ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ ರಾಜೀನಾಮೆ ಕೇಳಿದರೆ ಕೊಡಬೇಕಾಗುತ್ತೆ: ಸಚಿವ ಕೆ.ಎಸ್. ಈಶ್ವರಪ್ಪ

ತರಾತುರಿಯಲ್ಲಿ ಹೊರಟ ಈಶ್ವರಪ್ಪ
Last Updated 13 ಏಪ್ರಿಲ್ 2022, 5:45 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಲಲಿತಮಹಲ್ ಹೋಟೆಲ್ ನಲ್ಲಿ ವಿಭಾಗಮಟ್ಟದ ಬಿಜೆಪಿ ಕೋರ್ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಸಚಿವ ಕೆ.ಎಸ್.ಈಶ್ವರಪ್ಪ ಅವರು ಬುಧವಾರ ತರಾತುರಿಯಲ್ಲಿ ಬೆಂಗಳೂರಿನತ್ತ ನಿರ್ಗಮಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರು ತಲುಪುವಂತೆ ತುರ್ತು ಕರೆ ಮಾಡಿದ ಹಿನ್ನೆಲೆಯಲ್ಲಿ ಅವರು ಹೊರಟಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಹೊರಡುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ 'ನಾನು ಬಿಜೆಪಿ ಕಾರ್ಯಕರ್ತ. ಸಿ.ಎಂ ರಾಜೀನಾಮೆ ಕೇಳಿದರೆ ಕೊಡಬೇಕಾಗುತ್ತೆ. ರಾಜೀನಾಮೆ ಕೊಟ್ಟರೂ, ಇಲ್ಲದಿದ್ದರೂ ತನಿಖೆ ಆಗಬೇಕು. ಸತ್ಯಾಂಶ ಹೊರ ಬರಬೇಕು' ಎಂದು ತಿಳಿಸಿದರು.

ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿನ ವಾಟ್ಸ್ ಆ್ಯಪ್ ಸಂದೇಶವನ್ನು ಡೆತ್ ನೋಟ್ ಎನ್ನಲಾಗದು. ಆ ರೀತಿ ಯಾರು ಬೇಕಾದರೂ ಮಾಡಬಹುದು. ಡೆತ್ ನೋಟ್ ನ್ನು ಕ್ರಿಯೇಟ್ ಮಾಡಲಾಗಿದೆ ಎಂದು ಪ್ರತಿಪಾದಿಸಿದರು.

ಗಣಪತಿ ಪ್ರಕರಣದಲ್ಲಿ ಕೈಯಲ್ಲಿ ಪತ್ರ ಬರೆದು, ಜಾರ್ಜ್ ಹೆಸರು ಹೇಳಿ ಸಹಿ ಮಾಡಿದ್ದರು. ಆದರೆ ಇಲ್ಲಿ ಯಾರು ಬೇಕಾದರೂ ಟೈಪ್ ಮಾಡಿರಬಹುದು. ಹೀಗಾಗಿ ಇದರ ಹಿಂದೆ ಯಾರು ಯಾರು ಇದ್ದಾರೆ ಎನ್ನುವುದರ ಕುರಿತು ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಇಂದು ಮಧ್ಯಾಹ್ನ ಮುಖ್ಯಮಂತ್ರಿ ಭೇಟಿ ಮಾಡಿ ಈ ಕುರಿತು ಒತ್ತಾಯ ಮಾಡುವೆ. ಸಂತೋಷ್ ಯಾರೂ ಅಂತ ನನಗೆ ಗೊತ್ತಿಲ್ಲ. ನನ್ನ ಭೇಟಿ ಮಾಡಿದ್ದೀನಿ ಅಂತ ಹೇಳಲು ಅವರಿಗೆ ಹೇಳಿಕೊಟ್ಟವರು ಯಾರು?ಹೇಳಿಕೊಡುವಂತೆ ಯಾರು ಹೇಳಿದರು ಅವರಿಗೆ. ಕೇಂದ್ರ ನಾಯಕರನ್ನು ಭೇಟಿ ಮಾಡಿಸಿದ್ದು ಯಾರು ಎಂಬುದು ಗೊತ್ತಾಗಬೇಕು ಎಂದರು.

ಸಂತೋಷ್ ಮೇಲೆ ನನಗೆ ಅನುಮಾನ ಇಲ್ಲ. ಅವರ ಸಾವಿನ ಹಿಂದೆ ಯಾರೋ ಇದ್ದಾರೆ. ಅವರ ಜೊತೆ ಇದ್ದವರು ಯಾರು, ಏನು ಕಥೆ ಎಲ್ಲ ಗೊತ್ತಾಗಬೇಕು ಎಂದು ಹೇಳಿದರು. ಮುಖ್ಯಮಂತ್ರಿಯಾಗಲಿ, ಗೃಹಮಂತ್ರಿಯಾಗಲಿ ನನ್ನ ರಾಜೀನಾಮೆಯನ್ನು ಇದುವರೆಗೂ ಕೇಳಿಲ್ಲ. ಪ್ರಕರಣ ದಾಖಲಾಗಿ ತನಿಖೆ ನಡೆಯಲಿ. ಪ್ರಕರಣ ಮುಚ್ಚಿ ಹಾಕುವ ಪ್ರಶ್ನೆಯೆ ಇಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT