ಮೈಸೂರು: ಸಾಮೂಹಿಕ ಅತ್ಯಾಚಾರದ ನಂತರ ಪೊಲೀಸರು ನಿದ್ದೆಯಿಂದ ಎದ್ದವರಂತೆ ಗಸ್ತು ಕಾರ್ಯ
ವನ್ನು ಬಿರುಸುಗೊಳಿಸಿದ್ದು, ಹೊರವಲಯದ ಬಹುತೇಕ ಕಡೆ ಪೊಲೀಸರು ಕಾಣಿಸತೊಡಗಿದ್ದಾರೆ. ಎರಡೇ ದಿನಗಳಲ್ಲಿ 20ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ ಇದು ಎಷ್ಟು ದಿನ ಎಂಬ ಪ್ರಶ್ನೆಯೂ ಸಾರ್ವಜನಿಕರಲ್ಲಿ ಮೂಡಿದೆ.
ಎರಡು ವರ್ಷದ ಹಿಂದೆ ಲಿಂಗಾಂಬುಧಿ ಕೆರೆ ಸಮೀಪ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದು, ಆಕೆಯ ಸ್ನೇಹಿತನ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ನಂತರ ಒಂದಷ್ಟು ದಿನ ಗಸ್ತು ಕಾರ್ಯ ಹೆಚ್ಚಿತ್ತು. ಕುವೆಂಪುನಗರ ಠಾಣಾ ವ್ಯಾಪ್ತಿಯ ನಿರ್ಜನ ಪ್ರದೇಶಗಳಲ್ಲಿ ಕುಳಿತುಕೊಳ್ಳುವ ಜೋಡಿಗಳನ್ನು ಎಬ್ಬಿಸುವ ಕೆಲಸ, ಅನುಮಾನಾಸ್ಪದವಾಗಿ ಅಲೆಯುವ ಹುಡುಗರನ್ನು ಬೆದರಿಸುವ ಕೆಲಸ ನಡೆದಿತ್ತು. ನಂತರ ದಿನಗಳಲ್ಲಿ ನಿಂತಿತು.
ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಅಪರಾಧ ಚಟುವಟಿಕೆಗಳು 2016ರಲ್ಲಿ ಹೆಚ್ಚಾದಾಗ ಆರಂಭಿಸಿದ್ದ ‘ಆಪರೇಷನ್ ಚಾಮುಂಡಿ’ಯೂ ನಂತರ ಸ್ಥಗಿತ
ಗೊಂಡಿತು. 2018ರಲ್ಲಿ ಯುವಕ, ಯುವತಿಯ ಮೇಲೆ ಹಲ್ಲೆ ನಡೆಸಿ, ಹಣ ದರೋಡೆ ಪ್ರಕರಣಗಳು ಹೆಚ್ಚಿದ ನಂತರ ಮತ್ತೆ ಆರಂಭವಾಗಿತ್ತು. ಸಂಜೆಯ ನಂತರ ನಿರಂತರ ಗಸ್ತು ನಡೆಯಿತು. ಮತ್ತೆ ಸ್ಥಗಿತಗೊಂಡಿತು.
ಕೆ.ಟಿ.ಬಾಲಕೃಷ್ಣ (ಹಾಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ರಾಜ್ಯ ಮಹಾನಿರ್ದೇಶಕ) ಅವರು ಇಲ್ಲಿ ಕಮಿಷನರ್ ಆಗಿದ್ದ ವೇಳೆ ಚಾಮುಂಡಿಬೆಟ್ಟದ ನಾಲ್ಕೂ ಪ್ರವೇಶದ್ವಾರಗಳನ್ನು ಸಂಜೆ 6ಕ್ಕೆ ಬಂದ್ ಮಾಡಿ, ಗುರುತಿನ ಚೀಟಿ ತೋರಿಸಿದ ಬೆಟ್ಟದ ನಿವಾಸಿಗಳಿಗಷ್ಟೇ ಪ್ರವೇಶ ಅವಕಾಶ ನೀಡುವ ಆದೇಶ ನೀಡಿದರು. ಆದರೆ, ಬಾಲಕೃಷ್ಣ ಅವರು ವರ್ಗಾವಣೆಯಾದ ನಂತರ ಈ ಆದೇಶವೂ ಪೆಟ್ಟಿಗೆ ಸೇರಿತು.
ಅಪಾಯಕಾರಿ ಸ್ಥಳಗಳು
ಚಾಮುಂಡಿಬೆಟ್ಟದ ಲಲಿತಾದ್ರಿಪುರ ಗುಡ್ಡ, ಬೆಟ್ಟದ ಮೆಟ್ಟಿಲುಗಳು, ಉತ್ತನಹಳ್ಳಿ ದೇವಸ್ಥಾನದ ರಸ್ತೆ, ನಂದಿ ವಿಗ್ರಹ, ಲಿಂಗಾಂಬುಧಿ ಕೆರೆಯ ಆಸುಪಾಸು, ಕುಕ್ಕರಹಳ್ಳಿ ಕೆರೆ, ರಿಂಗ್‌ರಸ್ತೆ, ಆರ್.ಟಿ.ನಗರ, ಹೆಬ್ಬಾಳ ಕೈಗಾರಿಕಾ ಪ್ರದೇಶದ ಖಾಲಿ ಜಾಗಗಳು, ಎಪಿಎಂಸಿ ಆಸುಪಾಸು, ನಗರದ ಹೊರವಲಯದಲ್ಲಿನ ಖಾಲಿ ನಿವೇಶನಗಳಿರುವ ಬಡಾವಣೆಗಳು ಅತಿ ಅಪಾಯದ ಸ್ಥಳಗಳೆನಿಸಿವೆ. ಇಲ್ಲೆಲ್ಲ ಪೊಲೀಸರು ಗಸ್ತು ಹೆಚ್ಚಿಸಬೇಕಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.