ಬುಧವಾರ, ಡಿಸೆಂಬರ್ 1, 2021
22 °C
ತೋಟಗಾರಿಕೆ ಇಲಾಖೆ ಶಿಫಾರಸು ಮಾಡಿದ್ದ ಕೀಟನಾಶಕ; ಸಂಕಷ್ಟದಲ್ಲಿ ರೈತ

ಹುಣಸೂರು: ಕಲ್ಲಂಗಡಿ ಬೆಳೆಗೆ ಕೀಟನಾಶಕ ಕುತ್ತು

ಎಚ್‌.ಎಸ್.ಸಚ್ಚಿತ್ Updated:

ಅಕ್ಷರ ಗಾತ್ರ : | |

Prajavani

ಹುಣಸೂರು: ತಾಲ್ಲೂಕಿನ ಮಂಚ ಬಾಯನಹಳ್ಳಿ ಗ್ರಾಮದ ರೈತ ರಾಜೇಶ್, ಕಲ್ಲಂಗಡಿ ಬೆಳೆಗೆ ತಗುಲಿದ್ದ ಕೀಟಬಾಧೆ ನಿಯಂತ್ರಿಸಲು ತೋಟಗಾರಿಕೆ ಇಲಾಖೆ ಶಿಫಾರಸು ಮಾಡಿದ್ದ ಕೀಟನಾಶಕ ಸಿಂಪಡಿಸಿದ್ದು, ಈಗ ಬಳ್ಳಿಗಳು ಬಾಡಲಾರಂಭಿಸಿವೆ.

3 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಲ್ಲಂಗಡಿ ಉತ್ತಮವಾಗಿ ಬಳ್ಳಿ ಬಿಟ್ಟಿದ್ದು, ಹೂವು ಕಚ್ಚಿತ್ತು. ಈ ಮಧ್ಯೆ ಫಸಲಿಗೆ ಕಾಣಿಸಿಕೊಂಡ ಕೀಟಬಾಧೆ ನಿಯಂತ್ರಿಸಲು ಸ್ಥಳೀಯ ಅಗ್ರೋ ಔಷಧ ಅಂಗಡಿಯಲ್ಲಿ ಕ್ರಿಮಿನಾಶಕ ಖರೀದಿಸಿದ್ದರು. ಔಷಧ ಸಿಂಪಡಣೆ ಬಗ್ಗೆ ಅಂಗಡಿ ಮಾಲೀಕ ಮಾಹಿತಿ ನೀಡಿದ್ದರು. ಅವರು ಹೇಳಿದಂತೆ ಕಲ್ಲಂಗಡಿ ಬಳ್ಳಿಗೆ ಸಿಂಪಡಿಸಿದ್ದರು. ಆದರೆ, ಈಗ ಬಳ್ಳಿಗಳು ಬಾಡಲಾರಂಭಿಸಿದ್ದು, ಗಿಡಗಳು ಸಾಯುವ ಹಂತ ತಲುಪಿವೆ.

‘ಹೊಗೆಸೊಪ್ಪು ಕೈ ಕಚ್ಚಿದ ಕಾರಣ ಪರ್ಯಾಯ ಬೆಳೆಯಾಗಿ ಕಲ್ಲಂಗಡಿ ಬೆಳೆದಿದ್ದೆ. ಇದಕ್ಕಾಗಿ ₹80 ಸಾವಿರ ಖರ್ಚು ಮಾಡಿದ್ದೇನೆ. ತೋಟಗಾರಿಕೆ ಇಲಾಖೆಯ ಶಿಫಾರಸ್ಸಿನಂತೆ ಕೀಟನಾಶಕ, ಶಿಲೀಂಧ್ರನಾಶಕವನ್ನು ಮಿಶ್ರಣ ಮಾಡಿ ಸಿಂಪಡಿಸಿದ್ದೆ. ಆದರೆ, ಈಗ ಬೆಳೆ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಇದೆ’ ಎಂದು ರೈತ ರಾಜೇಶ್ ಅಳಲು ತೋಡಿಕೊಂಡರು.

‘ಈ ಪ್ರಕರಣದಲ್ಲಿ ಅಗ್ರೋ ಔಷಧ ಅಂಗಡಿ ಮಾಲೀಕರಿಗೆ ನೋಟಿಸ್ ನೀಡಿದ್ದು, ವಿಚಾರಣೆಗೆ ಹಾಜರಾಗು ವಂತೆ ಸೂಚಿಸಲಾಗಿದೆ. ಇಲಾಖೆ ಸಿಬ್ಬಂದಿ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಮಹಜರ್ ಮಾಡಿದ್ದಾರೆ. ಕಲ್ಲಂಗಡಿ ಫಸಲು ಕಳೆದುಕೊಂಡಿರುವ ರೈತನಿಗೆ ಇಲಾಖೆಯಿಂದ ಯಾವುದೇ ಪರಿಹಾರ ಸಿಗುವುದಿಲ್ಲ. ಅಗ್ರೋ ಔಷಧ ಅಂಗಡಿಯವರು ತಪ್ಪು ಮಾಹಿತಿ ನೀಡಿರುವುದು ಖಚಿತವಾದರೆ ಪರಿಹಾರವನ್ನು ಅವರಿಂದಲೇ ಕೊಡಿಸಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ನೇತ್ರಾವತಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು