ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ದಸರಾ: ಅರಮನೆಯಲ್ಲಿ ಭರದ ಸಿದ್ಧತೆ, 30ರಂದು ಕುಶಾಲತೋಪು ತಾಲೀಮು

Last Updated 28 ಸೆಪ್ಟೆಂಬರ್ 2021, 2:46 IST
ಅಕ್ಷರ ಗಾತ್ರ

ಮೈಸೂರು: ದಸರಾ ಮಹೋತ್ಸವದ ಪ್ರಧಾನ ಆಕರ್ಷಣೆಗಳಲ್ಲಿ ಒಂದಾದ ಕುಶಾಲತೋಪು ಸಿಡಿಸುವ ತಾಲೀಮು ಸೆ. 30ರಂದು ಬೆಳಿಗ್ಗೆ 11ಕ್ಕೆ ಅರಮನೆ ಆವರಣದಲ್ಲಿ ನಡೆಯಲಿದೆ.

ಕುಶಾಲತೋಪು ಸಿಡಿಸುವ 30 ಮಂದಿ ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಈಗಾಗಲೇ ತಾಲೀಮಿನಲ್ಲಿ ನಿರತರಾಗಿದ್ದು, ಅಂದು ಸಿಡಿಮದ್ದುಗಳನ್ನು ಸಿಡಿಸುವ ಮೂಲಕ ದಸರೆಯ ಸಿದ್ಧತಾ ಕಾರ್ಯಕ್ಕೆ ರಂಗನ್ನು ತುಂಬಲಿದ್ದಾರೆ.

ತಾಲೀಮಿನಲ್ಲಿ ಭಾಗಿಯಾಗುವ ಸಿಬ್ಬಂದಿಗೆ ವಿಮೆ ಮಾಡಿಸುವ ಕಾರ್ಯ ಮಂಗಳವಾರ ಬಹುತೇಕ ಪೂರ್ಣವಾಗಲಿದೆ. ಈಗಾಗಲೇ ಫಿರಂಗಿಗಳೂ ಸಜ್ಜುಗೊಂಡಿವೆ ಎಂದು ನಗರ ಸಶಸ್ತ್ರ ಮೀಸಲು ಪಡೆಯ ಡಿಸಿಪಿ ಶಿವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

7 ಫಿರಂಗಿಗಾಡಿಗಳ ಮೂಲಕ 2 ಸುತ್ತು 14 ಕುಶಾಲತೋಪುಗಳನ್ನು ಸಿಡಿಸುವ ಸಾಧ್ಯತೆ ಇದೆ. ಆ ವೇಳೆ ಗಜಪಡೆ ಹಾಗೂ ಅಶ್ವಪಡೆಯೂ ಇರಲಿವೆ. ಮದ್ದಿನ ವಾಸನಗ್ರಹಣ, ಕಿವಿಗಡಚಿಕ್ಕುವ ಶಬ್ದಕ್ಕೆ ಹೊಂದಿಕೊಳ್ಳುವುದು ಅದರ ಉದ್ದೇಶ. ಇದೇ ಬಗೆಯಲ್ಲಿ ಇನ್ನೆರಡು ಬಾರಿ ತಾಲೀಮು ನಡೆಸಲಾಗುತ್ತದೆ.

ಮರದ ಅಂಬಾರಿಗೆ ಸಮಯ ನಿಗದಿ: ಅ. 1ರಂದು ನಡೆಯಲಿರುವ ಮರದ ಅಂಬಾರಿಯ ತಾಲೀಮಿಗೆ ಸಮಯವನ್ನೂ ಸೋಮವಾರ ನಿಗದಿ ಮಾಡಲಾಯಿತು. ಬೆಳಿಗ್ಗೆ 9.25ರಿಂದ 10.30ರ ಸಮಯದಲ್ಲಿ 280 ಕೆ.ಜಿ ತೂಕದ ಮರದ ಅಂಬಾರಿಯನ್ನು ಹೊತ್ತು ಗಜಪಡೆ ಅರಮನೆ ಆವರಣದಲ್ಲಿ ಹೆಜ್ಜೆ ಹಾಕಲಿವೆ.

ತಾಲೀಮಿನ ನಂತರ ವಿಶ್ರಾಂತಿ: 800 ಕೆ.ಜಿ ತೂಕದ ಮರಳಿನ ಮೂಟೆಯನ್ನು ಹೊರುವ ತಾಲೀಮು ಸೋಮವಾರ ನಡೆಯಿತು. ಮಂಗಳವಾರ ಧನಂಜಯ ಹಾಗೂ ಬುಧವಾರ ಗೋ‍ಪಾಲಸ್ವಾಮಿ ಭಾರ ಹೊತ್ತ ನಂತರ ಆನೆಗಳಿಗೆ ವಿಶ್ರಾಂತಿ ನೀಡಲಾಗುತ್ತದೆ.

ಬಲ್ಬ್‌ ಬದಲಾವಣೆ: ಅರಮನೆಯನ್ನು ಹೊಂಬೆಳಕಿನಿಂದ ಕಂಗೊಳಿಸುವಂತೆ ಮಾಡುವ ವಿದ್ಯುತ್ ಬಲ್ಬ್‌ಗಳ ಬದಲಾವಣೆ ಕಾರ್ಯ ಸೋಮವಾರ ನಡೆಯಿತು. ಬೃಹತ್ ಗಾತ್ರದ ಕ್ರೇನ್‌ನ್ನು ಮೂಲಕ ಉರಿಯದ ಬಲ್ಬ್‌ಗಳನ್ನು ಬದಲಾವಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT