ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರ್‌ ಕೈ ಹಿಡಿದ ಹೈನುಗಾರಿಕೆ

ಕೈತುಂಬಾ ಸಂಬಳದ ನೌಕರಿ ಬಿಟ್ಟು ಕೃಷಿಯತ್ತ ಮುಖ ಮಾಡಿದ ಯುವ ರೈತ
Last Updated 24 ಫೆಬ್ರುವರಿ 2020, 10:42 IST
ಅಕ್ಷರ ಗಾತ್ರ

ಜಯಪುರ: ಹೋಬಳಿಯ ಗೋಪಾಲಪುರದ ನಿವಾಸಿ ದಿಲೀಪ್ ಓದಿದ್ದು ಎಂಜಿನಿಯರಿಂಗ್ ಪದವಿ. ತಮಿಳುನಾಡಿನ ಚೆನ್ನೈನ ಕಂಪನಿ ಯೊಂದರಲ್ಲಿ ನೌಕರಿ. ಕೈತುಂಬಾ ಸಂಬಳ ಸಿಗುತ್ತಿದ್ದ ಉದ್ಯೋಗವನ್ನು ತೊರೆದು ಹೈನುಗಾರಿಕೆ ಮಾಡುವ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

32 ವರ್ಷದ ದಿಲೀಪ್ ನಾಲ್ಕು ಎಕರೆ ಜಮೀನು ಹೊಂದಿದ್ದು, ಸಾವಯವ ಕೃಷಿ ಮಾಡುತ್ತಿದ್ದಾರೆ. ಪ್ರಧಾನವಾಗಿ ಹೈನುಗಾರಿಕೆಗೆ ಒತ್ತು ನೀಡಿದ್ದಾರೆ. ಆರಂಭದಲ್ಲಿ ಎರಡು ಹಸುಗಳನ್ನು ಸಾಕಿದ್ದ ಅವರು ಶೆಡ್‌ನಲ್ಲಿ ಈಗ 18 ಹಸುಗಳಿವೆ. ಈ ಶೆಡ್‌ ನಿರ್ಮಿಸಲು ಕೆನರಾ ಬ್ಯಾಂಕ್‌ನಿಂದ ₹10 ಲಕ್ಷ ಸಾಲ ಪಡೆದಿದ್ದಾರೆ.

ನಾಲ್ಕು ಜರ್ಸಿ ಹಸುಗಳು, 12 ಎಚ್‌ಎಫ್‌ ಹಸುಗಳು ಹಾಗೂ ಎರಡು ದೇಸಿ ಹಸುಗಳಿವೆ. ಜರ್ಸಿ ಹಸುಗಳು 9ರಿಂದ 10 ಲೀಟರ್, ಎಚ್ಎಫ್ ಹಸುಗಳು 8ರಿಂದ 10 ಲೀಟರ್, ದೇಸಿ ಹಸುಗಳು 3ರಿಂದ 4 ಲೀಟರ್‌ ಹಾಲು ನೀಡುತ್ತಿವೆ. ಪ್ರತಿನಿತ್ಯ 160 ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಯಂತ್ರಗಳ ಸಹಾಯದಿಂದ ಹಾಲು ಕರೆಯಲಾಗುತ್ತದೆ.

ಕಲ್ಪತರು ಡೇರಿ ಪ್ರಾಜೆಕ್ಟ್: ಮೈಸೂರಿನ ಅರವಿಂದ ನಗರದಲ್ಲಿ ತಮ್ಮದೇ ಆದ ‘ಕಲ್ಪತರು ಡೇರಿ ಪ್ರಾಜೆಕ್ಟ್’ ಎಂಬ ಹೆಸರಿನಿಂದ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಮಟ್ಕಾ ಕುಲ್ಫಿ, ಪನ್ನೀರ್‌, ಐಸ್‌ಕ್ರೀಂ, ಬೆಣ್ಣೆ, ತುಪ್ಪ ತಯಾರಿಸುತ್ತಾರೆ. ಮಟ್ಕಾ ಕುಲ್ಫಿಗೆ ಐದು ವಿಧದ ಡ್ರೈಫ್ರೂಟ್‌ಗಳನ್ನು ಬಳಸುತ್ತಾರೆ. ಲೀಟರ್‌ ಹಾಲಿಗೆ ₹45 ದರ ನಿಗದಿ ಮಾಡಲಾಗಿದೆ. ಹಾಲು ಹಾಗೂ ಹಾಲಿನ ಉತ್ಪನ್ನಗಳ ಮಾರಾಟದಿಂದ ಪ್ರತಿ ತಿಂಗಳು ಸುಮಾರು ₹2.5 ಲಕ್ಷ ಆದಾಯ ಗಳಿಸುತ್ತಿದ್ದಾರೆ.

ಅಡುಗೆಗೆ ಜರ್ಮನ್ ಟೆಕ್ನಾಲಜಿಯ ಗೋಬರ್ ಗ್ಯಾಸ್ ಬಳಕೆ ಮಾಡುತ್ತಾರೆ. ಹೈನುಗಾರಿಕೆ ಜೊತೆಗೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಶುಂಠಿ, ಬಾಳೆ, ಮಾವು, ತೆಂಗು ಬೆಳೆಯುತ್ತಿದ್ದಾರೆ. ನಾಟಿ ಕೋಳಿ ಸಾಕಣೆಯನ್ನೂ ಮಾಡುತ್ತಿದ್ದಾರೆ. ಹಸುಗಳು ಅನಾರೋಗ್ಯಕ್ಕೆ ತುತ್ತಾದರೆ ಸ್ವತಃ ದಿಲೀಪ್‌ ಅವರೇ ಚಿಕಿತ್ಸೆ ನೀಡುವುದು ವಿಶೇಷ.

‘ಹೈನುಗಾರಿಕೆ ಉತ್ತೇಜನಕ್ಕೆ ಮೈಸೂರಿನ ಕೆನರಾ ಬ್ಯಾಂಕ್ ಶಾಖೆಯು ಆರ್ಥಿಕ ಸಹಾಯ ಒದಗಿಸಿದೆ. ಜಯಪುರ ಹೋಬಳಿಯ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಹಾಗೂ ಕೃಷಿ ಇಲಾಖೆ ತಾಂತ್ರಿಕ ವ್ಯವಸ್ಥಾಪಕ ಹೇಮಂತ್ ಕುಮಾರ್‌ ಅಗತ್ಯ ಮಾರ್ಗದರ್ಶನ ನೀಡಿದ್ದಾರೆ. ರೈತ ಸಂಪರ್ಕ ಕೇಂದ್ರದ ವತಿಯಿಂದ ಕೃಷಿ ಕ್ಷೇತ್ರೋತ್ಸವಗಳು ನಡೆದಿವೆ. ವಿದೇಶಿ ಪ್ರತಿನಿಧಿಗಳು ನಮ್ಮ ತೋಟ ಹಾಗೂ ಶೆಡ್‌ಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ’ ಎಂದು ದಿಲೀಪ್‌ ತಿಳಿಸಿದರು.

ಹಸುಗಳಿಗೆ ಆಹಾರ ತಯಾರಿಕೆ

‘ಹಸುಗಳಿಗೆ ಬೇಕಿರುವ ಆಹಾರವನ್ನು ಸ್ವತಃ ಸಿದ್ಧಪಡಿಸಿಕೊಳ್ಳುತ್ತೇವೆ. ಸಾವಯವ ಪದ್ಧತಿಯಲ್ಲಿ ಬೆಳೆದ ಮುಸುಕಿನ ಜೋಳ, ಕಡಲೆಕಾಯಿ ಹಿಂಡಿ, ಸೋಯಾಬಿನ್, ಅಲಸಂದೆ ಸೇರಿದಂತೆ ದ್ವಿದಳ ಧಾನ್ಯಗಳನ್ನು ಬಳಸಲಾಗುತ್ತದೆ. ಇದರಿಂದ ಹಸುಗಳಿಗೆ ಹೆಚ್ಚಿನ ಪ್ರೋಟೀನ್ ಅಂಶ ಸಿಗುತ್ತದೆ. ಪ್ರತಿ ಹಸುವಿಗೆ ಪ್ರತಿ ಬಾರಿ 1 ಕೆ.ಜಿ. ಆಹಾರ ನೀಡಲಾಗುತ್ತದೆ. ಜೊತೆಗೆ ರಸಮೇವು, ಮೆಕ್ಕೆಜೋಳದ ಮೇವು, ಸೂಪರ್ ನೇಪಿಯರ್ ಹುಲ್ಲು, ಸೀಮೆಹುಲ್ಲು ನೀಡಲಾಗುತ್ತದೆ. ಹಸುಗಳಿಗೆ ಅಗತ್ಯವಿರುವ ಮೇವನ್ನು ಸಹ ಸಾವಯವ ಪದ್ಧತಿಯಲ್ಲೇ ಬೆಳೆಯಲಾಗುತ್ತದೆ’ ಎಂದು ದಿಲೀಪ್‌ ತಿಳಿಸಿದರು.

ದಿಲೀಪ್‌ ಅವರ ಮೊಬೈಲ್‌ ಸಂಖ್ಯೆ 9538841956.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT