ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಕಿರುಕುಳ ಆರೋಪ | ಮುರುಘಾ ಶರಣರನ್ನು ಕೂಡಲೇ ಬಂಧಿಸಿ: ಎಚ್‌.ವಿಶ್ವನಾಥ್

Last Updated 30 ಆಗಸ್ಟ್ 2022, 18:59 IST
ಅಕ್ಷರ ಗಾತ್ರ

ಮೈಸೂರು: ‘ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾದ ಕೂಡಲೇ ಆರೋಪಿ ಅಪರಾಧಿಯಾಗುತ್ತಾನೆ. ಶಿವಮೂರ್ತಿ ಮುರುಘಾ ಶರಣರ ವಿರುದ್ಧವೂ ಅದೇ ಕಾಯ್ದೆಯಡಿ ಪ್ರಕರಣ ದಾಖಲಾಗಿರುವುದರಿಂದ ಅವರನ್ನು ಶೀಘ್ರ ಬಂಧಿಸಬೇಕು. ಅಮಾಯಕ ಬಾಲಕಿಯರಿಗೆ ನ್ಯಾಯ ಸಿಗಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಕರಣ ದಾಖಲಾದ 24 ಗಂಟೆಯೊಳಗೇ ಶರಣರನ್ನು ಬಂಧಿಸಬೇಕಿತ್ತು. ನಾಲ್ಕು ದಿನವಾದರೂ ಬಂಧಿಸದೇ ಕೈ ಚೆಲ್ಲಿ ಕುಳಿತಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.

‘ಬಾಲಕಿಯರಿಗೆ ನ್ಯಾಯ ಸಿಗದಿದ್ದರೆ ಪ್ರಕರಣವು 2023ರ ವಿಧಾನಸಭೆ ಚುನಾವಣೆ ಮೇಲೂ ಪರಿಣಾಮ ಬೀರಲಿದೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಯಾಕೆ ಮಾತನಾಡುತ್ತಿಲ್ಲ? ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಯಾರೂ ಮಾತನಾಡುತ್ತಿಲ್ಲ. ಚಿಂತಕರು, ಸಾಹಿತಿಗಳು ಎಲ್ಲಿ ಹೋದರು? ಪ್ರಗತಿಪರರು ಎಲ್ಲಿದ್ದಾರೆ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಮುಲಾಜಿಗೆ ಒಳಗಾಗಬಾರದು. ನಾಡಿನ ಮಕ್ಕಳ ಪ್ರಶ್ನೆ ಇದು. ಪ್ರಧಾನಿಗೆ ನಾನು ಈ ಬಗ್ಗೆ ವಿಸ್ತೃತವಾಗಿ ಪತ್ರ ಬರೆಯುತ್ತಿದ್ದೇನೆ’ ಎಂದರು.

‘ನೆಲದ ಕಾನೂನು ಎಲ್ಲರಿಗೂ ಒಂದೇ. ಜನಪ್ರತಿನಿಧಿಗಳು ಪ್ರಕರಣದಲ್ಲಿ ಮೂಗು ತೂರಿಸಿ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ. ಸಂಧಾನ– ಅನುಸಂಧಾನ ಪ್ರಶ್ನೆ ಇಲ್ಲಿ ಬರುವುದಿಲ್ಲ. ಜಾತಿ– ಧರ್ಮವೂ ಮಧ್ಯ ಪ್ರವೇಶಿಸಬಾರದು. ಗೃಹ ಸಚಿವರು ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಮಾತನ್ನಾಡಬೇಕಿತ್ತು’ ಎಂದು ಪ್ರತಿಪಾದಿಸಿದರು.

‘ಎಲ್ಲೋ ಹೋಗುತ್ತಿದ್ದ ಸ್ವಾಮೀಜಿಯನ್ನು ಪೊಲೀಸರು ಗೌರವದಿಂದ ವಾಪಸ್ ಕರೆತಂದಿದ್ದು ಸರಿಯೇ? ಸ್ವಾಮೀಜಿ ಪರ ಇರುವುದಾಗಿ ಮಠದಲ್ಲಿ ಘೋಷಣೆ ಕೂಗುವ ಅಭಿಮಾನಿಗಳು, ತಪ್ಪು ಮಾಡಿದವರ ಪರ ಇದ್ದಾರೆಯೇ’ ಎಂದರು.

‘ಎಸ್‌ಐಟಿ ತನಿಖೆಗೆ ವಹಿಸಿ’
‘ಅತ್ಯಾಚಾರದ ಆರೋಪ ಹೊತ್ತಿರುವಚಿತ್ರದುರ್ಗದ ಮುರುಘಾ ಶರಣರನ್ನು ಕೂಡಲೇ ಬಂಧಿಸಿ, ಪ್ರಕರಣವನ್ನು ನಿವೃತ್ತ ‌ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ವಹಿಸಬೇಕು’ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರೆಗೋಡು ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ದಲಿತ ಸಂಘರ್ಷ ಸಮಿತಿ ಒಕ್ಕೂಟ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರೋಪಿ ಸ್ವಾಮೀಜಿಯನ್ನು ಬಂಧಿಸದೆ ಪ್ರಕರಣದ ದಿಕ್ಕು ತಪ್ಪಿಸಲಾಗುತ್ತಿದೆ. ಪ್ರಕರಣವನ್ನು ಬಿಜೆಪಿಯೇತರ ಆಡಳಿತ ನಡೆಸುವ ಕೇರಳ, ತಮಿಳುನಾಡಿಗೆ ವರ್ಗಾಯಿಸಬೇಕು’ ಎಂದು ಒತ್ತಾಯಿಸಿದರು.

ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ‘ಮಕ್ಕಳ ನೋವು ಸರ್ಕಾರಕ್ಕೆ ಕೇಳಿಸುತ್ತಿಲ್ಲವೆ? ಮೀಸಲು ಕ್ಷೇತ್ರದಿಂದ ಗೆದ್ದ ಶಾಸಕರೂ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ’ ಎಂದು ದೂರಿದರು.

*
ಮುರುಘಾ ಶ್ರೀಗಳು ಮೊದಲು ಪೀಠ ತ್ಯಜಿಸಬೇಕು. ಆರೋಪ ಸುಳ್ಳಾದ ಮೇಲೆ ಮತ್ತೆ ಪೀಠ ಅಲಂಕರಿಸಲಿ.
-ಎಚ್.ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ

*
ಪ್ರಕರಣದ ಬಗ್ಗೆ ಆರು ತಿಂಗಳ‌ ಮೊದಲೇ ತಿಳಿದಿತ್ತು‌ ಎಂದು‌ ಹೇಳಿಕೆ ನೀಡಿರುವ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ -ಎಚ್.ಡಿ.ಕುಮಾರಸ್ವಾಮಿ ಅವರನ್ನೂ ಬಂಧಿಸಬೇಕು.
-ಮಾವಳ್ಳಿ ಶಂಕರ್, ದಲಿತ ಸಂಘರ್ಷ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT