ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಿನ ಕೆರೆಯೀಗ ಸುಂದರ ತಾಣ

ಇನ್ಫೊಸಿಸ್‌ ಪ್ರತಿಷ್ಠಾನದಿಂದ ₹ 98 ಕೋಟಿ ವೆಚ್ಚದಲ್ಲಿ ಹೆಬ್ಬಾಳ ಕೆರೆ ಪುನರುಜ್ಜೀವನ
Last Updated 14 ಸೆಪ್ಟೆಂಬರ್ 2021, 6:19 IST
ಅಕ್ಷರ ಗಾತ್ರ

ಮೈಸೂರು: ಹೆಬ್ಬಾಳ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೊಂಡಂತೆ ಮಲಿನಗೊಂಡಿದ್ದ ಹೆಬ್ಬಾಳ ಕೆರೆಯೀಗ ಸುಂದರ ತಾಣವಾಗಿ ಕಂಗೊಳಿಸುತ್ತಿದೆ.

ದಿನವಿಡಿ ಹಕ್ಕಿಗಳ ಕಲರವ ಕೇಳಿ ಬರುತ್ತಿದೆ. ವಿದೇಶಿ ಹಕ್ಕಿಗಳು ಇಲ್ಲಿಗೆ ವಲಸೆ ಬರುವುದುಂಟು. ಕೆರೆಯ ಸುತ್ತಲೂ ಹಸಿರಿನ ಗಿಡ–ಮರಗಳಿವೆ. ಸ್ಚಚ್ಛಂದ ಕೆರೆಯೊಳಗೆ ಜಲಚರಗಳ ವಾಸ ಹೆಚ್ಚಿದೆ.

ಕೆರೆ ಏರಿಯನ್ನು ವಾಕಿಂಗ್‌ ಪಾಥ್‌ ಆಗಿ ಮಾರ್ಪಡಿಸಿರುವುದರಿಂದ ವಾಯುವಿಹಾರಿಗಳು ಹಾಗೂ ಜಾಗಿಂಗ್‌ ಪ್ರಿಯರು ಖುಷಿಯಾಗಿದ್ದಾರೆ. ಮ್ಯಾರಥಾನ್‌ ಓಟಗಾರರು ಇಲ್ಲಿ ಓಡುವುದುಂಟು.

ಇನ್ಫೊಸಿಸ್‌ ಪ್ರತಿಷ್ಠಾನ ₹ 98 ಕೋಟಿ ವೆಚ್ಚದಲ್ಲಿ ಕೆರೆಯ ಪುನರುಜ್ಜೀವನ ಕೈಗೆತ್ತಿಕೊಳ್ಳುವ ಮುನ್ನ; ಅಲ್ಲಿ ಸಂಚರಿಸುವುದೇ ದುಸ್ತರವಾಗಿತ್ತು. ಮೈಲು ದೂರಕ್ಕೆ ದುರ್ವಾಸನೆ ಬಡಿಯುತ್ತಿತ್ತು. ವಾಕಿಂಗ್‌ ಹೋಗಲು ಭಯಪಡಬೇಕಿತ್ತು. ಸರಗಳ್ಳರ ಹಾವಳಿಯೂ ಇತ್ತು. ಜಲಚರಗಳು ಕ್ಷೀಣಿಸಿದ್ದವು.

ಕೆರೆ ಜೀರ್ಣೋದ್ಧಾರಗೊಂಡ ಬಳಿಕ ಎಲ್ಲವೂ ಬದಲಾಗಿವೆ. ಮಹಿಳೆಯರು ಮುಕ್ತವಾಗಿ ಮುಂಜಾನೆ–ಮುಸ್ಸಂಜೆ ಸ್ವಚ್ಛಂದವಾಗಿ ವಾಕಿಂಗ್‌ ನಡೆಸುತ್ತಾರೆ. ಯುವತಿಯರು ಏರಿ ಮೇಲೆ ಓಡುತ್ತಾರೆ. ಗೃಹಿಣಿಯರು ಮಕ್ಕಳೊಟ್ಟಿಗೆ ಕೆರೆ ಆವರಣಕ್ಕೆ ಬಂದು ಆತಂಕವಿಲ್ಲದೆ ವಾಯುವಿಹಾರ ನಡೆಸುತ್ತಾರೆ. ಹೆಣ್ಮಕ್ಕಳಿಗೆ ಕೆರೆ ಸುರಕ್ಷತೆಯ ವಾತಾವರಣ ಒದಗಿಸಿದೆ. ಚಿಕ್ಕ ಮಕ್ಕಳಿಗೂ ಅಪಾಯವಾಗದ ಪರಿಸರ ನಿರ್ಮಾಣಗೊಂಡಿದೆ.

‘ಕೆರೆಯ ಒಳಾವರಣ ಹಾಗೂ ಹೊರಾವರಣದ ಸುತ್ತ ಸುರಕ್ಷಿತ ಬೇಲಿಯಿದೆ. ಮುಸ್ಸಂಜೆ–ನಸುಕಿನಲ್ಲಿ ವಿದ್ಯುತ್‌ ದೀಪಗಳ ಬೆಳಕಿದೆ. ದಣಿವಾದಾಗ ಸುಧಾರಿಸಿಕೊಳ್ಳಲು ಏರಿ ಬದಿಯಲ್ಲೇ ಸೋಪಾನ ಕಟ್ಟೆಗಳಿವೆ. ಕಸ ಎಲ್ಲೆಂದರಲ್ಲಿ ಬಿಸಾಕುವಂತಿಲ್ಲ. ಅಲ್ಲಲ್ಲೇ ಡಸ್ಟ್‌ ಬಿನ್‌ಗಳಿಡಲಾಗಿದೆ. ಭದ್ರತಾ ಸಿಬ್ಬಂದಿಯ ಕಾವಲಿರುವುದು ಮಹಿಳೆಯರ ವಾಯುವಿಹಾರಕ್ಕೆ ಪೂರಕವಾಗಿದೆ’ ಎನ್ನುತ್ತಾರೆ ಇಲ್ಲಿಗೆ ನಿತ್ಯವೂ ವಾಕಿಂಗ್‌ ಬರುವ
ಇಂದಿರಮ್ಮ.

‘ಹೆಬ್ಬಾಳ ಕೆರೆಯ ಹತ್ತಿರಕ್ಕೆ ಈಚೆಗಿನ ವರ್ಷಗಳಲ್ಲಿ ಬಂದಿರಲಿಲ್ಲ. ಸ್ನೇಹಿತೆಯರೊಟ್ಟಿಗೆ ಬಂದು ಕೆರೆ ಆವರಣದಲ್ಲಿ ಓಡಾಡಿದಾಗ ಪ್ರವಾಸಿ ತಾಣವೊಂದಕ್ಕೆ ಬಂದಿದ್ದೇವೆ ಎನಿಸಿತು. ಹಕ್ಕಿಗಳ ಚಿಲಿಪಿಲಿ ಕಲರವ, ಹಸಿರಿನ ವಾತಾವರಣ, ಅಚ್ಚುಕಟ್ಟಿನ ನಿರ್ವಹಣೆ ಮನಸ್ಸಿಗೆ ಖುಷಿ ಕೊಟ್ಟಿತು’ ಎಂದು ಚಂದ್ರಕಲಾ ತಿಳಿಸಿದರು.

ಇವುಗಳಿಗೆ ನಿಷೇಧ: ಕೆರೆಯಲ್ಲಿ ಈಜುವುದು, ಮೀನು ಹಿಡಿಯುವುದು, ಧೂಮಪಾನ ಮತ್ತು ಮದ್ಯಪಾನ, ಸಾಕು ಪ್ರಾಣಿಗಳ ಪ್ರವೇಶವನ್ನು ನಿಷೇಧಿಸಲಾಗಿದೆ.

ಅತ್ಯಾಧುನಿಕ ತಂತ್ರಜ್ಞಾನ ಬಳಕೆ

ಕೆರೆಗೆ ಸೇರುತ್ತಿದ್ದ ತ್ಯಾಜ್ಯ ನೀರನ್ನು ಸಂಸ್ಕರಿಸಲು ಇನ್ಫೊಸಿಸ್‌ ಪ್ರತಿಷ್ಠಾನ ಅತ್ಯಾಧುನಿಕ ಎಂಬಿಆರ್‌ ಟೆಕ್ನಾಲಜಿ ಬಳಸಿ, ಅದಕ್ಕಾಗಿಯೇ 8 ಎಂಎಲ್‌ಡಿ ಸಾಮರ್ಥ್ಯದ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕ ನಿರ್ಮಿಸಿದೆ. ಸಂಸ್ಕರಿಸಿದ ನೀರಿನ ಗುಣಮಟ್ಟ ಪರಿಸರ ಮಾಲಿನ್ಯ ಮಂಡಳಿ ಸೂಚಿಸಿರುವ ಪರಿಮಿತಿಯಲ್ಲೇ ಇದೆ’ ಎಂದು ಇನ್ಫೋಸಿಸ್‌ ಉದ್ಯೋಗಿಯೊಬ್ಬರು ತಿಳಿಸಿದರು.

ಶುದ್ಧೀಕರಿಸಿದ ನೀರನ್ನು ಕೃಷಿಗೆ ಬಳಸಲಾಗುತ್ತಿದೆ. ಕೆರೆ ಆವರಣದ ಸಸ್ಯ ಮತ್ತು ಪ್ರಾಣಿ ಸಂಕುಲ ಸಂರಕ್ಷಣೆ ಮೂಲ ಯೋಜನೆಯಲ್ಲೇ ಅಡಕಗೊಂಡಿದೆ.

ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಕೆರೆ ಅಭಿವೃದ್ಧಿಗಾಗಿ 2016ರ ಜೂನ್‌ 6ರಂದು ಸರ್ಕಾರದೊಟ್ಟಿಗೆ ಒಪ್ಪಂದ ಮಾಡಿಕೊಂಡಿದ್ದರು. ಅದಕ್ಕೆ ಕರ್ನಾಟಕ ಕೆರೆ ಅಭಿವೃದ್ಧಿ ಮತ್ತು ಸಂರಕ್ಷಣಾ ಪ್ರಾಧಿಕಾರ 2017ರ ಮಾರ್ಚ್‌ 17ರಂದು ಅನುಮೋದನೆ ಕೊಟ್ಟಿತ್ತು.

ಅಭಿವೃದ್ಧಿ ಕಾಮಗಾರಿಗಳಿವು...

l ಹೂಳೆತ್ತುವಿಕೆ ಮತ್ತು ಕೆರೆ ಏರಿ ನಿರ್ಮಾಣ, ಏರಿಯಲ್ಲಿ ಸುರಕ್ಷತಾ ಬೇಲಿ ನಿರ್ಮಾಣ

l ನಡುಗಡ್ಡೆ–ದ್ವೀಪಗಳ ನಿರ್ಮಾಣ, ಜೀರ್ಣೋದ್ಧಾರ

l ಅಡ್ಡ ಮೇಲ್ಸೇತುವೆ, ಸೋಪಾನ ಕಟ್ಟೆಯ ನಿರ್ಮಾಣ

l ಹಸಿರು ವಲಯ ನಿರ್ಮಾಣ

l ರಾಜಕಾಲುವೆಗಳಿಗೆ ಅಡ್ಡಕಟ್ಟುಗಳ ನಿರ್ಮಾಣ, ಕಾಂಪೌಂಡ್‌ ಬೇಲಿಯ ನಿರ್ಮಾಣ

l ಸಂಪರ್ಕ ರಸ್ತೆ, ಪಾದಚಾರಿ ಮಾರ್ಗಗಳ ನಿರ್ಮಾಣ, ಬೀದಿ ದೀಪಗಳ ಅಳವಡಿಕೆ

l ಸಂಸ್ಕರಣಾ ಘಟಕಕ್ಕೆ ತ್ಯಾಜ್ಯ ನೀರಿನ ಸೇರ್ಪಡೆ. ವಾಯುಪೂರಕ ಅಳವಡಿಸುವಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT