ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರದ ಖಜಾನೆ ದಿವಾಳಿ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪ
Last Updated 24 ಅಕ್ಟೋಬರ್ 2018, 7:02 IST
ಅಕ್ಷರ ಗಾತ್ರ

ಕೆ.ಆರ್.ನಗರ: ಕಾಂಗ್ರೆಸ್‌–ಜೆಡಿಎಸ್‌ ನೇತೃತ್ವದ ರಾಜ್ಯ ಸರ್ಕಾರವು ದಿವಾಳಿಯಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಇಲ್ಲಿ ಆರೋಪಿಸಿದರು.

ಮಂಡ್ಯ ಲೋಕಸಭೆ ಉಪ ಚುನಾವಣೆ ಪ್ರಯುಕ್ತ ಇಲ್ಲಿನ ರೇಡಿಯೊ ಮೈದಾನದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ‘ಸಾರ್ವಜನಿಕ ಸಭೆ’ಯಲ್ಲಿ ಅವರು ಮಾತನಾಡಿದರು.

ಇದು ಕಮಿಷನ್‌ ಸರ್ಕಾರವಾಗಿದೆ. ಕಮಿಷನ್‌ ಕೊಡದಿದ್ದರೆ ಗುತ್ತಿಗೆದಾರರ ಬಿಲ್‌ಗಳನ್ನು ಪಾವತಿಸುವುದಿಲ್ಲ. ₹10 ಸಾವಿರ ಕೋಟಿ ಮೌಲ್ಯದ ಕಾಮಗಾರಿಗಳ ಬಿಲ್‌ಗಳು ಬಾಕಿ ಇವೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ರೈತರ ಸಾಲಮನ್ನಾ ಮಾಡುವುದಾಗಿ ಪೊಳ್ಳು ಭರವಸೆ ನೀಡಲಾಗಿದೆ. ಇದರಿಂದಾಗಿ ರೈತರ ಆತ್ಮಹತ್ಯೆ ನಿಲ್ಲುತ್ತಿಲ್ಲ. ಸರ್ಕಾರವು ಜನರ ಜೊತೆ ಚೆಲ್ಲಾಟ ಆಡುತ್ತಿದೆ ಎಂದು ದೂರಿದರು.

ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಈಗ ಸಾಲಮನ್ನಾ ಮಾಡಲು ಪ್ರಧಾನಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಮೋದಿ ಅವರತ್ತ ಬೊಟ್ಟು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಎಚ್.ಡಿ.ದೇವೇಗೌಡ ಮತ್ತು ಸಿದ್ದರಾಮಯ್ಯ ಅಪ್ಪಿಕೊಳ್ಳುತ್ತಿದ್ದಾರೆ. ಯಾರಿಗಾಗಿ ಅವರು ಅಪ್ಪಿಕೊಳ್ಳುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಬಾದಾಮಿಯಲ್ಲಿ ಸಿದ್ದರಾಮಯ್ಯ ಗೆಲ್ಲದೇ ಇದ್ದಿದ್ದರೆ ಏನಾಗುತ್ತಿತ್ತು? ಈ ಬಗ್ಗೆ ಯೋಚಿಸಬೇಕು ಎಂದು ಸೂಚ್ಯವಾಗಿ ಹೇಳಿದರು.

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೃಷ್ಣರಾಜನಗರ ಕ್ಷೇತ್ರದಲ್ಲಿ ಬಿಜೆಪಿಯ ಟಿಕೆಟ್ ಹಂಚಿಕೆಯಲ್ಲಿ ತಪ್ಪಾಗಿತ್ತು. ನನ್ನನ್ನು ಕ್ಷಮಿಸಿ. ಮುಂದೆ ಹೀಗಾಗದಂತೆ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತೇನೆ’ ಎಂದರು.

ಪಕ್ಷದ ಅಭ್ಯರ್ಥಿ ಡಾ.ಸಿದ್ದರಾಮಯ್ಯ, ಚಿತ್ರನಟಿ ತಾರಾ, ಚುನಾವಣಾ ಉಸ್ತುವಾರಿ ಆರ್.ಅಶೋಕ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೋಟೆ ಶಿವಣ್ಣ, ಮಾಜಿ ಅಧ್ಯಕ್ಷ ಹೇಮಂತ್, ಪಕ್ಷದ ಉಸ್ತುವಾರಿ ಎಚ್.ಸಿ.ಬಸವರಾಜಪ್ಪ, ಜಿಲ್ಲಾ ಘಟಕದ ಕಾರ್ಯದರ್ಶಿ ರಾಜ್ ಕುಮಾರ್, ತಾಲ್ಲೂಕು ಘಟಕದ ಅಧ್ಯಕ್ಷ ಹೊಸಹಳ್ಳಿ ವೆಂಕಟೇಶ್, ಮಾಜಿ ಅಧ್ಯಕ್ಷ ಕೆ.ಸಿ.ಶಿವಕುಮಾರ್, ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಮಿರ್ಲೆ ಶ್ರೀನಿವಾಸಗೌಡ, ರಮೇಶ್ ಕುಮಾರ್, ವಕ್ತಾರ ಎಚ್.ಪಿ.ಗೋಪಾಲ್ ಹಾಗೂ ಮುಖಂಡರಾದ ಸಾ.ರಾ.ರಮೇಶ್ ಇದ್ದರು.

‘ಸಕ್ಕರೆ ಕಾರ್ಖಾನೆ ಪುನರಾರಂಭ ಆಗಲಿ’:

ತಾಲ್ಲೂಕಿನ ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಪುನರಾರಂಭವಾಗಬೇಕು. ತಾಲ್ಲೂಕಿನಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ರೈತರ ಸಂಕಷ್ಟವನ್ನು ಕೇಳುವವರಿಲ್ಲ. ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಯಡಿಯೂರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT