ಶನಿವಾರ, ಸೆಪ್ಟೆಂಬರ್ 25, 2021
29 °C
54ನೇ ಎಂಜಿನಿಯರ್‌ಗಳ ದಿನಾಚರಣೆ

ಕೆಆರ್‌ಎಸ್‌ ಬಳಿ ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪಿಸಿ: ಎಂ.ಲಕ್ಷ್ಮಣ್‌ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಕೆಆರ್‌ಎಸ್‌ ಅಣೆಕಟ್ಟೆ ಬಳಿ ಸರ್‌ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಸ್ಥಾಪನೆಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವುದು ಖಂಡನೀಯ’ ಎಂದು ಎಂಜಿನಿಯರ್‌ಗಳ ಸಂಸ್ಥೆಯ ರಾಜ್ಯ ಘಟಕದ ನಿಯೋಜಿತ ಅಧ್ಯಕ್ಷ ಎಂ.ಲಕ್ಷ್ಮಣ್‌ ತಿಳಿಸಿದರು.

ನಗರದ ಎಂಜಿನಿಯರ್‌ಗಳ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ‘54ನೇ ಎಂಜಿನಿಯರ್‌ಗಳ ದಿನ ಹಾಗೂ ಸರ್‌ ಎಂ.ವಿಶ್ವೇಶ್ವರಯ್ಯ ಜನ್ಮದಿನಾಚರಣೆ’ಯಲ್ಲಿ ಮಾತನಾಡಿ, ‘ಕೆಆರ್‌ಎಸ್‌ ಜಲಾಶಯ ನಿರ್ಮಾಣದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹಾಗೂ ವಿಶ್ವೇಶ್ವರಯ್ಯ ಅವರ ಪಾತ್ರ ಮಹತ್ವದ್ದು. ಅತ್ಯಂತ ಕಡಿಮೆ ಅವಧಿಯಲ್ಲಿ ಅಣೆಕಟ್ಟೆಯನ್ನು ನಿರ್ಮಿಸಲು ವಿಶ್ವೇಶ್ವರಯ್ಯ ಕಾರಣ. ಹೀಗಾಗಿ, ಅಲ್ಲಿ ಇಬ್ಬರ ಪ್ರತಿಮೆಗಳನ್ನೂ ಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.

‘ಕೆಆರ್‌ಎಸ್‌ ಜಲಾಶಯಕ್ಕಿಂತಲೂ ದೊಡ್ಡ ಅಣೆಕಟ್ಟೆಗಳು ರಾಜ್ಯದಲ್ಲಿವೆ. ಆದರೆ, 3.5 ಕೋಟಿ ಜನರಿಗೆ ನೀರು ಪೂರೈಸುತ್ತಿರುವ ಈ ಅಣೆಕಟ್ಟೆಗೆ ಹೆಚ್ಚಿನ ಮಹತ್ವವಿದೆ. ಬೆಂಗಳೂರಿಗರಿಗೆ ಕುಡಿಯುವ ನೀರು ಪೂರೈಕೆಗೆ ಕೆಆರ್‌ಎಸ್‌ ಮೂಲ ಆಧಾರ’ ಎಂದರು.

ವಿಎಸ್‌ಟಿ ಟಿಲ್ಲರ್ಸ್‌ ಅಂಡ್‌ ಟ್ರಾಕ್ಟರ್ಸ್‌ನ ಸತ್ಯೇಂದ್ರ ಒ ದೇವರಕೊಂಡೆ ಅವರು ‘ಕೋವಿಡ್‌ ವಿರುದ್ಧ ಹೋರಾಡುವಲ್ಲಿ ಕೌಶಲಾಭಿವೃದ್ಧಿ ಮತ್ತು ಉದ್ಯೋಗಕ್ಕಾಗಿ ಎಂಜಿನಿಯರ್‌ಗಳು’ ಕುರಿತು ಮಾತನಾಡಿ, ‘ಕೋವಿಡ್‌ ಲಸಿಕೆ ಅಭಿವೃದ್ಧಿ ಹಾಗೂ ಅದನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲು, ವೈದ್ಯಕೀಯ ಉಪಕರಣಗಳಾದ ವೆಂಟಿಲೇಟರ್‌ಗಳು, ಆಮ್ಲಜನಕ ಸಾಂದ್ರಕ, ಪಿಪಿಇ ಕಿಟ್‌, ಫೇಸ್‌ಶೀಲ್ಡ್‌ ಸೇರಿದಂತೆ ಅನೇಕ ವಸ್ತುಗಳನ್ನು ತಯಾರಿಸಲು ಎಂಜಿನಿಯರ್‌ಗಳು ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದು ತಿಳಿಸಿದರು.

‘ದೇಶದ ವಾಹನ ತಯಾರಿಕೆ ಸೇರಿದಂತೆ ವಿವಿಧ ವಸ್ತುಗಳನ್ನು ಉತ್ಪಾದಿಸುವ ಕಂಪನಿಗಳು ಕೋವಿಡ್‌ ಸಂದರ್ಭದಲ್ಲಿ ವೈದ್ಯಕೀಯ ಉಪಕರಣಗಳನ್ನು ತಯಾರಿಸಲು ಮುಂದಾದವು. ಹೊಸ ಉತ್ಪನ್ನಗಳ ವಿನ್ಯಾಸ, ಕಾರ್ಯವಿಧಾನದಲ್ಲಿ ಎಂಜಿನಿಯರ್‌ಗಳ ಕಾರ್ಯಕ್ಷಮತೆ ಪ್ರಧಾನವಾಗಿತ್ತು’ ಎಂದರು.

ಎಂಜಿನಿಯರ್‌ಗಳ ಸಂಸ್ಥೆಯ ಮೈಸೂರು ವಿಭಾಗದ ಅಧ್ಯಕ್ಷ ಡಾ.ಆರ್‌.ಸುರೇಶ್‌, ನಿಯೋಜಿತ ಅಧ್ಯಕ್ಷ ಬಿ.ಎಸ್‌.ಪ್ರಭಾಕರ್‌, ಸಂಚಾಲಕ ಕೆ.ಬಿ.ಭಾಸ್ಕರ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು