್‌ ಸ್ವಚ್ಛತಾ ಘಟಕ’ದೊಳಗೆ ರೈಲು ನಿಧಾನ ವಾಗಿ ಚಲಿಸುವಾಗಲೇ ಎರಡೂ ಬದಿಯಲ್ಲಿ ಅಳವಡಿಸಲಾಗಿರುವ ಯಂತ್ರಗಳು ಸ್ವಚ್ಛಗೊಳಿಸುತ್ತವೆ. ಅತಿ ಕಡಿಮೆ ನೀರು ಬಳಸಿಕೊಂಡು ರೈಲು ಬೋಗಿಗಳನ್ನು ಕಡಿಮೆ ಸಮಯದಲ್ಲಿ ಸ್ವಚ್ಛಗೊಳಿಸಲಿದೆ. ಮಾನವಶಕ್ತಿ ಬಳಕೆಯೂ ಕಡಿಮೆಯಾಗಲಿದೆ.

‘ಹೊಸ ವ್ಯವಸ್ಥೆ ಬಂದಿರುವುದರಿಂದ ರೈಲು ಬೋಗಿಗಳನ್ನು ಕಡಿಮೆ ಅವಧಿಯಲ್ಲಿ ಸ್ವಚ್ಛಗೊಳಿಸಲು ಸಾಧ್ಯವಾಗಲಿದೆ. ಮ್ಯಾನ್ಯುಯಲ್‌ ಸ್ವಚ್ಛತೆಯಲ್ಲಿ ಹೆಚ್ಚಿನ ನೀರು ಪೋಲಾಗುತ್ತಿತ್ತು. ಮಾತ್ರವಲ್ಲ, ಬೋಗಿಗಳ ಮೇಲ್ಭಾಗ ಸ್ವಚ್ಛಗೊಳಿಸಲು ಆಗುತ್ತಿರಲಿಲ್ಲ. ಇದರಲ್ಲಿ ಕೋಚ್‌ನ ಹೊರಭಾಗ ಸಂಪೂರ್ಣ ಸ್ವಚ್ಛಗೊಳ್ಳಲಿದೆ. ಹೆಚ್ಚಿನ ಕಾರ್ಮಿಕರ ಅವಶ್ಯಕತೆಯೂ ಇಲ್ಲ’ ಎಂದು ಸಂಜೀವ್‌ ಕಿಶೋರ್ ತಿಳಿಸಿದರು.

‘ಪ್ರತಿ ಬಾರಿ ತೊಳೆಯುವಾಗಲೂ ಶೇ 60 ರಿಂದ 70 ರಷ್ಟು ಮರುಬಳಕೆಯ ನೀರನ್ನೇ ಉಪಯೋಗಿಸಲಾಗುತ್ತದೆ. 24 ಬೋಗಿಗಳನ್ನು ಒಳಗೊಂಡ ರೈಲನ್ನು 5 ರಿಂದ 6 ನಿಮಿಷಗಳಲ್ಲಿ ಸ್ವಚ್ಛಗೊಳಿಸಬಹುದು. ನಿಮಿಷಕ್ಕೆ 4–5 ಕೋಚ್‌ಗಳನ್ನು ಸ್ವಚ್ಛಗೊಳಿಸಲು ಸಾಧ್ಯ. ಇಷ್ಟು ಬೋಗಿಗಳನ್ನು ಸಿಬ್ಬಂದಿ ಬಳಸಿ ಸ್ವಚ್ಛಗೊಳಿಸಬೇಕಾದರೆ ಮೂರು ಗಂಟೆಗಳು ಬೇಕು’ ಎಂದರು.

ರೈಲ್ವೆ ಕಾರ್ಯಾಗಾರಕ್ಕೆ ಭೇಟಿ: ಸಂಜೀವ್‌ ಕಿಶೋರ್‌ ಅವರು ಅಶೋಕ‍ಪುರಂನಲ್ಲಿರುವ ರೈಲ್ವೆ ಕಾರ್ಯಾಗಾರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಹೊಸದಾಗಿ ನಿರ್ಮಿಸಿರುವ ಐಒಎಚ್‌ ಶೆಡ್‌ ಅನ್ನು ಉದ್ಘಾಟಿಸಿದರು.

ನೈರುತ್ಯ ರೈಲ್ವೆ ಮುಖ್ಯ ಮೆಕ್ಯಾನಿಕಲ್‌ ಎಂಜಿನಿಯರ್‌ ಯು.ಸುಬ್ಬಾರಾವ್, ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್‌ ಅಗರವಾಲ್, ಮೈಸೂರು ವಿಭಾಗೀಯ ಹಿರಿಯ ವಾಣಿಜ್ಯ ವ್ಯವಸ್ಥಾಪಕ ಮಂಜುನಾಥ್ ಕನಮಡಿ, ವಿಭಾಗದ ಹಿರಿಯ ಅಧಿಕಾರಿಗಳು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT