ಶುಕ್ರವಾರ, ಫೆಬ್ರವರಿ 26, 2021
28 °C
ಬಿರುಗಾಳಿಗೆ ಉರುಳಿದ ಮರಗಳು ಯಾರ ಸ್ವತ್ತು?

ಮೈಸೂರು: ಪಾಲಿಕೆ, ಅರಣ್ಯ ಇಲಾಖೆ ನಡುವೆ ಹಗ್ಗಜಗ್ಗಾಟ

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮೇ 3ರ ರಾತ್ರಿ ಬೀಸಿದ ಬಿರುಗಾಳಿಗೆ ನಗರದಲ್ಲಿ ಉರುಳಿದ ಮರಗಳು ಯಾರ ಸ್ವತ್ತು ಎಂಬುದು ಇದೀಗ ಪಾಲಿಕೆ ಮತ್ತು ಅರಣ್ಯ ಇಲಾಖೆಯ ನಡುವಿನ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಇದರಿಂದಾಗಿ ಹಲವೆಡೆ ಮರಗಳು ತೆರವಾಗದೇ ಸಾರ್ವಜನಿಕರಿಗೆ ತೊಂದರೆಯಾಗಿದೆ.

ಶುಕ್ರವಾರ ಸಂಜೆ ಸಿದ್ದಾರ್ಥ ಬಡಾವಣೆಯ ಹೊಸ ಜಿಲ್ಲಾಧಿಕಾರಿ ಕಚೇರಿ ಸಮೀಪ ಬಿದ್ದಿದ್ದ ಮರಗಳನ್ನು ತೆಗೆದುಕೊಂಡು ಹೋಗುತ್ತಿದ್ದ, ಪಾಲಿಕೆ ಅನುಮತಿ ನೀಡಿದ್ದ ವ್ಯಕ್ತಿಯ ವಾಹನವನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇಲಾಖೆಯ ಅನುಮತಿ ಇಲ್ಲದೇ ಮರಗಳನ್ನು ಕಡಿಯಲಾಗಿದೆ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಆರೋಪವಾಗಿದೆ.

ಕರ್ನಾಟಕ ಮುನ್ಸಿಪಾಲಿಟಿ ಕಾಯ್ದೆ 323 ಪ್ರಕಾರ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳನ್ನು ಕಡಿಯುವ ಹಕ್ಕು ಪಾಲಿಕೆಗೆ ಇದೆ. ಹಾಗಾಗಿ, ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ಮಾತ್ರ ಕತ್ತರಿಸಲಾಗಿದೆ ಎಂದು ಪಾಲಿಕೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಮಣಿಕಂಠ ಹೇಳುತ್ತಾರೆ.

ಎಲ್ಲೂ ಕೂಡ ಸುಸ್ಥಿತಿಯಲ್ಲಿದ್ದ ಮರಗಳನ್ನು ಕಡಿದಿಲ್ಲ. ಗಾಳಿಗೆ ಉರುಳಿದ, ಮುರಿದ ಟೊಂಗೆಗಳು, ಬೀಳುವ ಹಂತದಲ್ಲಿರುವ ಕೊಂಬೆಗಳನ್ನು ಮಾತ್ರ ಕತ್ತರಿಸಲಾಗಿದೆ. ಸಾರ್ವಜನಿಕರ ದೂರಿಗೆ ಸ್ಪಂದಿಸಲಾಗಿದೆ ಎಂದು ಅವರು ತಿಳಿಸುತ್ತಾರೆ.

ಮರದ ಮೌಲ್ಯ ಯಾರಿಗೆ ಸಂದಾಯವಾಗಬೇಕು?

ಇದಕ್ಕೂ ಮುನ್ನ ಪಾಲಿಕೆಯಿಂದ ಕತ್ತರಿಸಿದ ಮರಗಳ ತುಂಡುಗಳನ್ನು ಅರಣ್ಯ ಇಲಾಖೆಗೆ ಹಣ ಪಾವತಿಸಿ ‍ತೆಗೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಪಾಲಿಕೆಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಲಕ್ಷ್ಮೀಪುರಂ ಠಾಣೆಯಲ್ಲಿ  ದೂರು ನೀಡಿದ್ದರು. ಬಳಿಕ ವ್ಯಕ್ತಿಯು ಪಾಲಿಕೆಗೆ ಅದರ ಮೌಲ್ಯವನ್ನು ಸಂದಾಯ ಮಾಡಿ ತೆಗೆದುಕೊಂಡು ಹೋಗಲು ಆರಂಭಿಸಿದ್ದರು. ಇದೇ ರೀತಿ ಪಾಲಿಕೆಗೆ ಹಣ ಪಾವತಿಸಿ ತೆಗೆದುಕೊಂಡು ಹೋಗುತ್ತಿರುವಾಗ ಅರಣ್ಯ ಇಲಾಖೆಯ ಅಧಿಕಾರಿಗಳು ಮರಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಡಿಸಿಎಫ್ ಪ್ರಶಾಂತಕುಮಾರ್ ಅವರನ್ನು ಸಂಪರ್ಕಿಸಿದಾಗ, ‘ಪ್ರಕರಣವನ್ನು ಪರಿಶೀಲಿಸಿ ನಂತರ ಪ್ರತಿಕ್ರಿಯೆ ನೀಡುವೆ’ ಎಂದಷ್ಟೇ ತಿಳಿಸಿದರು. ಸದ್ಯ, ಇವರಿಬ್ಬರ ನಡುವಿನ ಹಗ್ಗಜಗ್ಗಾಟ ಸಾರ್ವಜನಿಕರ ಪಾಲಿಗೆ ಮುಳುವಾಗಿ ಪರಿಣಮಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು