ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ

ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಲು ರೈತರ ಒತ್ತಾಯ
Last Updated 19 ಫೆಬ್ರುವರಿ 2021, 2:28 IST
ಅಕ್ಷರ ಗಾತ್ರ

ನಂಜನಗೂಡು: ಕೇಂದ್ರ ಸರ್ಕಾರದ ಕೃಷಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ನಗರದ ರೈಲು ನಿಲ್ದಾಣದ ಮುಂಭಾಗ ಗುರುವಾರ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಿಲ್ದಾಣದ ಮುಖ್ಯದ್ವಾರದ ಮುಂಭಾಗ ಜಮಾಯಿಸಿದ ರೈತ ಸಂಘಟನೆಯ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ‘ಕೇಂದ್ರ ಸರ್ಕಾರ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಜಾರಿ ಮೂಲಕ ಸಣ್ಣ ಹಿಡುವಳಿದಾರ ರೈತರ ಜಮೀನನ್ನು ಕಿತ್ತುಕೊಂಡು ಕಾರ್ಪೊರೇಟ್ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ಹುನ್ನಾರ ನಡೆಸಿದೆ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಉಳುವವನೇ ಭೂಮಿ ಒಡೆಯ ಎಂಬುದರ ಬದಲಾಗಿ ಉಳ್ಳವನೇ ಭೂಮಿ ಒಡೆಯ ಎಂಬ ಧೋರಣೆಯನ್ನು ಸರ್ಕಾರ ಹೊಂದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ರೈತರ ಆರ್ಥಿಕ ಸ್ಥಿತಿಯನ್ನು ನಾಶಪಡಿಸುವ ವ್ಯವಸ್ಥಿತ ಹುನ್ನಾರ ನಡೆಸಿದೆ. ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆ ಮಾರ್ಪಡಿಸಿ ದೇಶದ ಆಹಾರ ಭದ್ರತೆ ಸ್ವಾಮ್ಯತೆಯನ್ನು ಬಂಡವಾಳ ಶಾಹಿಗಳ ಕೈಗೆ ನೀಡಿ ಅವರ ತಿಜೋರಿ ತುಂಬಿಸುವ ಕೆಲಸಕ್ಕೆ ಮುಂದಾಗಿದೆ’ ಎಂದು ಆರೋಪಿಸಿದರು.

‘ದೇಶದಾದ್ಯಂತ ರೈಲುತಡೆ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ. ರೈತರ ಹೋರಾಟಕ್ಕೆ ಬೆಂಬಲ ನೀಡಲು ರೈತ ಸಂಘ ಪ್ರತಿಭಟನೆಯಲ್ಲಿ ಪಾಲ್ಗೊಂಡಿದೆ. ಈ ಕೂಡಲೇ ಕೇಂದ್ರ ಸರ್ಕಾರಗಳು ಎಚ್ಚೆತ್ತುಕೊಂಡು ಭೂ ಸುಧಾರಣೆ ಕಾಯ್ದೆ ಎಪಿಎಂಸಿ ಕಾಯ್ದೆ, ಕಾರ್ಮಿಕ ಕಾಯ್ದೆಗಳನ್ನು ವಾಪಸ್ ಪಡೆಯಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸತೀಶ್ ರಾವ್, ಹಿಮ್ಮಾವು ರಘು, ಶಿವಣ್ಣ, ಅಳಗಂಚಿ ದೊಡ್ಡಯ್ಯ, ರಂಗಸ್ವಾಮಿ ನಾಯ್ಕ, ಕೆಂಪಣ್ಣ, ವೆಂಕಟೇಶ್, ಸುಬ್ಬೇಗೌಡ್ರು, ಮಹೇಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT