ಶನಿವಾರ, ಸೆಪ್ಟೆಂಬರ್ 24, 2022
21 °C

ಸ್ವಾತಂತ್ರ್ಯೋತ್ಸವ ಸಂಭ್ರಮ: ಮೈಸೂರಿನಲ್ಲಿ 20 ಮಂದಿ ಕೈದಿಗಳಿಗೆ ಬಿಡುಗಡೆ ಭಾಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಗರದ ಕೇಂದ್ರ ಕಾರಾಗೃಹದಲ್ಲಿದ್ದ 20 ಪುರುಷ ‘ಅಲ್ಪಾವಧಿ ಶಿಕ್ಷಾ ಬಂದಿ’ಗಳನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ವಿಶೇಷ ಮಾಫಿಯೊಂದಿಗೆ ಅವಧಿಪೂರ್ವವಾಗಿ ಸೋಮವಾರ ಬಿಡುಗಡೆಗೊಳಿಸಲಾಯಿತು.

ವಿವಿಧ ಪ್ರಕರಣಗಳಲ್ಲಿ ಕಾರಾಗೃಹದಲ್ಲಿದ್ದ ಅವರು, ಶೇ 60ರಷ್ಟು ಶಿಕ್ಷೆ ಪೂರೈಸಿದವರಾಗಿದ್ದಾರೆ.

ನಂಜನಗೂಡು ತಾಲ್ಲೂಕು ಕಾಟೂರಿನ ಕುಮಾರ ಅಲಿಯಾಸ್ ಸೀನಾ, ಕೊಡಗು ಜಿಲ್ಲೆ ಬಳಮ್ಮವಟ್ಟಿ ಗ್ರಾಮದ ಮಾದೇಯಾಂಡ ಸಿ.ರಾಜೇಶ್, ತಿ.ನರಸೀಪುರ ತಾಲ್ಲೂಕು ಬೆನಕನಹಳ್ಳಿಯ ಶಾಂತರಾಜು, ಸರಗೂರು ತಾಲ್ಲೂಕು ಕಳ್ಳಂಬಾಳು ಗ್ರಾಮದ ಕುಮಾರ ಮತ್ತು ಕೃಷ್ಣ, ಕೇರಳದ ಮಾನಂದವಾಡಿ ತಾಲ್ಲೂಕಿನ ಆಣೆಬೇಗೂರು ಗ್ರಾಮದ ಮಾದವನ್, ಮಂಡ್ಯ ಜಿಲ್ಲೆ ಕಿರುಗಾವಲಿನ ಜಯರಾಮ, ಹುಣಸೂರು ತಾಲ್ಲೂಕು ಅಬ್ಬೂರಿನ ಮಹೇಶ, ನಂಜನಗೂಡು ತಾಲ್ಲೂಕು ಹರತಲೆಯ ನಂಜುಂಡ, ಕೊಡಗು ಜಿಲ್ಲೆಯ ಅಮ್ಮಂಗಾಲದ ಪಿ.ಜಿ.ಪುಟ್ಟ, ಕೊಡಗು ಜಿಲ್ಲೆ ಒಡೆಯನಪುರದ ವಿ.ಜೆ.ಹರೀಶ್, ಸೋಮವಾರಪೇಟೆ ತಾಲ್ಲೂಕು ಕೂಡ್ಲೂರಿನ ಚಂದ್ರೇಗೌಡ, ಭೂತನಕಾಡಿನ ಮಂಜು, ಚಾಮರಾಜನಗರ ಜಿಲ್ಲೆಯ ಹೊನ್ನೂರಿನ ಶಿವಣ್ಣ, ಮಂಡ್ಯದ ಗಾಂಧಿ ನಗರದ ಜಗದೀಶ್, ಮೈಸೂರಿನ ಮಂಡಿ ಮೊಹಲ್ಲಾದ ಅಬ್ದುಲ್ ಫಾರೂಕ್, ಮಂಡ್ಯ ಜಿಲ್ಲೆ ಗಣಿಗ ಗ್ರಾಮದ ಕೃಷ್ಣ, ಕೊಡಗು ಜಿಲ್ಲೆ ವಲಗುಂಡ ಗ್ರಾಮದ ಜೇನುಕುರುಬರ ಗಣೇಶ್, ಮೈಸೂರು ಜಿಲ್ಲೆ ನೇರಳಕುಪ್ಪೆಯ ಬೆಟ್ಟಪಟ್ಟಿ ಮತ್ತು ತಿ.ನರಸೀಪುರ ತಾಲ್ಲೂಕು ಎ.ಜೆ.ಕಾಲೊನಿಯ ಆರ್.ಸದಾನಂದ ಬಿಡುಗಡೆಗೊಂಡವರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ ಬಿಡುಗಡೆ ಪತ್ರ ವಿತರಿಸಿದರು.

ಉತ್ತಮ ಬದುಕು ಕಟ್ಟಿಕೊಳ್ಳಿ: ಬಳಿಕ ಮಾತನಾಡಿದ ಅವರು, ‘ಮಾರ್ಗಸೂಚಿ ಪ್ರಕಾರ ಏಳು ವರ್ಷಗಳೊಳಗಿನ ಶಿಕ್ಷೆಗೆ ಗುರಿಯಾಗಿದ್ದವರನ್ನು ವಿಶೇಷ ಮಾಫಿಯೊಂದಿಗೆ ಬಿಡುಗಡೆ ಮಾಡಲಾಗಿದೆ. ಸಣ್ಣ–ಪುಟ್ಟ ಪ್ರಕರಣಗಳಲ್ಲಿ ತಪ್ಪೆಸಗಿದ್ದವರಿವರು. ಇಲ್ಲಿಂದ ಹೋದವರು, ಮತ್ತೆ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸದೇ ಉತ್ತಮ ಬದುಕು ರೂಪಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಕೇಂದ್ರ ಕಾರಾಗೃಹದ ಮುಖ್ಯ ಸೂಪರಿಂಟೆಂಡೆಂಟ್‌ ಕೆ.ಸಿ.ದಿವ್ಯಶ್ರೀ ಮಾತನಾಡಿ, ‘ಕೇಂದ್ರದ ಮಾರ್ಗಸೂಚಿ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದ ಅಂಗವಾಗಿ 20 ಮಂದಿ ಅಲ್ಪಾವಧಿ ಶಿಕ್ಷಾ ಬಂದಿಗಳನ್ನು ಬಿಡುಗಡೆ ಮಾಡಲಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ವಿಶೇಷ ಮಾಫಿ ಇದಾಗಿದೆ. ಇನ್ನೆರಡು ಹಂತಗಳಲ್ಲಿ ಬಿಡುಗಡೆಯು ಗಣರಾಜ್ಯೋತ್ಸವ ಹಾಗೂ ಮುಂದಿನ ಸ್ವಾತಂತ್ರ್ಯ ದಿನದಂದು ನಡೆಯಲಿದೆ’ ಎಂದರು.

ಅಪರಾಧ ಮುಕ್ತ ಸಮಾಜಕ್ಕೆ: ‘ಜೈಲುಗಳು ಹೆಚ್ಚಿನ ಸಂಖ್ಯೆಯಿಂದ ತುಂಬಿದ್ದು, ಏಕರೂಪ ನೀತಿ ಜಾರಿಗೊಳಿಸುವಂತೆ ಸುಪ್ರೀಂ ಕೋರ್ಟ್‌ ಕೂಡ ಈಚೆಗೆ ನಿರ್ದೇಶನ ನೀಡಿದೆ. ಅಲ್ಪಾವಧಿ ಶಿಕ್ಷಾ ಬಂದಿಗಳಿಗೆ ಒಳ್ಳೆಯ ನಾಗರಿಕರಾಗಲು ಅವಕಾಶ ಕಲ್ಪಿಸಲಾಗಿದ್ದು, ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಹೊರಗಡೆ ಹೋದವರು, ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು’ ಎಂದು ತಿಳಿಸಿದರು.

ಕಾರಾಗೃಹದ ಸಹಾಯಕ ಸೂಪರಿಂಟೆಂಡೆಂಟ್ ವಿಜಯ್‌ ರೋಡ್ಕರ್‌, ಮುಖ್ಯ ವೈದ್ಯಾಧಿಕಾರಿ ಡಾ.ಸಂತೋಷ್, ಜನರಲ್‌ ಸರ್ಜನ್‌ ಡಾ.ಕಿರಣ್, ಎಸ್‌ಐ ಅಮರ್‌ ಹುಲ್ಲೋಳಿ, ಜೈಲರ್‌ಗಳಾದ ಗೀತಾ ಮಾಲಗಾರ, ರಘುಪತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು