ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಬಳಿ ಮತದಾರರ ಗುರುತಿನ ಚೀಟಿಗಳು ಪತ್ತೆ

Last Updated 13 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣೆ ಮುಗಿದ ಮರುದಿನವೇ ಮಾಗಡಿ ರಸ್ತೆ ಬಳಿ 50ಕ್ಕೂ ಹೆಚ್ಚು ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿವೆ.‌

ಸೇತುವೆ ಪಕ್ಕದ ಖಾಲಿ ಜಾಗದಲ್ಲಿ ಭಾನುವಾರ ಬೆಳಿಗ್ಗೆ ಚೀಟಿಗಳು ಬಿದ್ದಿದ್ದವು. ಸ್ಥಳೀಯರು, ಅವುಗಳನ್ನು ರಸ್ತೆಗೆ ತಂದು ಎಸೆದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜಾಜಿನಗರ ಹಾಗೂ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಗಳ ಮತದಾರರಿಗೆ ಸೇರಿದ್ದ ಚೀಟಿಗಳಿವು’ ಎಂದು ಸ್ಥಳೀಯರು ತಿಳಿಸಿದರು.

‘ರಾಜರಾಜೇಶ್ವರಿನಗರ ಕ್ಷೇತ್ರದ ಜಾಲಹಳ್ಳಿಯ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಇತ್ತೀಚೆಗಷ್ಟೇ ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿದ್ದವು. ಇಲ್ಲೂ ಚೀಟಿಗಳು ಸಿಕ್ಕಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದೇ ರೀತಿ ಹಲವೆಡೆ ಚೀಟಿಗಳನ್ನು ಸಂಗ್ರಹಿಸಿಟ್ಟಿರಬಹುದು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತಪ್ಪಿತಸ್ಥರನ್ನು ಪ‍ತ್ತೆ ಹಚ್ಚಬೇಕು’ ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಬಂದ ವಿಜಯನಗರ ಪೊಲೀಸರು, ಚೀಟಿಗಳನ್ನು ವಶಕ್ಕೆ ಪಡೆದರು. ‘ಸ್ಥಳೀಯರ ಹೇಳಿಕೆ ಪಡೆದು ಪರಿಶೀಲಿಸುತ್ತಿದ್ದೇವೆ. ಚೀಟಿಗಳನ್ನು ಯಾರು ಎಸೆದಿದ್ದಾರೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದು ಪೊಲೀಸರು ಹೇಳಿದರು.

ಬಿಜೆಪಿ ಕಾರ್ಯಕರ್ತನಿಗೆ ಬೆದರಿಕೆ: ಜಾಲಹಳ್ಳಿಯಲ್ಲಿ ಗುರುತಿನ ಚೀಟಿಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದನ್ನು ಪತ್ತೆ ಹಚ್ಚಿ ಚುನಾವಣೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದ ಬಿಜೆಪಿ ಕಾರ್ಯಕರ್ತ ರಾಕೇಶ್ ಅವರಿಗೆ ಕೆಲವರು ಜೀವ ಬೆದರಿಕೆವೊಡ್ಡಿದ್ದಾರೆ. ಈ ಬಗ್ಗೆ ಅವರು, ಜಾಲಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ‘ಭಾರಿ ಚುನಾವಣಾ ಅಕ್ರಮದ ಬಗ್ಗೆ ಮಾಹಿತಿ ಕೊಟ್ಟಿದ್ದೇನೆ. ಹೀಗಾಗಿ ಹಲವರು ಬೆದರಿಕೆವೊಡ್ಡುತ್ತಿದ್ದಾರೆ’ ಎಂದು ರಾಕೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಸಕ ಮುನಿರತ್ನ ಅವರೇ ಈ ಪ್ರಕರಣದ ಪ್ರಮುಖ ಆರೋಪಿ. ಅವರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನ್ಯಾಯಾಲಯ ಆದೇಶ ನೀಡಿದರೂ ನನ್ನ ದೂರಿನನ್ವಯ ಎಫ್‌ಐಆರ್‌ ಸಹ ದಾಖಲಿಸಿಕೊಳ್ಳುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT