ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂ.ರಾ ಮಹಿಳಾ ದಿನ– 2020’ ಜಾಗೃತಿ ಅಭಿಯಾನ: ರೈಲು ಓಡಿಸಿದ ಮಹಿಳಾ ಸಿಬ್ಬಂದಿ

Last Updated 6 ಮಾರ್ಚ್ 2020, 15:38 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ರೈಲು ನಿಲ್ದಾಣದಲ್ಲಿ ಗುರುವಾರ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಇದಕ್ಕೆ ಕಾರಣ, ಬೆಳಿಗ್ಗೆ ಹನ್ನೊಂದೂವರೆಗೆ ಬೆಂಗಳೂರಿಗೆ ಹೊರಟ ‘ಟಿಪ್ಪು ಎಕ್ಸ್‌ಪ್ರೆಸ್‌’ ರೈಲಿನ ಸಂಪೂರ್ಣ ನಿರ್ವಹಣೆ ಮಹಿಳಾ ಸಿಬ್ಬಂದಿಯದೇ ಆಗಿತ್ತು.

‘ಅಂತರರಾಷ್ಟ್ರೀಯ ಮಹಿಳಾ ದಿನ–2020’ ಅಭಿಯಾನದ ಅಂಗವಾಗಿ, ಭಾರತೀಯ ರೈಲ್ವೆಯು ಮಾರ್ಚ್‌ 1ರಿಂದ 10ರವರೆಗೆ ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನೈರುತ್ಯ ರೈಲ್ವೆ ವತಿಯಿಂದಲೂ ಆರೋಗ್ಯ ತಪಾಸಣೆ, ಯೋಗ ಶಿಬಿರ, ಟ್ರೆಕ್ಕಿಂಗ್‌, ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಆದರೆ, ಈ ಎಲ್ಲ ಕಾರ್ಯಕ್ರಮಗಳಿಗಿಂತ ವಿಶೇಷವಾದುದೆಂದರೆ, ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯೇ ಗುರುವಾರ ರೈಲು ನಿರ್ವಹಿಸಿದ್ದು. ಕೆಳಹಂತದ ಸಿಬ್ಬಂದಿಯಿಂದ ಹಿಡಿದು, ರೈಲು ಚಾಲನೆ ಮಾಡುವ ಲೋಕೊ ಪೈಲಟ್‌ ಆದಿಯಾಗಿ ಎಲ್ಲರೂ ಮಹಿಳೆಯರೇ ಇದ್ದು, ಸಮರ್ಥವಾಗಿ ಕೆಲಸ ನಿಭಾಯಿಸಿ ಸೈ ಎನ್ನಿಸಿಕೊಂಡರು.

ರೈಲು ಚಾಲನೆ ಮಾಡಿದ ಲೋಕೊ ಪೈಲಟ್‌ ಬಾಲಸಿವ ಪಾರ್ವತಿ ಹಾಗೂ ಸಹಾಯಕ ಲೋಕೊ ಪೈಲಟ್‌ ರಂಗೋಲಿ ಪಾಟೀಲ್‌, ಮಹಿಳಾ ಸಾಮರ್ಥ್ಯವನ್ನು ಮತ್ತೆ ಸಾಬೀತುಪಡಿಸಿ, ಹೆಮ್ಮೆಯಿಂದ ಬೀಗಿದರು.

ಗಾರ್ಡ್ ರಿಚಮಣಿ ತ್ರಿಪಾಠಿ, ಟ್ರೈನ್‌ ಟಿಕೆಟ್ ಪರೀಕ್ಷಕಿ ಗಾಯತ್ರಿ, ಸ್ಕ್ವಾಡ್‌ಗಳಾದ ಪುಷ್ಪಮ್ಮ, ರಾಜೇಶ್ವರಿ, ಕೆ.ಎಂ.ಹನಿ, ಎನ್‌.ಎಸ್.ಅನಿತಾ, ಕೆ.ಟಿ.ಬೆಟ್ಸೀ, ರೈಲ್ವೆ ಭದ್ರತಾ ಪಡೆಯ ದೇವಕಿ, ಗೀತಾ ಲತಾ ನಾಯಕ್‌, ಭಾರತಿ, ರೇಣುಕಾ ರೈಲಿನೊಂದಿಗೆ ಹೊರಟಿದ್ದು ವಿಶೇಷವಾಗಿತ್ತು.

ಬೆಳಿಗ್ಗೆ 10.30ರಿಂದಲೇ ರೈಲು ನಿಲ್ದಾಣದ ಒಂದನೇ ಪ್ಲಾಟ್‌ಫಾರ್ಮ್‌ನಲ್ಲಿ ಸೇರಿದ್ದ ಮಹಿಳಾ ಸಿಬ್ಬಂದಿ, ಪ್ರಯಾಣಿಕರನ್ನು ಸ್ವಾಗತಿಸಿದರು. ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಅಪರ್ಣಾ ಗರ್ಗ್‌, ರೈಲು ನಿಭಾಯಿಸಿದ ಒಟ್ಟು 13 ಸಿಬ್ಬಂದಿಗೆ ಗುಲಾಬಿ ಹೂವು ನೀಡಿ ಪ್ರೀತಿಯಿಂದ ಅಭಿನಂದಿಸಿದರು.

ರೈಲ್ವೆ ನಿಲ್ದಾಣದಿಂದ ಹೊರಡುವ ಹಾಗೂ ಮೈಸೂರಿಗೆ ಬರುವ ರೈಲುಗಳನ್ನು ಹಿರಿಯ ತಂತ್ರ‌ಜ್ಞೆ ರಮ್ಯಾ ನೇತೃತ್ವದಲ್ಲಿ ಆರು ಜನ ಸಿಬ್ಬಂದಿ ತಾಂತ್ರಿಕ ಪರೀಕ್ಷೆಗೆ ಒಳಪಡಿಸಿದರು. ರೈಲು ನಿಲ್ದಾಣದಲ್ಲಿ ಹಿರಿಯ ಗಾರ್ಡ್‌ಗಳಾದ ನಾಗಮಣಿ ಪ್ರಸಾದ್, ಟಿ.ಪಿ.ಡಿಮು, ಪಾಯಿಂಟ್ ವಿಮೆನ್ ಆಗಿ ಪಿ.ಪುಷ್ಪಾ ಕಾರ್ಯನಿರ್ವಹಿಸಿ ಪ್ರಯಾಣಿಕರು ಹಾಗೂ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ಗಳಿಸಿದರು.

‘ನನಗಿದು ಪ್ರೀತಿಯ ಕೆಲಸ’
ಲೋಕೊ ಪೈಲಟ್‌ ಬಾಲಸಿವ ಪಾರ್ವತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ನನಗಿದು ಇಷ್ಟದ ಹಾಗೂ ಸವಾಲಿನ ಕೆಲಸ. ರೈಲು ಚಾಲನೆ ಮಾಡುವುದು ಕಷ್ಟವೇನಲ್ಲ; ಪುರುಷರಿಗಷ್ಟೇ ಮೀಸಲಲ್ಲ. ಧೈರ್ಯದಿಂದ ಮಹಿಳೆಯರು ಈ ಕೆಲಸ ನಿಭಾಯಿಸಬಹುದು‘ ಎಂದು ಹೆಮ್ಮೆಯಿಂದ ಹೇಳಿದರು.

2011ರಲ್ಲಿ ಸಹಾಯಕ ಲೋಕೊ ಪೈಲಟ್ ಆಗಿ ರೈಲ್ವೆ ಇಲಾಖೆ ಸೇರಿದ ಅವರು, ಎರಡು ವರ್ಷದ ಹಿಂದೆ ಲೋಕೊ ಪೈಲಟ್ ಆಗಿ ಬಡ್ತಿ ಪಡೆದಿದ್ದಾರೆ. ಬೆಂಗಳೂರು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮೈಸೂರು, ಬೆಂಗಳೂರು, ಧರ್ಮಾವರಂ, ಅರಸೀಕರೆ, ಜೋಧ್‌ಪುರ್ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ರೈಲು ಚಾಲನೆ ಮಾಡಿದ್ದಾಗಿ ಅವರು ಹೇಳಿದರು.

‘ಎಲ್ಲ ಕಡೆಯೂ ಒಂದೇ ವೇಗದಲ್ಲಿ ಹೋಗುವಂತಿಲ್ಲ. ನಿಗದಿಪಡಿಸಿದ ವೇಗ ಕಾಯ್ದುಕೊಳ್ಳುವುದು ಸವಾಲಿನ ಕೆಲಸ’ ಎಂದು ಮುಗುಳ್ನಕ್ಕರು.

ಪಾರ್ವತಿ ಅವರದು ಆಂಧ್ರಪ್ರದೇಶದ ಪೀತಾಪುರಂ. ಸಹ ಪೈಲಟ್‌ ರಂಗೋಲಿ ಪಾಟೀಲ್‌ ಉತ್ತರ ಪ್ರದೇಶದವರು.

**

‘ಎಲ್ಲರೂ ಸಮಾನರು’ ಎಂಬ ಧ್ಯೇಯದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಪುರುಷ ಸಮಾಜ ಎನ್ನುವುದು ಈಗ ಇಲ್ಲ. ಮಹಿಳೆ ಈಗ ಮುಂಚೂಣಿಯಲ್ಲಿದ್ದಾಳೆ.
-ಅಪರ್ಣಾ ಗಾರ್ಗ್‌,ವಿಭಾಗೀಯ ವ್ಯವಸ್ಥಾಪಕಿ, ನೈರುತ್ಯ ರೈಲ್ವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT