ಸೋಮವಾರ, ಮೇ 23, 2022
21 °C
ಸಾಮಾನ್ಯರ ಎದಯಾಳದ ಮಾತಿಗೆ ವೇದಿಕೆಯಾದ ಕೃತಿ

ಭೈರಪ್ಪಗೆ ಸಹೃದಯರ ಅಭಿಮಾನದ ಸಮ್ಮಾನ

ವಿಶಾಲಾಕ್ಷಿ ಅಕ್ಕಿ Updated:

ಅಕ್ಷರ ಗಾತ್ರ : | |

ಮೈಸೂರು: ಸಾಹಿತಿ ಎಸ್‌.ಎಲ್‌. ಭೈರಪ್ಪ ಅವರ ಬದುಕು ಹಾಗೂ ಬರಹದಿಂದ ಪ್ರಭಾವಿತರಾದ ಓದುಗರೇ ಬರೆದ ಕೃತಿಯೊಂದು ಇದೀಗ ಸಾಹಿತ್ಯ ಲೋಕದಲ್ಲಿ ವಿನೂತನ ಮಾದರಿಯ ಸಾಹಿತ್ಯಾವಲೋಕನಕ್ಕೆ ಮುನ್ನುಡಿ ಬರೆದಿದೆ.

ಭೈರಪ್ಪನವರ ಕಾದಂಬರಿಗಳ ವಿಷಯ–ವಸ್ತು, ಪಾತ್ರಗಳು ತಮ್ಮ ಭಾವಕೋಶವನ್ನು ವಿಸ್ತರಿಸಿದ ಬಗೆಯನ್ನು ಅಕಾಡೆಮಿಕ್‌ಗೆ ಹೊರತಾದ ಸಾಮಾನ್ಯ ಓದುಗರೂ ಅಕ್ಷರ ರೂಪಕ್ಕಿಳಿಸಿದ ಈ ವಿಶಿಷ್ಟ ಕೃತಿ ’ನಮ್ಮ ಭೈರಪ್ಪನವರು’.

ಕಳೆದ ವರ್ಷ ಜನವರಿಯಲ್ಲಿ ಮೈಸೂರಿನಲ್ಲಿ ನಡೆದ ’ಎಸ್. ಎಲ್. ಭೈರಪ್ಪ ಸಾಹಿತ್ಯೋತ್ಸವ’ದಲ್ಲಿ, ಹಲವು ವಿದ್ವಾಂಸರು ಭೈರಪ್ಪನವರ ಕಾದಂಬರಿಗಳನ್ನು ಕುರಿತು ವಿದ್ವತ್ ಪೂರ್ಣ ವಿಚಾರಗಳನ್ನು ಮಂಡಿಸಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಮಾಜದ ವಿಭಿನ್ನ ವರ್ಗದ, ವಿವಿಧ ವೃತ್ತಿಮೂಲದ ಓದುಗರು ತಮಗೂ ತಮ್ಮ ಓದಿನ ಅನುಭವಗಳನ್ನು ವ್ಯಕ್ತಪಡಿಸಲು ವೇದಿಕೆ ದೊರೆಯಬೇಕಿತ್ತು ಎಂಬ ಆಶಯ ವ್ಯಕ್ತಪಡಿಸಿದ್ದರು. ಭೈರಪ್ಪನವರ ಅಭಿಮಾನಗಳ ಈ ಹಂಬಲವೇ ಈಗ ಕೃತಿಯ ರೂಪ ಪಡೆದಿದೆ.

ಮೈಸೂರಿನ ಸಂಸ್ಕೃತಿ ಬುಕ್ ಪ್ಯಾರಡೈಸ್ ಪ್ರಕಾಶನ ಹೊರ ತಂದಿರುವ ಈ ಕೃತಿಯನ್ನು ಡಾ. ಎಂ.ಎಸ್‌. ವಿಜಯಾ ಹರನ್ ಸಂಪಾದಿಸಿದ್ದು, ಭೈರಪ್ಪನವರ ತೊಂಬತ್ತನೇ ವರ್ಷದ ಜನ್ಮದಿನದ ಸಂದರ್ಭದಲ್ಲಿ ಅಭಿಮಾನಿ ಓದುಗರ ಪ್ರೀತಿಯ ಕಾಣಿಕೆಯಾಗಿ ಸಲ್ಲಿಕೆಯಾಗುತ್ತಿದೆ.

ಅವರ ಯಾವ ಕಾದಂಬರಿಗಳು, ಅವುಗಳಲ್ಲಿನ ಪಾತ್ರಗಳು ತಮ್ಮ ಮೇಲೆ ಬೀರಿದ ಪ್ರಭಾವವೇನು ಎಂಬುದರ ಕುರಿತು 109 ಸಹೃದಯರು ಇಲ್ಲಿ ತಮ್ಮ ಮನದಾಳದ ಮಾತುಗಳನ್ನು ಅಕ್ಷರ ರೂಪಕ್ಕಿಳಿಸಿದ್ದಾರೆ.

’ನಾವೆಲ್ಲ ದೊಡ್ಡ ವಿದ್ವಾಂಸರಲ್ಲ. ಅವರಂತೆ ನಮಗೆ ಮಾತನಾಡಲು ಬರುವುದಿಲ್ಲ. ಬರೆಯಲೂ ಬರುವುದಿಲ್ಲ. ಆದರೆ ಭೈರಪ್ಪನವರ ಬದುಕಿನಿಂದ, ಕಾದಂಬರಿಗಳಿಂದ ನಾವು ಸಾಕಷ್ಟು ಪಾಠ ಕಲಿತಿದ್ದೇವೆ. ನಮ್ಮ ಬದುಕಿನಲ್ಲೂ ಅದರಿಂದ ಸಾಕಷ್ಟು ಬದಲಾವಣೆಗಳಾಗಿವೆ. ನಮ್ಮಂತಹ ಸಾಮಾನ್ಯರಿಗೂ ಭೈರಪ್ಪನವರಿಂದ ಪಡೆದುಕೊಂಡಿದ್ದರ ಬಗ್ಗೆ ಮಾತಾಡಲು ಅವಕಾಶ ದೊರೆತಿದ್ದರೆ ಪಂಡಿತರು, ಪಾಮರರ ಅನಿಸಿಕೆಗಳೆರಡೂ ಮೇಳೈಸಿದಂತಿರುತ್ತಿತ್ತು’ ಎಂಬ ತಮ್ಮ ಇಚ್ಛೆ ಈಡೇರಿದ ಸಂಭ್ರಮದಲ್ಲಿದ್ದಾರೆ ಶ್ರೀಸಾಮಾನ್ಯ ಓದುಗರು.

ಕೃಷಿಕರು, ವೈದ್ಯರು, ಸಂಗೀತಗಾರರು, ಸರಕಾರಿ, ಖಾಸಗಿ ನೌಕರರು, ಸ್ವ–ಉದ್ಯೋಗಿಗಳು, ವಿದ್ಯಾರ್ಥಿಗಳು, ಗೃಹಿಣಿಯರು ಅಲ್ಲದೇ ಕಡ್ಲೆಪುರಿ ಮಾರುವ ಅಭಿಮಾನಿಯ ಓದಿನ ಅನುಭವ ಪ್ರಪಂಚವೂ ಇಲ್ಲಿ ತೆರೆದುಕೊಂಡಿದೆ.

’ದೂರ ಸರಿದರು’ ಕಾದಂಬರಿಯಿಂದ ಪ್ರೇರಣೆಗೊಂಡು ಭೈರಪ್ಪನವರ ಕೃತಿಗಳ ಅಭಿಮಾನಿಯಾದ ತಮಿಳುನಾಡು ಮೂಲದ ಪ್ರಭಾಕರ ವೃತ್ತಿಯಲ್ಲಿ ಕಡ್ಲೆಪುರಿ ವ್ಯಾಪಾರಿ. ತಮ್ಮ ಅಂಗಡಿಗೆ ಬರುವ ಗ್ರಾಹಕರಿಗೆ ಭೈರಪ್ಪನವರ ಕೃತಿಗಳನ್ನು ಉಚಿತವಾಗಿ ನೀಡಿ, ಓದಿದ ನಂತರ ಮರಳಿಸಲು ಕೇಳಿಕೊಳ್ಳುವುದಾಗಿ ಹೇಳುತ್ತಾರೆ. ಭೈರಪ್ಪನವರ ಎಲ್ಲ ಕಾದಂಬರಿಗಳು, ಅವುಗಳಲ್ಲಿನ ಪಾತ್ರಗಳ ಹೆಸರುಗಳೂ ತಮ್ಮ ನಾಲಗೆ ಮೇಲಿರುವ ಹೆಮ್ಮೆ, ಖುಷಿ ಅವರದು.

’ಭಿತ್ತಿ’ಯಿಂದ ಸ್ಫೂರ್ತಿ ಪಡೆದಿರುವುದಾಗಿ ಹೇಳುವ 69 ವರ್ಷದ ಕೃಷಿಕ ಬಿ.ಬಸವರಾಜು, ’ಅವರು ಓದು ನಂಬಿ ಸಾಹಿತ್ಯ ಕೃಷಿ ಮಾಡಿದರು. ನಾನು ಭೂತಾಯಿಯನ್ನು ನಂಬಿ ಚನ್ನದಂತಹ ಬೆಳೆ ತೆಗೀತಿದಿನಿ’ ಎಂದು ನೆನೆಯುತ್ತಾರೆ. ಹೀಗೆ ಭೈರಪ್ಪನವರ ಕಾದಂಬರಿಗಳು ತಮ್ಮನ್ನು ಆವರಿಸಿಕೊಂಡ ಬಗೆಯನ್ನು ಹಿಂದೂಸ್ತಾನಿ ಸಂಗೀತಗಾರ ಪಂ. ಗಣಪತಿ ಭಟ್ ಹಾಸಣಗಿ, ಅರಿವಳಿಕೆ ತಜ್ಞ ಡಾ. ಗೋವಿಂದ ಹೆಗಡೆ, ಮುಂಬೈನ ಪಶ್ಚಿಮ ರೈಲ್ವೆಯಲ್ಲಿ ಲೋಕೊಪೈಲಟ್‌ ಆಗಿರುವ ಗಣೇಶ ಕುಲಕರ್ಣಿ, ಗೃಹಭಂಗದಿಂದ ಹೋರಾಟದ ಜೀವನವನ್ನು ನಿಭಾಯಿಸುವುದನ್ನು ರೂಢಿಸಿಕೊಂಡಿರುವ ಜವಳಿ ವ್ಯಾಪಾರಿ ಸಂಜಯ ಡೋಂಗ್ರೆ ಸೇರಿದಂತೆ ನೂರಾರು ಸಹೃದಯರ ಮೆಚ್ಚುಗೆ, ಅಭಿಮಾನ, ಕೃತಜ್ಞತೆ ಇಲ್ಲಿ ದಾಖಲಾಗಿದೆ.

ಭೈರಪ್ಪನವರ ವ್ಯಕ್ತಿತ್ವದಲ್ಲಿನ ವಿಶಿಷ್ಟ ಅಂಶಗಳನ್ನು ಮನಗಾಣಿಸುವ ಈ ಹೊತ್ತಗೆ ಇನ್ನೊಂದು ದಾಖಲೆಯನ್ನೇ ಸೃಷ್ಟಿಸಲಿದೆ ಎಂಬುದಾಗಿ ವಿಮರ್ಶಕ ಡಾ. ಪ್ರಧಾನ್ ಗುರುದತ್ತ ಅಭಿಪ್ರಾಯಪಟ್ಟಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು