ಸೋಮವಾರ, ಜೂನ್ 21, 2021
30 °C
ಹೋಬಳಿ ಕೇಂದ್ರದಲ್ಲಾದರೂ ಕೋವಿಡ್‌ ತಪಾಸಣೆಯ ಪರೀಕ್ಷೆ ನಡೆಸಿ l ತುರ್ತಾಗಿ ಆರೈಕೆ ಕೇಂದ್ರ ಆರಂಭಿಸಿ

ಹಳ್ಳಿಗಳಲ್ಲಿ ತಪಾಸಣೆ ಸ್ಥಗಿತ: ಹೆಚ್ಚಿದ ಎದೆಬಡಿತ

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

PTI

ಮೈಸೂರು: ಕೊರೊನಾ ವೈರಸ್‌ ಸೋಂಕಿನ ಎರಡನೇ ಅಲೆ ಜಿಲ್ಲೆಯ ಬಹುತೇಕ ಹಳ್ಳಿಗಳಿಗೂ ವ್ಯಾಪಿಸಿದೆ. ಗ್ರಾಮೀಣರನ್ನು ಬಾಧಿಸುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರಾಗುತ್ತಿರುವವರ ಸಂಖ್ಯೆ ಎಲ್ಲೆಡೆಯೂ ಹೆಚ್ಚಿದೆ.

ಪ್ರತಿ ಗ್ರಾಮದಲ್ಲೂ ಸೋಂಕಿನ ಲಕ್ಷಣವಿರುವವರ ಸಂಖ್ಯೆ ‘ಹನುಮಂತನ ಬಾಲ’ದಂತೆ ಬೆಳೆಯುತ್ತಲೇ ಇದೆ. ಆದರೆ, ಇದೀಗ ಗ್ರಾಮೀಣ ಪರಿಸರದಲ್ಲಿ ಸೋಂಕು ಪತ್ತೆ ಹಚ್ಚಿ, ದೃಢಪಡಿಸುವ ಕೋವಿಡ್‌ ಪರೀಕ್ಷೆಗಳು ಸ್ಥಗಿತಗೊಂಡಿ
ರುವುದು ಹಳ್ಳಿ ಜನರ ಎದೆ ಬಡಿತ ಹೆಚ್ಚಿಸಿದೆ. ಆತಂಕಕ್ಕೆ ದೂಡಿದೆ.

ತೀವ್ರತರ ಲಕ್ಷಣ ಹೊಂದಿರುವವರು ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರೆ, ತಾಲ್ಲೂಕು ಕೇಂದ್ರಕ್ಕೆ ಹೋಗಲೇಬೇಕು ಎಂಬಂತಹ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ. ಲಾಕ್‌ಡೌನ್‌ನಿಂದ ವಾಹನ ಸಂಚಾರವಿಲ್ಲ. ಖಾಸಗಿ ವಾಹನಗಳಲ್ಲಿ ಕರೆದೊಯ್ಯಲು ಹಿಂದೇಟು ಹಾಕುವವರೇ ಹೆಚ್ಚಾಗಿದ್ದಾರೆ.

ಬೇರೆ ದಾರಿಯಿಲ್ಲದೆ ಕುಟುಂಬದವರೇ ದ್ವಿಚಕ್ರ ವಾಹನದಲ್ಲಿ ಹೋಗಿ ಬರಬೇಕಿದೆ. ಇದು ಸೋಂಕು ಮತ್ತಷ್ಟು ವೇಗವಾಗಿ ಹರಡಲು, ಕುಟುಂಬದವರೆಲ್ಲರೂ ಒಟ್ಟಿಗೆ ಸೋಂಕಿತರಾಗಲು ಹಾಗೂ ಪೀಡಿತರ ಅನಾರೋಗ್ಯ ಗಂಭೀರ ಸ್ಥಿತಿಗೆ ಹೊರಳಲು ಕಾರಣವಾಗುತ್ತಿದೆ.

‘ನಮ್ಮ ಸಮೀಪದ ಯಾವೊಂದು ಸರ್ಕಾರಿ ಆಸ್ಪತ್ರೆ, ಗ್ರಾಮದಲ್ಲಿ ಕೋವಿಡ್‌ ತಪಾಸಣಾ ಶಿಬಿರ ನಡೆಯುತ್ತಿಲ್ಲ. ಆಸ್ಪತ್ರೆಗೆ ಹೋದರೆ ನಮ್ಮಲ್ಲಿನ ಸಮಸ್ಯೆಗೆ ಮಾತ್ರೆ ಕೊಡುತ್ತಾರೆ. ಐದು ದಿನ ನುಂಗಿ. ಮನೆಯಲ್ಲೇ ಇರಿ ಎಂದಷ್ಟೇ ಹೇಳುತ್ತಾರೆ. ನಮಗೆ ಕೋವಿಡ್‌ ಇದೆಯೋ? ಇಲ್ಲವೋ ಎಂಬುದೇ ಗೊತ್ತಾಗ್ತಿಲ್ಲ’ ಎಂದು ತಿ.ನರಸೀಪುರ ತಾಲ್ಲೂಕಿನ ಬಿ.ಸೀಹಳ್ಳಿ ಗ್ರಾಮದ ರಾಜುಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಮನೆಗಳಲ್ಲಿ ಪ್ರತ್ಯೇಕ ಕೊಠಡಿಯೂ ಇಲ್ಲ. ಶೌಚಾಲಯವೂ ಇಲ್ಲ. ಐದು ದಿನದಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಳ್ಳದಿದ್ದರೆ, ಆರೋಗ್ಯದ ಪರಿಸ್ಥಿತಿ ಬಿಗಡಾಯಿಸದಿದ್ದರೆ ನಮ್ಮ ಪುಣ್ಯ. ಸ್ವಲ್ಪ ಗಂಭೀರವಾದರೂ ಸೂಕ್ತ ಚಿಕಿತ್ಸೆಗಾಗಿ, ಕೋವಿಡ್‌ ತಪಾಸಣೆಗಾಗಿ ಎರಡ್ಮೂರು ದಿನ ಅಲೆಯಬೇಕಾದ ವಿಚಿತ್ರ ಸನ್ನಿವೇಶ ನಿರ್ಮಾಣಗೊಂಡಿದೆ’ ಎಂದು ತಮ್ಮೂರ ಜನರು ಎದುರಿಸುತ್ತಿರುವ ಪ್ರಸಕ್ತ ಸನ್ನಿವೇಶದ ಸಂಕಷ್ಟವನ್ನು ಹೇಳಿಕೊಂಡರು.

‘ನನ್ನ ಪತಿಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡವು. ತಪಾಸಣಾ ಕೇಂದ್ರಕ್ಕೆ ಹೋದರೂ ಎಲ್ಲಿಯೂ ಕೋವಿಡ್‌ ಪರೀಕ್ಷೆ ಮಾಡಲಿಲ್ಲ. ಮಾತ್ರೆಯನ್ನಷ್ಟೇ ಕೊಟ್ಟರು. ಅನಾರೋಗ್ಯ ಒಮ್ಮೆಗೆ ಉಲ್ಬಣಿಸಿತು. ದಿಕ್ಕೇ ತೋಚಲಿಲ್ಲ. ಸಹಾಯವಾಣಿಗೆ ಕರೆ ಮಾಡಿದರೂ, ಸರ್ಕಾರಿ ಆಸ್ಪತ್ರೆಯಲ್ಲಿ ಹಾಸಿಗೆಯೇ ಸಿಗಲಿಲ್ಲ. ಅವರಿವರ ಬಳಿ ಹಣ ಹೊಂದಿಸಿಕೊಂಡು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೇವೆ. ಇದೀಗ ನಾವು ಹೋಂ ಐಸೋಲೇಷನ್‌ನಲ್ಲಿದ್ದೇವೆ. ಯಾವೊಬ್ಬ ಅಧಿಕಾರಿಯೂ ನಮ್ಮ ಕಷ್ಟ ಕೇಳುತ್ತಿಲ್ಲ. ನೆರೆಹೊರೆಯವರ ಸಹಕಾರವೇ ಆಸರೆಯಾಗಿರೋದು’ ಎಂದು ನಗರ್ಲೆಯ ಪವಿತ್ರಾ ತಿಳಿಸಿದರು.

ಜಿಲ್ಲೆಯ 170 ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್‌ ಮಿತ್ರ

‘ಜಿಲ್ಲೆಯಲ್ಲಿರುವ 170 ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್‌ ಮಿತ್ರ ಆರಂಭಿಸಲಾಗಿದೆ. ಸೋಂಕಿನ ಲಕ್ಷಣವಿರುವವರು ಇಲ್ಲಿಗೆ ಭೇಟಿ ನೀಡಿದರೆ, ವೈದ್ಯರು ಸೂಕ್ತ ಸಲಹೆ ನೀಡಲಿದ್ದಾರೆ’ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ವೈದ್ಯರೊಬ್ಬರು ತಿಳಿಸಿದರು.

‘ಪ್ರತಿಯೊಬ್ಬರನ್ನು ಪರೀಕ್ಷಿಸಲಾಗುವುದು. ರೋಗಿಯ ಪರಿಸ್ಥಿತಿ, ಸೋಂಕಿನ ತೀವ್ರತೆ ಅರಿಯಲಿಕ್ಕಾಗಿ ಟ್ರಯಾಜ್‌ ನಡೆಯಲಿದೆ. ಅಗತ್ಯವಿದ್ದರಷ್ಟೇ ಕೋವಿಡ್‌ ತಪಾಸಣೆ ಹಾಗೂ ಚಿಕಿತ್ಸೆಗೆ ವೈದ್ಯರು ಶಿಫಾರಸು ಮಾಡುತ್ತಾರೆ’ ಎಂದು ಅವರು ಹೇಳಿದರು.

‘ಕೋವಿಡ್‌ ತಪಾಸಣೆಗಾಗಿ ಅನಗತ್ಯವಾಗಿ ಕಾಯೋದು ಬೇಡ ಎಂಬ ಕಾರಣಕ್ಕೆ ಕೋವಿಡ್‌ ಮಿತ್ರ ಆರಂಭಿಸಲಾಗಿದೆ.
ಇಲ್ಲಿ ಕೆಮ್ಮು, ಜ್ವರ, ಶೀತಕ್ಕೆ ಮಾತ್ರೆ ಕೊಡುತ್ತಾರೆ. ಜನರು ಈ ಕೇಂದ್ರಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬಹುದು’ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ವೈದ್ಯಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು