ಗುರುವಾರ , ಮಾರ್ಚ್ 30, 2023
32 °C

ಮೈಸೂರು: ಮಕ್ಕಳ ಹಾಡಿನಿಂದ ರಾಜ್ಯೋತ್ಸವ ಸಂಪನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಅಲ್ಲಿ ಕನ್ನಡವನ್ನೇ ಉಸಿರಾಡುವ ಮಕ್ಕಳಿದ್ದರು. ಅವರನ್ನು ಕನ್ನಡ ಶಾಲೆಗೆ ಕಳಿಸಿದ ಪೋಷಕರಿದ್ದರು. ಕನ್ನಡಾಭಿಮಾನ ಮೂಡಿಸುವ ಶಿಕ್ಷಕರಿದ್ದರು. ಈ ತ್ರಿವಳಿ ಸಂಗಮದಲ್ಲಿ ಕನ್ನಡ ಗೀತೆಗಳ ಗಾಯನದ ಮೂಲಕ ರಾಜ್ಯೋತ್ಸವ ಸಂಪನ್ನವಾಯಿತು.

ನಗರ ಹೊರವಲಯದ ಲಿಂಗಾಂಬುಧಿ ಪಾಳ್ಯದಲ್ಲಿರುವ ಅರಿವು ಕನ್ನಡ ಶಾಲೆಯಲ್ಲಿ ಸೋಮವಾರ ಹೀಗೆ ಕನ್ನಡದ ಸಂಭ್ರಮ ಮನೆ ಮಾಡಿತ್ತು.ಐದು ಆರನೆ ತರಗತಿಯ ಮಕ್ಕಳು, 'ಮರವಾಗಲೆ ಓ‌ ಜೀವವೆ ಮರವಾಗು,
ಭರವಸೆಯಲಿ ನೆರವಾಗು' ಹಾಡಿ ಆರಂಭದಲ್ಲೇ ಸಂಭ್ರಮವನ್ನು ಕಳೆಗಟ್ಟಿಸಿದರು. 'ಗೊರು ಗೊರುಕ ಗೊರುಕನದೊಡ್ಡ ಸಂಪಿಗೆ' ಹಾಡು ಲವಲವಿಕೆಯನ್ನು ಹೆಚ್ಚಿಸಿತು.

ಏಳು ಎಂಟನೆ ತರಗತಿ ಮಕ್ಕಳು ಕನ್ನಡಾಭಿಮಾನ ಕುರಿತ ಸಿನಿಮಾ ಹಾಡುಗಳನ್ನು ಪ್ರಸ್ತುತಪಡಿಸಿದರು.
ಹತ್ತನೇ ತರಗತಿ‌ ಮಕ್ಕಳು, 'ಉಳ್ಳವರು ಶಿವಾಲಯವ ಮಾಡುವರು' ವಚನ,  'ಜೋಗದ ಸಿರಿ ಬೆಳಕಿನಲ್ಲಿ' ಭಾವಗೀತೆ ಹಾಡಿದರು. ನಂತರ, ಪೋಷಕರಾದ ಪ್ರಸಾದ, ಬರ್ಟಿ‌ ಒಲಿವರಾ, ಡಾ.ಮನೋಹರ, ಕಾಜು ಸಾಹೇಬ ಗೀಗಿ ಪದ ಹಾಡಿ ಮಕ್ಕಳಿಂದ ಚಪ್ಪಾಳೆ ಗಿಟ್ಟಿಸಿದರು.

'ಗೋಪಿ ಕೇಳು ನಿನ್ನ ಮಗ ಜಾರ, ಇವ ಚೋರ, ಸುಕುಮಾರ', 'ಕರ್ನಾಟಕ ಬರಿ ನಾಡಲ್ಲ, ನಮ್ಮ ಸಂಸ್ಕೃತಿ ಯ ಧಾತು'  ಗೀತೆಗಳನ್ನು ಹಾಡಿ ಶಿಕ್ಷಕರು ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

ಮೈಸೂರು ಅರಗು ಮತ್ತು ಬಣ್ಣ ಕಾರ್ಖಾನೆಯ ಕಾರ್ಪೊರೆಟ್ ಸಾಮಾಜಿಕ ಜವಾಬ್ದಾರಿ ನಿಧಿಯಲ್ಲಿ ಶಾಲೆಯಲ್ಲಿ ನಿರ್ಮಿಸಿದ ಗ್ರಂಥಾಲಯ ಕಟ್ಟಡವನ್ನು ಸಂಸ್ಥೆಯ ಅಧ್ಯಕ್ಷ ಎನ್.ವಿ.ಫಣೀಶ ಉದ್ಘಾಟಿಸಿದರು. ಅವರಿಗೆ ಶಾಲೆಯು ಕೊಡುಗೆಯಾಗಿ ನೀಡಿದ 'ಬಾಲವನದಲ್ಲಿ ಭಾರ್ಗವ' ಕೃತಿಯ ಕೆಲವು ಸಾಲುಗಳನ್ನು 8ನೇ

ತರಗತಿಯ ಎಂ.ಜಿ.ಶ್ರೀವಿದ್ಯಾ ಓದುವ ಮೂಲಕ ರಾಜ್ಯೋತ್ಸವವನ್ನು ಉದ್ಘಾಟಿಸಿದ್ದು ವಿಶೇಷ.
ಶಾಲೆಯ ಕಾರ್ಯದರ್ಶಿ ಜನಾರ್ದನ, ಕಾರ್ಖಾನೆಯ‌ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ ದೊಡ್ಡಮನಿ, ಪ್ರಧಾನ ವ್ಯವಸ್ಥಾಪಕ ಸಿ.ಹರಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು