ಶನಿವಾರ, ಜನವರಿ 23, 2021
21 °C
ಕರ್ನಾಟಕದ ಕಟ್ಟಡ ಕಾರ್ಮಿಕರಿಗೆ ಬಿಎಂಎಸ್‌ ವತಿಯಿಂದ ₹ 70 ಕೋಟಿ ಕ್ಲೇಮಿನ ಪರಿಹಾರ

ಗ್ರಾಮಗಳಿಗೂ ಸಂಘಟನೆ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಧಾರವಾಡ–ಹುಬ್ಬಳ್ಳಿಯಲ್ಲಿ 2008ರಲ್ಲಿ ಎಂಟು ಸದಸ್ಯರಿಂದ ಆರಂಭಗೊಂಡ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್‌ ಸಂಘ, ಇದೀಗ 22 ರಾಜ್ಯಗಳಲ್ಲಿ ಕಾರ್ಯಾಚರಿಸುತ್ತಿದೆ’ ಎಂದು ಅಖಿಲ ಭಾರತ ಕನ್ಸ್‌ಟ್ರಕ್ಷನ್‌ ಮಜ್ದೂರ್ ಮಹಾಸಂಘದ ಅಧ್ಯಕ್ಷ ಸಿ.ಟಿ.ಪಾಟೀಲ ಹೇಳಿದರು.

ನಗರದ ಮಾಧವ ಕೃಪದಲ್ಲಿ ಭಾನುವಾರ ಸಂಜೆ ನಡೆದ ದತ್ತೋಪಂತ್ ರೇಂಗಡಿ ಜನ್ಮ ಶತಾಬ್ದಿ ಸಮಾರಂಭದಲ್ಲಿ ಮೈಸೂರು ಜಿಲ್ಲಾ ಮತ್ತು ನಗರ ಘಟಕದ ವತಿಯಿಂದ 2021ನೇ ಸಾಲಿನ ಕ್ಯಾಲೆಂಡರ್‌ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಭಾರತೀಯ ಮಜ್ದೂರ್‌ ಸಂಘಟನೆಯಡಿ (ಬಿಎಂಎಸ್‌) ಸಂಘ ಕಾರ್ಯಾಚರಿಸುತ್ತಿದ್ದು, ಕರ್ನಾಟಕದಲ್ಲಿ ಇದೂವರೆಗೂ ನಮ್ಮ ಸಂಘಟನೆಯಿಂದ ₹ 70 ಕೋಟಿ ಕ್ಲೇಮು ಪರಿಹಾರ ಹಾಗೂ ವಿವಿಧ ಯೋಜನೆಯಡಿಯ ಸೌಲಭ್ಯವನ್ನು ಕಟ್ಟಡ ಕಾರ್ಮಿಕರಿಗೆ ಕೊಡಿಸಿದ್ದೇವೆ’ ಎಂದು ತಿಳಿಸಿದರು.

‘ಅಸಂಘಟಿತ ಕಾರ್ಮಿಕರ ಕ್ಷೇತ್ರದಲ್ಲಿ ಕಾರ್ಮಿಕರನ್ನು ಸಂಘಟಿಸಿ, ಅವರ ಶ್ರೇಯೋಭಿವೃದ್ಧಿಗಾಗಿ ದುಡಿಯಬೇಕು ಎಂದು ದತ್ತೋಪಂತ್ ರೇಂಗಡಿ ಈ ಹಿಂದೆಯೇ ಹೇಳಿದ್ದರು. ಅದರಂತೆ ಬಿಎಂಎಸ್‌ ಕಾರ್ಯಾಚರಿಸುತ್ತಿದೆ. ಎಲ್ಲೆಡೆ ಸಂಘಟನೆಯನ್ನು ವಿಸ್ತರಿಸುತ್ತಿದೆ’ ಎಂದು ಪಾಟೀಲ ಹೇಳಿದರು.

‘ಕಟ್ಟಡ ಕಾರ್ಮಿಕರು, ಸಂಘಟನೆ ಬಗ್ಗೆ ಕೆಲವು ವರ್ಷಗಳ ಹಿಂದೆ ಯಾರೊಬ್ಬರಿಗೂ ಗೊತ್ತಿರಲಿಲ್ಲ. ಇದೀಗ ರಾಜ್ಯದ 20 ಜಿಲ್ಲೆಯಲ್ಲಿ ಸಂಘಟನೆಯಿದೆ. 25 ಸಾವಿರ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ. ಕೋವಿಡ್‌ನಿಂದ ಸಂಘಟನೆಗೆ ಕೊಂಚ ಹಿನ್ನಡೆಯಾಗಿತ್ತು. ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮದ ಹಂತದಲ್ಲೂ ಸಂಘಟನೆಯ ಕೆಲಸಗಳನ್ನು ಚುರುಕುಗೊಳಿಸಲಿದ್ದೇವೆ. 60 ಸಾವಿರ ಕಾರ್ಮಿಕರನ್ನು ನೋಂದಾಯಿಸುವ ಗುರಿ ಹೊಂದಿದ್ದೇವೆ’ ಎಂದು ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್‌ ಸಂಘದ ಅಧ್ಯಕ್ಷ ಚಿಂತಾಮಣಿ ಕೋಡಹಳ್ಳಿ ತಿಳಿಸಿದರು.

ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ಚಂದ್ರು ಮಾತನಾಡಿ ‘ಜಿಲ್ಲಾ ಸಂಘಕ್ಕೆ ಕಟ್ಟಡ ನಿರ್ಮಿಸಬೇಕಿದೆ. ಸಂಘಟನೆಯನ್ನು ಮತ್ತಷ್ಟು ಬಲವರ್ಧನೆಗೊಳಿಸಲು ಸದಸ್ಯರು ಸಹಕಾರ ನೀಡಬೇಕು’ ಎಂದು ಮನವಿ ಮಾಡಿದರು.

ಕುಟುಂಬ ಪ್ರಭೋದನ ಸಂಯೋಜಕ ಎಸ್‌.ಎಲ್‌.ರಂಗರಾಜು ಮಾತನಾಡಿದರು. ಗೌರವ ಅಧ್ಯಕ್ಷ ಸಿದ್ದರಾಜು ಉಪಸ್ಥಿತರಿದ್ದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಎಚ್‌.ಕೆ.ನಾಗೇಶ್‌ ಸ್ವಾಗತಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.