ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೂರು: ಹೈನುಗಾರಿಕೆಯಿಂದ ಆರ್ಥಿಕ ಸದೃಢ

ಸಹಕಾರ ಸಮ್ಮಿಲನ ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ ಅಭಿಮತ
Last Updated 31 ಜುಲೈ 2022, 6:09 IST
ಅಕ್ಷರ ಗಾತ್ರ

ಹುಣಸೂರು: ‘ಹೈನುಗಾರಿಕೆಯಿಂದಾಗಿ ದೇಶದ ಕೋಟ್ಯಂತರ ಕುಟುಂಬಗಳು ಆರ್ಥಿಕವಾಗಿ ಸದೃಢಗೊಂಡಿವೆ’ ಎಂದು ರಾಜ್ಯ ಸಹಕಾರಿ ಮಹಾಮಂಡಳದ ಅಧ್ಯಕ್ಷರೂ ಆದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಶನಿವಾರ ನಡೆದ ಸಹಕಾರ ಸಮ್ಮಿಲನ ಕಾರ್ಯಕ್ರಮದಲ್ಲಿ ವಿವಿಧ ಯೋಜನೆ ಮತ್ತು ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

‘ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಿದ್ದರು. ಗುಜರಾತ್‌ನಲ್ಲಿ ಕ್ಷೀರ ಕ್ರಾಂತಿ ಉಂಟಾಗಿತ್ತು. ಇಂದು ಹೈನುಗಾರಿಕೆಯಲ್ಲಿ ಗುಜರಾತ್ ಪ್ರಥಮ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ’ ಎಂದರು.

‌‘ಸಹಕಾರಿ ತತ್ವದಲ್ಲಿ ಹಾಲು ಉತ್ಪಾದಕ ಸಂಘಗಳು ಹಾಗೂ ಒಕ್ಕೂಟ ಗಳು ಯಶಸ್ವಿಯಾಗಿವೆ. ಕೆಎಂಎಫ್, ಅಮುಲ್ ಸಂಸ್ಥೆಗಳು ಉತ್ತಮವಾಗಿ ವಹಿವಾಟು ನಡೆಸುತ್ತಿವೆ. ವಿಶ್ವದಲ್ಲಿ ಭಾರತ 20 ಕೋಟಿ ಟನ್ ಹಾಲು ಉತ್ಪಾದಿಸುವ ಮೂಲಕ ಪ್ರಥಮ ಸ್ಥಾನದಲ್ಲಿದೆ. ಕೆಎಂಎಫ್‌ 140 ವಿವಿಧ ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ನೀಡುತ್ತಿದೆ’ ಎಂದು ತಿಳಿಸಿದರು.

ರಾಜ್ಯ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಹರೀಶ್ ಗೌಡ ಮಾತನಾಡಿ, ‘ಸಹಕಾರಿ ಕ್ಷೇತ್ರದಲ್ಲಿ ಮೈಸೂರು ದಾಪುಗಾಲಿಟ್ಟಿದ್ದು, 2018ರಲ್ಲಿದ್ದ ಎಂಡಿಸಿಸಿ ಪರಿಸ್ಥಿತಿ ಈಗ ಇಲ್ಲ. ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿಕೊಂಡಿದೆ. 60 ವರ್ಷಗಳಿಂದ ಎಂಡಿಸಿಸಿ ಕೇವಲ ₹337 ಕೋಟಿ ಠೇವಣಿ ಸಂಗ್ರಹಿಸಲು ಸಾಧ್ಯವಾಗಿತ್ತು. 2018ರ ಬಳಿಕ 4 ವರ್ಷಗಳಲ್ಲಿ ₹900 ಕೋಟಿ ಠೇವಣಿ ಸಂಗ್ರಹಿಸಿ, 45 ಸಾವಿರ ಜನರಿಗೆ ನೀಡಿದ್ದ ಸಾಲವನ್ನು 1 ಲಕ್ಷ ಕೃಷಿಕರಿಗೆ ವಿಸ್ತರಿಸಿ ₹1 ಸಾವಿರ ಕೋಟಿಯನ್ನು ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿದ್ದೇವೆ’ ಎಂದರು.

‘ಮಹಿಳಾ ಸ್ವಸಹಾಯ ಸಂಘಗಳಿಗೆ ಕಡಿಮೆ ಬಡ್ಡಿಯಲ್ಲಿ ಸುತ್ತು ನಿಧಿ ಸಾಲ ನೀಡುವ ಪ್ರಕ್ರಿಯೆ ಆರಂಭಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪೂರಕವಾಗಿದೆ’ ಎಂದು ಹೇಳಿದರು.

ಸಂಸದ ಪ್ರತಾಪಸಿಂಹ, ಮೈಮುಲ್ ಅಧ್ಯಕ್ಷ ಪ್ರಸನ್ನ, ಮೈಮುಲ್ ನಿರ್ದೇಶಕ ಕೆ.ಎಸ್.ಕುಮಾರ್ ಇದ್ದರು.

‘ಜಿಟಿಡಿ ಬೆಂಬಲ ಅಗತ್ಯ’

ಶಾಸಕ ಎಚ್‌.ಪಿ.ಮಂಜುನಾಥ್ ಮಾತನಾಡಿ, ‘ಕ್ಷೇತ್ರದಲ್ಲಿ ಸಹಕಾರ ಕ್ಷೇತ್ರ ಗಟ್ಟಿಗೊಳ್ಳಲು ಜಿ.ಟಿ.ದೇವೇಗೌಡರ ಕೊಡುಗೆ ಅನನ್ಯ . ಅದೇ ರೀತಿ ಕ್ಷೇತ್ರದ ಶಾಸಕನಾಗಲೂ ಅವರ ಸಹಕಾರವನ್ನು ಮರೆಯಲಾಗದು. 4 ಬಾರಿ ಶಾಸಕನಾಗಲು ಜಿ.ಟಿ.ದೇವೇಗೌಡರು ಒಂದಲ್ಲಾ ಒಂದು ರೀತಿಯಲ್ಲಿ ಕೈಜೋಡಿಸಿದ್ದು, 2023ರಲ್ಲೂ ಅದೇ ನಿರೀಕ್ಷೆಯಲ್ಲಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT