ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಕ್ಕೆ ಒತ್ತಾಯ

110 ಹಾಡಿಗಳ ಗಿರಿಜನರ ಬದುಕು ಅತಂತ್ರ: ಪ್ರತಿಭಟನೆಯಲ್ಲಿ ಮುಖಂಡರ ಆಕ್ರೋಶ
Last Updated 7 ಅಕ್ಟೋಬರ್ 2020, 1:39 IST
ಅಕ್ಷರ ಗಾತ್ರ

ಹುಣಸೂರು: ‘ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಹುಣಸೂರು ಉಪವಿಭಾಗ ವ್ಯಾಪ್ತಿಯ 5,386 ಆದಿವಾಸಿ ಕುಟುಂಬಗಳು ಅರ್ಜಿ ಸಲ್ಲಿಸಿ 12 ವರ್ಷ ಕಳೆದರೂ ಕಾಯ್ದೆ ಆದೇಶದಂತೆ ಅನುಷ್ಠಾನವಾಗಿಲ್ಲ’ ಎಂದು ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಶೈಲೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದ ‌ಉಪವಿಭಾಗಾಧಿಕಾರಿ ಕಚೇರಿ ಎದುರು ಮಂಗಳವಾರ ಹುಣಸೂರು, ಎಚ್‌.ಡಿ.ಕೋಟೆ ಮತ್ತು ಪಿರಿಯಾಪಟ್ಟಣ ತಾಲ್ಲೂಕಿನ ವಿವಿಧ ಹಾಡಿಗಳ ಆದಿವಾಸಿ ಗಿರಿಜನರು ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಅನುಸೂಚಿತ ಬುಡಕಟ್ಟುಗಳ ಮತ್ತು ಇತರ ಪಾರಂಪರಿಕ ಅರಣ್ಯವಾಸಿಗಳ ಹಕ್ಕು ಕಾಯ್ದೆ ಅಡಿಯಲ್ಲಿ ಈಗಾಗಲೇ ಅರಣ್ಯ ಹಕ್ಕು ಸಮಿತಿಗಳು ಪಂಚಾಯಿತಿ ಮಟ್ಟದಲ್ಲಿ ಅನುಮೋದಿಸಿ ಉಪ ಸಮಿತಿಗೆ ಹಸ್ತಾಂತರಿಸಿದ್ದರೂ, ಅನುಮೋದಿತ ಹಕ್ಕನ್ನು ಅನುಷ್ಠಾನಗೊಳಿಸಿಲ್ಲ’ ಎಂದು ಅಸಮಾಧಾನ ಹೊರ ಹಾಕಿದರು.

‘ಅನುಸೂಚಿ ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ ಪುನರ್ವಸತಿ ಕಾನೂನು ಹಕ್ಕನ್ನು ಮಾನ್ಯ ಮಾಡದೇ ಅರಣ್ಯದಿಂದ ಕಾನೂನು ಬಾಹಿರವಾಗಿ ಹೊರ ಹಾಕಲಾಗಿದೆ. ಅರಣ್ಯದಿಂದ ಹೊರ ಬಂದ ಗಿರಿಜನರಿಗೆ ಪುನರ್ವಸತಿ ಹಕ್ಕು ನೀಡಬೇಕೆಂದು ಕಾಯ್ದೆಯಲ್ಲಿ ಅವಕಾಶ ನೀಡಿದ್ದರೂ ಜಾರಿಗೊಳಿಸಿಲ್ಲ’ ಎಂದರು.

‘ಸುಂಕದಕಟ್ಟೆ ವಸತಿಗೃಹಕ್ಕೆ ಹೊಂದಿಕೊಂಡಿರುವ 12 ಗಿರಿಜನ ಕುಟುಂಬಗಳಿಗೆ ಹಕ್ಕುಪತ್ರ ನೀಡಿ ಪುನರ್ವಸತಿ ಕಲ್ಪಿಸಬೇಕು. ಎಚ್.ಡಿ.ಕೋಟೆ, ಹುಣಸೂರು ತಾಲ್ಲೂಕಿನ ಒಟ್ಟು 79 ಹಾಡಿಗಳಿಂದ ಈಗಾಗಲೇ ಸಾಮೂಹಿಕ ಹಕ್ಕುಪತ್ರಕ್ಕೆ ಸಲ್ಲಿಸಿರುವ ಅರ್ಜಿಯನ್ನು ಮಾನ್ಯ ಮಾಡಿ ಅನುಷ್ಠಾನಕ್ಕೆ ತರಬೇಕು’ ಎಂದು ಹಕ್ಕೋತ್ತಾಯ ಮಾಡಿದರು.

‘ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ಗಾಂಧಿ ಜಯಂತಿ ಅಂಗವಾಗಿ 1.53 ಲಕ್ಷ ಅರಣ್ಯವಾಸಿ ಬುಡಕಟ್ಟು ಕುಟುಂಬಗಳಿಗೆ 3.12 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಪ್ರತಿ ಕುಟುಂಬಕ್ಕೆ 2 ಎಕರೆ ಕೃಷಿ ಭೂಮಿ ಮಂಜೂರು ಮಾಡಿ ಪುನರ್ವಸತಿ ಕಲ್ಪಿಸಿದೆ. ಆದರೆ ರಾಜ್ಯದಲ್ಲಿ ಅರಣ್ಯದಿಂದ ಹೊರ ಬಂದ ಗಿರಿಜನರನ್ನು ಬೀದಿ ಪಾಲು ಮಾಡಿದೆ’ ಎಂದು ಕಿಡಿಕಾರಿದರು.

‘ಎಚ್.ಡಿ.ಕೋಟೆ ತಾಲ್ಲೂಕಿನ ಡಿ.ಬಿ.ಕುಪ್ಪೆ ಮತ್ತು ಎನ್ ಬೆಳ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗಿರಿಜನರಿಗೆ ಅರಣ್ಯಹಕ್ಕು ಕಾಯ್ದೆ ಅಡಿಯಲ್ಲಿ ಕೃಷಿ ಮತ್ತು ನಿವೇಶನಕ್ಕೆ ಅರ್ಧ ಗುಂಟೆಯಿಂದ 2 ಗುಂಟೆವರಗೆ ಭೂಮಿ ನೀಡಿ ಆದಿವಾಸಿಗಳಿಗೆ ಅನ್ಯಾಯ ಮಾಡಲಾಗಿದೆ. ಈ ಬಗ್ಗೆ ಉಪವಿಭಾಗಾಧಿಕಾರಿಗಳು ಗಮನ ಹರಿಸಬೇಕು’ ಎಂದು ಗಿರಿಜನ ಮುಖಂಡ ಜಯರಾಜ್ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕೊಳವಿಗೆ ಹಾಡಿ, ಉದ್ಬೂರು ಹಾಡಿ, ಬೀರನಕಟ್ಟೆ, ಚೌಕೂರು, ಅಂಕನಾಥಪುರ, ಮಾಳದಹಾಡಿ ಸೇರಿದಂತೆ ವಿವಿಧ ಹಾಡಿಗಳಿಂದ ಗಿರಿಜನರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT