ಬುಧವಾರ, ಸೆಪ್ಟೆಂಬರ್ 22, 2021
22 °C
ಬೆಟ್ಟದ ಜನರು, ಗಣ್ಯರಿಗಷ್ಟೇ ಪ್ರವೇಶ l ದರ್ಬಾರ್ ಅಲಂಕಾರದಲ್ಲಿ ಕಂಗೊಳಿಸಿದ ದೇವಿ

ಚಾಮುಂಡಿಬೆಟ್ಟದಲ್ಲಿ ವರ್ಧಂತಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಾಡ ದೇವತೆ ಚಾಮುಂಡೇಶ್ವರಿಯ ವರ್ಧಂತ್ಯುತ್ಸವ ಶುಕ್ರವಾರ ಶ್ರದ್ಧಾ ಭಕ್ತಿಯಿಂದ ಚಾಮುಂಡಿಬೆಟ್ಟದಲ್ಲಿ ನೆರವೇರಿತು.

ಆಷಾಢ ಮಾಸದ ಕೃಷ್ಣ ಪಕ್ಷದ ರೇವತಿ ನಕ್ಷತ್ರದಲ್ಲಿ ಪ್ರತಿ ವರ್ಷ ನಡೆಯುವ ಈ ಉತ್ಸವಕ್ಕೆ ಕೋವಿಡ್ ಕಾರಣದಿಂದ ಭಕ್ತರಿಗೆ ನಿರ್ಬಂಧ ವಿಧಿಸಲಾಗಿತ್ತು. ಆದರೂ, ಹೆಚ್ಚಿನ ಸಂಖ್ಯೆಯಲ್ಲಿ ಗಣ್ಯ ವ್ಯಕ್ತಿಗಳು ಇಲ್ಲಿಗೆ ಬಂದು ದರ್ಶನ ಪಡೆದರು.

ಮೈಸೂರು ಸಂಸ್ಥಾನದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ತ್ರಿಷಿಕಾ ಕುಮಾರಿ ದಂಪತಿ ಭೇಟಿ ನೀಡಿ ಉತ್ಸವ ಮೂರ್ತಿಯ ಮೆರವಣಿಗೆಗೆ ಚಾಲನೆ ನೀಡಿದರು.

ಮಂಗಳವಾದ್ಯಗಳ ಸಮೇತ ಉತ್ಸವ ಮೂರ್ತಿಯ ಮೆರವಣಿಗೆಯು ಪಲ್ಲಕ್ಕಿಯಲ್ಲಿ ದೇಗುಲದ ಒಳಾಂಗಣ
ದಲ್ಲಿ ನೆರವೇರಿತು. ಹಣ್ಣು, ಕಾಯಿಗ
ಳನ್ನು ಭಕ್ತರು ಸಮರ್ಪಿಸಿದರು. ರಾಜವಂಶಸ್ಥರು ದೇವರ ಮೂರ್ತಿಯ ಮುಂದೆ ಈಡುಗಾಯಿ ಒಡೆಯುವ ಮೂಲಕ ಉತ್ಸವ ಸಂಪನ್ನಗೊಂಡಿತು.

ದೇಗುಲದ ಹೊರಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಚಾಮುಂಡಿಬೆಟ್ಟದ ಗ್ರಾಮದವರಿಗೆ ಮುಕ್ತ ಪ್ರವೇಶ ಇದ್ದುದ್ದು, ಹಾಗೂ ಹೊರಗಿನಿಂದ ಬಂದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದ್ದರಿಂದ ಜನಜಂಗುಳಿ ಹೆಚ್ಚಾಗಿತ್ತು.  

ಸಂಜೆ 7.15 ಗಂಟೆಗೆ ತೆರೆಯುತ್ತಿದ್ದ ದೇಗುಲ ಶುಕ್ರವಾರ ಸಂಜೆ 5 ಗಂಟೆಗೆ ಬಾಗಿಲು ತೆರೆಯಿತು. ನಂತರ, ನಡೆದ ದರ್ಬಾರ್ ಉತ್ಸವ ಹಾಗೂ ಮಂಟಪೋತ್ಸವದಲ್ಲಿ ರಾಜವಂಶಸ್ಥರಾದ ಪ್ರಮೋದಾದೇವಿ ಭಾಗಿಯಾದರು.

ಎಚ್.ಡಿ.ರೇವಣ್ಣ, ಸಂಸದ ಪ್ರತಾಪ ಸಿಂಹ, ಕೆ.ಎಸ್.ಈಶ್ವರಪ್ಪ, ಹರತಾಳು ಹಾಲಪ್ಪ, ಸಂದೇಶ್‌ ನಾಗರಾಜು ಸೇರಿದಂತೆ ಅನೇಕ ರಾಜಕೀಯ ಮುಖಂಡರು ದೇವಸ್ಥಾನಕ್ಕೆ ಭೇಟಿ ನೀಡಿದರು.‌

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಚಾಮುಂಡಿಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್, ‘ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಅಂದಿನಿಂದಲೂ ಈ ಉತ್ಸವ ನಡೆಯುತ್ತಿದೆ. ಮೂರ್ತಿಗೆ ಶುಕ್ರವಾರ ದರ್ಬಾರ್ ಅಲಂಕಾರ ಮಾಡಲಾಗಿತ್ತು’ ಎಂದು ತಿಳಿಸಿದರು.

ಬೆಟ್ಟದ ಪಾದದಲ್ಲಿ ಮೆಟ್ಟಿಲು ಹತ್ತಲು ಬಂದವರು, ರಸ್ತೆ ಮೂಲಕ ಬಂದ ಸಾಮಾನ್ಯ ಜನರು ದೇವರ ದರ್ಶನಕ್ಕಾಗಿ ಪರದಾಡಿದರು. ಪ್ರವೇಶ ನೀಡುವಂತೆ ಪೊಲೀಸರನ್ನು ಪರಿಪರಿಯಾಗಿ ಕೇಳಿಕೊಳ್ಳುತ್ತಿದ್ದ ದೃಶ್ಯಗಳು ಕಂಡು ಬಂದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.